ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂಬ ಆರೋಗ್ಯ ಸಚಿವ ಬಿ.ಶ್ರೀರಾಮು ಹೇಳಿಕೆಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಒಬ್ಬ ಸಚಿವರು ದೇವರ ಮೇಲೆ ಭಾರ ಹಾಕುತ್ತಾರೆ. ಮತ್ತೊಬ್ಬ ಸಚಿವರನ್ನು ಭೇಟಿ ಮಾಡಿದರೆ ದೇವರ ಕಥೆ ಹೇಳುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಚಿವರ ಹೇಳಿಕೆ ಇಡೀ ರಾಜ್ಯವನ್ನು ತಲ್ಲಣಗೊಳಿಸುತ್ತಿದೆ. ಅಧಿಕಾರ ಬೇಕು ಎಂದು ಬಹಳ ಶ್ರಮಪಟ್ಟು ಅಧಿಕಾರಕ್ಕೆ ಬಂದ ಬಿಜೆಪಿಯವರು ನಮ್ಮಿಂದ ಏನೂ ಮಾಡಲು ಆಗಲ್ಲ ಅಂತ ಹೇಳುತ್ತಿದ್ದಾರೆ. ಇದು ಶ್ರೀರಾಮುಲು ಅವರ ವೈಯಕ್ತಿಕ ಹೇಳಿಕೆ ಅಲ್ಲ, ಸರ್ಕಾರದ ಸ್ಥಿತಿಯನ್ನು ಸಚಿವರು ಬಹಿರಂಗವಾಗಿ ಹೇಳಿದ್ದಾರೆ. ಕೂಡಲೇ ರಾಜೀನಾಮೆ ನೀಡಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬರಲಿ ಎಂದು ಆಗ್ರಹಿಸಿದರು.
ಜನರ ಆರೋಗ್ಯ ರಕ್ಷಣೆ ಮಾಡಲು ನಿಮ್ಮಿಂದ ಸಾಧ್ಯವಾಗಲ್ಲ ಎನ್ನುವುದಾದರೆ ರಾಜೀನಾಮೆ ನೀಡಿ ಹೊರಡಿ. ರಾಜ್ಯದಲ್ಲಿ ರಾಜ್ಯಪಾಲ ಆಳ್ವಿಕೆ ಬರಲಿ. ರಾಜ್ಯ ಸರ್ಕಾರ ಕೊರೊನಾ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದ್ದಾರೆ.
ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ?, ಇಂದು ಭಗವಂತ ಒಬ್ಬನೇ ಕೊರೊನಾ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಬರಬೇಕು ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ