*ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*

ಟನಲ್ ರಸ್ತೆ ಬಗ್ಗೆ ನ್ಯಾಯಾಲಯವೇ ಸಮಿತಿ ರಚಿಸಿ ಪರಿಶೀಲನೆ ಮಾಡಿಸಲಿ
ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಸಂಸದ ತೇಜಸ್ವಿ ಸೂರ್ಯ ಅವರ ಭೇಟಿ ಬಗ್ಗೆ ಕೇಳಿದಾಗ, “ತೇಜಸ್ವಿ ಸೂರ್ಯ ಅವರು ಕೆಲವು ಸಲಹೆ ನೀಡಿದ್ದಾರೆ. ಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ಕೂಡ ವಿಸ್ತರಿಸಬೇಕು ಎಂದು ಹೇಳುತ್ತಿದ್ದಾರೆ. ಇಲ್ಲಿ ಮೆಟ್ರೋ ಸೇರಿಸಲು ನಮ್ಮ ತಕರಾರು ಇಲ್ಲ. ಇದರ ಜೊತೆಗೆ ಅವರು ನೀಡಿರುವ ಇತರೆ ಸಲಹೆಗಳನ್ನು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇನ್ನು ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳು, ಸಣ್ಣ ಬಸ್ ಗಳಿಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರು ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಖಾಸಗಿ ಬಸ್ ಗಳಿಗೆ ಅವಕಾಶ ನೀಡಿದರೆ ಏನು ಉಪಯೋಗ ಎಂದು ಚರ್ಚೆ ಮಾಡಬೇಕಿದೆ” ಎಂದರು.
ಸಂಸದರು ಬನ್ನಿ, ಪ್ರಧಾನಿ ಭೇಟಿ ಮಾಡಿ ಅನುದಾನ ಕೇಳೋಣ:
“ಅವರು ಬಿಎಂಎಲ್ ಟಿ ಮಾಡಬೇಕು ಎಂದು ಹೇಳಿದರು. ಆಗ ನಾನು ನಿಮ್ಮ ಕಾಲದಲ್ಲಿ ಯಾಕೆ ಮಾಡಲಿಲ್ಲ ಎಂದು ಕೇಳಿದೆ? ಅದಕ್ಕೆ ಅವರು ಆಗ ಆಗಲಿಲ್ಲ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಕೇಳಿದೆ. ನಿಮ್ಮ ಸಂಸದರೆಲ್ಲ ಬನ್ನಿ, ನಾನು ಕೂಡ ಬರುತ್ತೇನೆ. ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕೆ ಒತ್ತಾಯ ಮಾಡೋಣ ಎಂದು ಹೇಳಿದೆ” ಎಂದರು.
ಲಾಲ್ ಬಾಗ್ ನಲ್ಲಿ ಟನಲ್ ರಸ್ತೆಗೆ ಆರು ಎಕರೆ ಸ್ವಾಧೀನವಿಲ್ಲ
“ಇನ್ನು ಟನಲ್ ರಸ್ತೆಗೆ ಲಾಲ್ ಬಾಗ್ ನಲ್ಲಿ ಆರು ಎಕರೆ ಭೂಮಿಯನ್ನು ಬಳಸಿಕೊಳ್ಳುವುದಿಲ್ಲ. ಲಾಲ್ ಬಾಗ್ನ ಮೂಲೆಯಲ್ಲಿ ಟನಲ್ ರಸ್ತೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು. ಇಲ್ಲಿ ಬೇಡ ಎಂದರೆ, ಬೇರೆ ಎಲ್ಲಿ ಇದಕ್ಕೆ ಅವಕಾಶ ಕಲ್ಪಿಸಬಹುದು, ನೀವೇ ಸಲಹೆ ನೀಡಿ ಎಂದು ಕೇಳಿದೆ. ಅದಕ್ಕೆ ಅವರು ಎಲ್ಲಾ ದೇಶಗಳಲ್ಲೂ ಟನಲ್ ರಸ್ತೆ ಬೇಡ ಎನ್ನುತ್ತಿದ್ದಾರೆ ಎಂದರು. ಅದಕ್ಕೆ ನಾನು, ನೀವು ಒಬ್ಬರು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಹೇಳಿದೆ. ಒಆರ್ ಆರ್ ನಲ್ಲಿ 70% ಸಾರ್ವಜನಿಕ ಸಾರಿಗೆ, ಬಿಟಿಆರ್ಎಸ್ ಮಾಡಬೇಕು ಎಂದು ಹೇಳಿದರು. ಸಬ್ ಅರ್ಬನ್ ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಹೇಳಿದರು. ಅದಕ್ಕೆ ಸರಿ, ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳೋಣ. ಸೋಮಣ್ಣ ಅವರ ಜೊತೆ ಚರ್ಚೆ ಮಾಡೋಣ. ಹಣ ಕೊಟ್ಟರೆ ಮಾಡೋಣ. ಇದುವರೆಗೂ ಕೇಂದ್ರ ಸರ್ಕಾರ ಹಣ ನೀಡದ ಕಾರಣ, ಒಂದು ರೈಲನ್ನೂ ಸೇರಿಸಿಲ್ಲ. ಎಲ್ಲಕ್ಕೂ ನಮ್ಮ ಮೇಲೆ ಅವಲಂಬಿತವಾದರೆ ಹೇಗೆ? ಕೇವಲ ಸಲಹೆ ಮಾತ್ರವಲ್ಲ, ಇದಕ್ಕೆ ಪೂರಕವಾಗಿ ಹಣವನ್ನು ತನ್ನಿ ಎಂದು ಹೇಳಿದ್ದೇನೆ” ಎಂದರು.
ತಮ್ಮ ಕ್ಷೇತ್ರದ ಜನರಿಗೆ ಕೇವಲ ಸಾರ್ವಜನಿಕ ಸಾರಿಗೆ ಬಳಸಲು ಕರೆ ನೀಡಲಿ
ಸಾರ್ವಜನಿಕ ಸಾರಿಗೆ ಮಾಡಿದರೆ ಖಾಸಗಿ ವಾಹನ ಕಡಿಮೆಯಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಈಗ ನೀವು ಇಲ್ಲಿಗೆ ಬರುವಾಗ ನಿಮ್ಮ ವಾಹನ ತಂದಿದ್ದೀರಿ. ನೀವು ನಿಮ್ಮ ವಾಹನ ತರುವುದನ್ನು ನಾನು ತಡೆಯಲು ಆಗುತ್ತದೆಯೇ? ಇದು ಸಾಮಾಜಿಕ ಬಾಧ್ಯತೆ. ಜನ ತಮ್ಮ ವಾಹನದಲ್ಲೇ ತಾವು, ತಮ್ಮ ಮನೆಯವರು ಪ್ರಯಾಣ ಮಾಡಬೇಕು ಎಂದು ಬಯಸುತ್ತಾರೆ. ನಾವು ಅವರಿಗೆ ನಿಮ್ಮ ವಾಹನ ತರಬೇಡಿ ಎಂದು ತಡೆಯಲು ಆಗುತ್ತದೆಯೇ? ಬೇಕಿದ್ದರೆ ಸಂಸದರು ತಮ್ಮ ಕ್ಷೇತ್ರದ ಜನರಿಗೆ, ನೀವು ನಿಮ್ಮ ಕಾರುಗಳನ್ನು ಮನೆಯಲ್ಲೇ ನಿಲ್ಲಿಸಿ, ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡಿ ಕರೆ ನೀಡಲಿ. ಆಗ ಯಾರು ಪಾಲನೆ ಮಾಡುತ್ತಾರೆ ನೋಡೋಣ? ಕಾರಿಲ್ಲದ ಹುಡುಗನ ಮನೆಗೆ ಹೆಣ್ಣು ನೀಡಲು ಹಿಂದೇಟು ಹಾಕುತ್ತಾರೆ. ಇಂತಹ ಸಾಮಾಜಿಕ ಬಾಧ್ಯತೆಗಳ ಬಗ್ಗೆ ಸಂಸದರಿಗೆ ಅರಿವಿಲ್ಲ” ಎಂದು ತಿಳಿಸಿದರು.
ನ್ಯಾಯಾಲಯವೇ ಸಮಿತಿ ರಚಿಸಿ, ಟನಲ್ ರಸ್ತೆ ಸ್ಥಳ ಪರಿಶೀಲನೆ ಮಾಡಲಿ
ಒಂದು ಕಡೆ ನಿಮ್ಮನ್ನು ಭೇಟಿ ಮಾಡುತ್ತಾರೆ, ಮತ್ತೊಂದೆಡೆ ಪಿಐಎಲ್ ಸಲ್ಲಿಸಿದ್ದಾರೆ. ಇಂತಹ ಇಬ್ಬಗೆ ನೀತಿ ಯಾಕೆ ಎಂದು ಕೇಳಿದಾಗ, “ಅವರು ಏನಾದರೂ ಪಿಐಎಲ್ ಹಾಕಿಕೊಳ್ಳಲಿ. ಬೇಕಿದ್ದರೆ ನ್ಯಾಯಾಲಯವೇ ಸಮಿತಿ ರಚಿಸಿ ಎಲ್ಲಾ ಸ್ಥಳಗಳನ್ನು ಪರಿಶೀಲಿಸಲಿ. ನಾನು ಅಥವಾ ನಮ್ಮ ಅಧಿಕಾರಿಗಳು ಏನಾದರೂ ತಪ್ಪು ಮಾಡಿದ್ದರೆ ತಿಳಿಸಲಿ. ಅದನ್ನು ಸರಿಪಡಿಸಿಕೊಳ್ಳಲು ಸಿದ್ಧರಿದ್ದೇವೆ” ಎಂದರು.
ಸಲಹೆ ಎಲ್ಲರೂ ನೀಡುತ್ತಾರೆ, ಹಣ ಕೊಡುವವರು ಯಾರು?
ಈ ಹಿಂದೆ ನೀವು ಖಾಲಿ ಟ್ರಂಕ್ ಎಂದು ಹೇಳಿದ್ದೀರಿ ಎಂದು ಕೇಳಿದಾಗ, “ಹಣದ ವಿಚಾರದಲ್ಲಿ ಖಾಲಿ ಟ್ರಂಕ್ ಎಂದು ಹೇಳಿದೆ. ಯಾವುದೇ ಯೋಜನೆ ಮಾಡಬೇಕಾದರೂ ಹಣ ಬೇಕು. ಕೇವಲ ಟ್ವೀಟ್, ಟೀಕೆಗಳಿಂದ ಪರಿಹಾರ ಸಿಗುವುದಿಲ್ಲ. ಪ್ರಧಾನಮಂತ್ರಿಗಳಿಂದ ಹಣ ಕೊಡಿಸಲಿ. ಸಲಹೆಗಳನ್ನು ಯಾರು ಬೇಕಾದರೂ, ಎಷ್ಟು ಬೇಕಾದರೂ ನೀಡುತ್ತಾರೆ. ಟನಲ್ ಬೇಡ ಎನ್ನುತ್ತೀರಿ, ಕಟ್ಟಡ ಕೆಡವಬಾರದು ಎನ್ನುತ್ತೀರಿ, ನಾವು ಹೆಚ್ಚು ಬಸ್ ಬಿಟ್ಟರೆ ಎಷ್ಟು ಜನ ಓಡಾಡುತ್ತಾರೆ. ಎಲ್ಲಾ ಕಡೆಗೂ ಮೆಟ್ರೋ ಕಲ್ಪಿಸಲು ಆಗುತ್ತದೆಯೇ?” ಎಂದು ತಿಳಿಸಿದರು.
8-10 ದಿನಗಳಲ್ಲಿ ಪರಿಷತ್ ಚುನಾವಣೆ ಅಭ್ಯರ್ಥಿ ಹೆಸರು ಅಂತಿಮ
ಪರಿಷತ್ ಚುನಾವಣೆ ಸಂಬಂಧ ನಡೆದ ಪೂರ್ವಭಾವಿ ಸಭೆ ಬಗ್ಗೆ ಕೇಳಿದಾಗ, “ಮುಂದಿನ ವರ್ಷ ನಡೆಯಲಿರುವ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗೆ ಮುಂದಿನ 8-10 ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಪೂರ್ವಭಾವಿ ಸಭೆ ನಡೆಸಿದ್ದೇವೆ. ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜೊತೆ ಚರ್ಚೆ ಮಾಡಿ ನಂತರ ನಾನು ದೆಹಲಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುತ್ತೇನೆ” ಎಂದು ಮಾಹಿತಿ ನೀಡಿದರು.


