
ಪ್ರಗತಿವಾಹಿನಿ ಸುದ್ದಿ: ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆ ಕೋರಿದ್ದಾರೆ.
ವಿಧಾನಸಭೆ ಕಲಾಪದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಆರ್ ಎಸ್ ಎಸ್ ಪ್ರಾರ್ಥನೆ ನಮಸ್ತೆ ಸದಾ ವತ್ಸಲೇ ಮಾತೃಭೂಮಿ…. ಎಂಬ ಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದಿದ್ದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ಅಲ್ಲದೇ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು. ಅವರು ಡಿಸಿಎಂ ಆಗಿ ಆರ್ ಎಸ್ ಎಸ್ ಗೀತೆ ಹೇಳಿದ್ದರೆ ತಪ್ಪಲ್ಲ, ಆದರೆ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಸದನದಲ್ಲಿ ಈ ಗೀತೆ ಹಾಡಿದ್ದು ತಪ್ಪು ಎಂದಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿದ್ದಾರೆ. ನಾನು ಆರ್ ಎಸ್ ಎಸ್ ಗೀತೆ ಹೇಳಿದ್ದಕ್ಕೆ ನೋವಾಗಿದ್ದಕ್ಕೆ ಕಾರ್ಯಕರ್ತರ ಕ್ಷಮೆ ಕೇಳುತ್ತೇನೆ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನಗಿಲ್ಲ. ಹಿರಿಯ ನಾಯಕರು ನನಗೆ ಸಲಹೆ ನೀಡಿದರು. ನಾನು ಅವರಿಗಿಂತ ದೊಡ್ದವನಲ್ಲ. ಎಲ್ಲರ ಕಷ್ಟಕಾಲದಲ್ಲಿ ನಿಲ್ಲುವುದು ನನ್ನ ಕೆಲಸ. ಹಾಗಾಗಿ ಕ್ಷಮೆ ಕೇಳುತ್ತೇನೆ ಎಂದರು.
ನನ್ನ ನಿಷ್ಠೆ ಬಗ್ಗೆ ಅನುಮಾನಪಡುವವರು ಮೂರ್ಖರು. ಪಕ್ಷದ ಬಗ್ಗೆ ನನಗಿರುವ ನಿಷ್ಠೆ ಪ್ರಶ್ನೆಮಾಡುವವರು ನನ್ನ ಬಳಿಯೂ ಬರಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೆ ನಾನು ಹೋರಾಟದಿಂದಲೆ ಬಂದಿದ್ದೇನೆ. ಹಿರಯರ ಬಗ್ಗೆ ಹೇಳುತ್ತಿಲ್ಲ. ನನ್ನ ವಯಸ್ಸಿನವರ ಬಗ್ಗೆ ಹೇಳುತ್ತಿದ್ದೇನೆ. ಪಕ್ಷದ ಬಗ್ಗೆ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವವರು ನನ್ನ ಬಳಿಯೂ ಬರಲು ಆಗಲ್ಲ ಎಂದರು.