
ಅವರ ಹೋರಾಟದಿಂದ ನಮ್ಮ ಯೋಜನೆಗೆ ಪ್ರಚಾರ ಸಿಗುತ್ತೆ ಎಂದು ಟಾಂಗ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವು ಜನರಿಗೆ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ. ಈಗ 5 ಕೆ.ಜಿ ಅಕ್ಕಿ ಹಾಗೂ ಹೆಚ್ಚುವರಿ ಅಕ್ಕಿ ಸಿಗುವವರೆಗೂ ಅದಕ್ಕೆ ಪ್ರತಿಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಖರೀದಿಗೆ ನಮ್ಮ ಸಚಿವರು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಕಿ ಸಿಗುವವರೆಗೂ ಬೇರೆ ಪಕ್ಷಗಳ ಸಲಹೆಯಂತೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರಂಭದಲ್ಲಿ ಹಣ ನೀಡಿ ಎಂದ ಬಿಜೆಪಿ ನಾಯಕರು ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಿ ಎಂದು ಹೇಳುತ್ತಿರುವ ಬಗ್ಗೆ ಕೇಳಿದಾಗ, “ಇದರಿಂದ ಅವರ ಇಬ್ಬಗೆಯ ನೀತಿ ಗೊತ್ತಾಗುತ್ತಿದೆ” ಎಂದರು.
ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಪ್ರತಿಭಟನೆ ಮಾಡಬೇಕು. ನಾವು ಅವರನ್ನು ತಡೆಯುವುದಿಲ್ಲ. ಬಿಜೆಪಿಯವರು ಕೊಟ್ಟ ಮಾತು ಈಡೇರದೇ ಇರುವುದರ ಬಗ್ಗೆ ಹೋರಾಟ ಮಾಡಲು ಹೇಳಿದ್ದೇನೆ. ಅವರು ಹೋರಾಟದ ಮೂಲಕ ನಮ್ಮ ಯೋಜನೆಗೆ ಪ್ರಚಾರ ನೀಡುತ್ತಿದ್ದಾರೆ.
ಬಿಜೆಪಿ ಬಡವರ ಮೇಲೆ ಹೇಗೆ ಗದಾಪ್ರಹಾರ ಮಾಡುತ್ತಿದೆ, ಅಕ್ಕಿ ವಿಚಾರದಲ್ಲೂ ಅವರು ಹೇಗೆ ರಾಜಕೀಯ ಮಾಡುತ್ತಿದ್ದಾರೆ, ನಾವು ಜನರಿಗೆ ಅಕ್ಕಿ ನೀಡಲು ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಗೋದಾಮಿನಲ್ಲಿ ಅಕ್ಕಿ ಹುಳ ಹಿಡಿಯುತ್ತಿದ್ದರು ಬಡವರಿಗೆ ನೀಡದೆ ರಾಜಕಾರಣ ಮಾಡುತ್ತಿದ್ದಾರೆ. ಇದೆಲ್ಲವೂ ಜನರಿಗೆ ಗೊತ್ತಿದೆ.
ನಾವು ದೀರ್ಘಾವಧಿ ಪರಿಹಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ನಿಗದಿ ಮಾಡಿರುವ ಮೊತ್ತಕ್ಕೆ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಅಕ್ಕಿ ಬೆಳೆದು ಈ ಮೊತ್ತಕ್ಕೆ ನೀಡಿದರೆ ಅವರಿಗೂ ಪ್ರೋತ್ಸಾಹ ನೀಡುತ್ತೇವೆ. ನಮಗೆ ಕೆಲ ರಾಜ್ಯದವರು ಒಂದೆರಡು ತಿಂಗಳು ಅಕ್ಕಿ ಪೂರೈಸಲು ಮುಂದಾಗಿದ್ದರು. ನಮಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಬೇಕು. ನಾವು ಆರಂಭದಲ್ಲಿ ಅಕ್ಕಿ ನೀಡಿ ನಂತರ ಅದನ್ನು ನಿಲ್ಲಿಸುವಂತೆ ಆಗಬಾರದು. ಹೀಗಾಗಿ ಬಿಜೆಪಿ ನಾಯಕರು ಕೊಟ್ಟಿರುವ ಸಲಹೆಯಂತೆ ಈಗ ಹಣ ನೀಡಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ಬಗ್ಗೆ ಕ್ರಮ ಜರುಗಿಸುವಂತೆ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಕೇಳಿದಾಗ, “ಚುನಾವಣೆ ಸಮಯದಲ್ಲಿ ಯಾರು ಶಿಸ್ತು ಉಲ್ಲಂಘಿಸಿದ್ದಾರೆ ಅವರ ವಿರುದ್ಧ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದರು.
ನೀರು ಹಂಚಿಕೆ ಬಗ್ಗೆ ಕೇಳಿದಾಗ, “ನಮಗೆ ಜಗಳ ಮಾಡಲು ಇಷ್ಟ ಇಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಈ ವಿಚಾರವಾಗಿ ವಾಸ್ತವಾಂಶ ಗೊತ್ತಿಲ್ಲ ಎಂದು ಭಾವಿಸುತ್ತೇನೆ. ಅವರು ನಮ್ಮ ಸಹೋದರರು. ನಾವು ಯುದ್ಧ ಮಾಡಲು ಆಗುವುದಿಲ್ಲ. ಹೀಗಾಗಿ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು” ಎಂದರು.
ಬಿಜೆಪಿ ಆಂತರಿಕ ಕಚ್ಚಾಟದ ಬಗ್ಗೆ ಕೇಳಿದಾಗ, “ಬಿಜೆಪಿಯವರ ಬಾಯಿಗೆ ನಾವು ಹಿಂದೆಯೂ ಬೀಗ ಹಾಕಿಲ್ಲ. ಈಗಲೂ ಹಾಕುವುದಿಲ್ಲ. ಅವರ ಅನುಭವ, ನುಡಿಮುತ್ತುಗಳನ್ನು ಜನರಿಗೆ ತಿಳಿಸುತ್ತಿದ್ದಾರೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ