
ಪ್ರಗತಿವಾಹಿನಿ ಸುದ್ದಿ: “ನಮ್ಮ ಖಾಲಿ ಚೊಂಬು ಜಾಹೀರಾತಿನಿಂದ ಪ್ರತಿಪಕ್ಷಗಳ ನಾಯಕರು ಎಚ್ಚರಗೊಂಡಿದ್ದಾರೆ. ಬಿಜೆಪಿಯವರು ಜಾಹೀರಾತು ನೀಡಿದ್ದು, ನಮ್ಮ ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಯೋಚನೆ ಮಾಡುವ ಶಕ್ತಿ, ಪ್ರಜ್ಞೆ ಎರಡೂ ಇದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಉತ್ತರಿಸಿದರು.
ಇಂದಿನ ಪತ್ರಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನೀಡಿರುವ ಜಾಹೀರಾತಿನ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಕರ್ನಾಟಕದ ಜನರಿಗೆ ಬಿಜೆಪಿ ಬಹಳ ಅನ್ಯಾಯ ಮಾಡಿದೆ ಎಂದು ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಭಾಷಣ ಮಾಡಿದ್ದರು. 15 ಲಕ್ಷ ಹಣ ಎಷ್ಟು ಜನರ ಖಾತೆಗೆ ಹೋಗಿದೆ, ಎಷ್ಟು ಉದ್ಯೋಗ ಸಿಕ್ಕಿದೆ ಎಂದು ನಾನು, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸಲಿ” ಎಂದು ತಿಳಿಸಿದರು.
ಬಿಜೆಪಿಯವರು ಚಿಪ್ಪು ಅಭಿಯಾನ ಮಾಡುತ್ತಿದ್ದಾರೆ ಎಂದಾಗ “ನಾವು ಚಿಪ್ಪು ಕೊಟ್ಟಿಲ್ಲ. ಕನ್ನಡದ ಬಾವುಟ ಹಿಡಿದು ಹೋರಾಟ ಮಾಡುವವರು ನಾವು, ಕನ್ನಡಿಗರ ಪರವಾಗಿ ನಮ್ಮ ತೆರಿಗೆ, ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ” ಎಂದರು.
ದೇಶದಲ್ಲಿ ಎಲ್ಲರೂ ಸಮಾನರು ಎಂಬ ಅರಿವು ಪ್ರಧಾನಿಗಳಿಗೆ ಇರಬೇಕು
ಮುಸ್ಲಿಂ ತುಷ್ಠೀಕರಣದ ರಾಜಕಾರಣ ನಡೆಯುತ್ತಿದೆ ಎಂದು ಕೇಳಿದಾಗ “ಮಾನ್ಯ ಪ್ರಧಾನಿಗಳು ಈ ದೇಶದ ಮಹತ್ವದ ಹುದ್ದೆಯಲ್ಲಿ ಕುಳಿತಿರುವವರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಈ ದೇಶದ ಎಲ್ಲಾ ನಾಗರಿಕರು ಸಮಾನರು ಎನ್ನುವ ಅರಿವು ಇರಬೇಕು. ಬೇಧ, ಭಾವ ಮಾಡುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಇದು ಇಡೀ ದೇಶ ಮತ್ತು ಪ್ರಪಂಚಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ” ಎಂದರು.
ಮುಸ್ಲಿಮರಿಗೆ ಬಿಜೆಪಿಯಿಂದ ಮಾನಸಿಕ ಹಿಂಸೆ
“ನಮ್ಮದು ಸರ್ವ ಜನಾಂಗದ ತೋಟ. ಮುಸ್ಲಿಂ ಧರ್ಮಿಯರಿಗೆ ಚಿತ್ರಹಿಂಸೆ ನೀಡಿ ಈ ದೇಶ ಬಿಟ್ಟು ಹೋಗಬೇಕು ಎನ್ನುವಂತಹ ವಾತಾವರಣ ಬಿಜೆಪಿ ನಿರ್ಮಾಣ ಮಾಡುತ್ತಿದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿದ್ದೇವೆ. ಆದ ಕಾರಣ ಯಾವುದೇ ಅಪರಾಧ ಪ್ರಕರಣ ನಡೆದರೂ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ” ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದಾಗ “ಪಾಪಾ ಅವರುಗಳು ಯಾವ ಕೆಲಸವನ್ನೂ ಮಾಡಿಲ್ಲವಲ್ಲ ಅದಕ್ಕೆ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಫೇಲ್ ಆಯಿತು. ಈಗ ದೊಡ್ಡ ಎಂಜಿನ್ ಕೂಡ ಫೇಲ್ ಆಗುತ್ತದೆ” ಎಂದು ವ್ಯಂಗ್ಯವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ