*ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು: ವಿದ್ಯಾರ್ಥಿಗಳಿಗೆ ಡಿಸಿಎಂ ಕಿವಿಮಾತು*
ಪ್ರಗತಿವಾಹಿನಿ ಸುದ್ದಿ: “ಈಗಿನ ಮಕ್ಕಳು ಮಾಹಿತಿ ತಂತ್ರಜ್ಞಾನ ಯುಗದಲ್ಲಿದ್ದಾರೆ. ಅವರ ಕೈ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ಸಿಗಲಿದೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನಕಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕನಕಪುರವಲ್ಲ ಬೆಂಗಳೂರಿನವರು ನೀವು
“ಇಲ್ಲಿ 15-20 ವರ್ಷದ ಮಕ್ಕಳಿದ್ದೀರಿ. ನೀವು ವಿದ್ಯಾವಂತರು, ಪ್ರಜ್ಞಾವಂತರು. ನೀವು ಕೇವಲ ಕನಕಪುರದ ವಿದ್ಯಾರ್ಥಿಗಳಲ್ಲ. ನೀವು ಕೂಡ ಬೆಂಗಳೂರು ಜಿಲ್ಲೆಯ ಮಕ್ಕಳು. ಇದು ಬೆಂಗಳೂರು ಜಿಲ್ಲೆ. ಕಾರಣಾಂತರದಿಂದ ಬೇರೆ ಹೆಸರು ಬಂದಿದೆ. ನೀವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೂ ಜಾಗತಿಕ ಮಟ್ಟದ ಮಕ್ಕಳ ಜತೆ ಸ್ಪರ್ಧಿಸಲು ಪರಿಶ್ರಮ ಹಾಕಬೇಕು. ಕನಕಪುರ ಯಾವ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾನು ಈಗ ಹೇಳುವುದಿಲ್ಲ. ಹೇಳಿದರೆ ಅದನ್ನು ಬೇರೆ ರೀತಿ ಬಿಂಬಿಸಲಾಗುತ್ತದೆ” ಎಂದು ತಿಳಿಸಿದರು.
ನಿಮ್ಮ ಮೂಲ ಮರೆಯಬಾರದು
“ನೀವು ಯಾವುದೇ ಕ್ಷೇತ್ರ ಆಯ್ಕೆಮಾಡಿಕೊಂಡರೂ ನಿಮ್ಮ ಗುರಿ ಆ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತೆ ಇರಬೇಕು. ನಿಮ್ಮ ಶಿಕ್ಷಕರು, ಪೋಷಕರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಗಮನದಲ್ಲಿಟ್ಟುಕೊಂಡು ಪ್ರಯತ್ನ ಮಾಡಬೇಕು. ಯಾವುದೇ ಸಾಧನೆ ಅಸಾಧ್ಯವಲ್ಲ. ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದರು. ಕೇವಲ ಕೆಲಸಕ್ಕೆ ಸೇರಬೇಕು ಎಂದು ಗುರಿ ಇಟ್ಟುಕೊಳ್ಳಬೇಡಿ. ನೀವು ಬೇರೆಯವರಿಗೆ ಕೆಲಸ ಕೊಡುವಂತೆ ಆಗಬೇಕು” ಎಂದು ತಿಳಿಸಿದರು.
“ನೀವು ನಿಮ್ಮ ಮೂಲವನ್ನು ಮರೆಯಬೇಡಿ. ಶಿಕ್ಷಕರು, ಪೋಷಕರೇ ನಿಮ್ಮ ಮೂಲ. ಎಷ್ಟೇ ಕಷ್ಟವಿದ್ದರೂ ಅವರು ನಿಮಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ನೀವು ಕನಸು ಕಾಣಬೇಕು. ಕನಸು ನನಸಾಗಿಸಲು ಹಂಬಲ ಹೊಂದಿರಬೇಕು, ಅದಕ್ಕಾಗಿ ಪರಿಶ್ರಮ ಹಾಗೂ ಬದ್ಧತೆ ಹೊಂದಿರಬೇಕು” ಎಂದು ತಿಳಿಸಿದರು.
ಕನಕಪುರ ಅಂದು- ಇಂದು ಚಿತ್ರ ತಯಾರು
“ನಾನು ಇಲ್ಲಿನ ಶಾಸಕನಾದಾಗ ಕನಕಪುರ, ಇಲ್ಲಿನ ರಸ್ತೆಗಳು ಹೇಗಿತ್ತು, ಈಗ ಹೇಗೆ ಆಗಿದೆ ಎಂಬುದರ ಬಗ್ಗೆ ಒಂದು ಚಿತ್ರ ರಚಿಸಲಾಗಿದೆ. ಕನಕಪುರ ತಾಲೂರು ಕರಿಯಪ್ಪನವರ ಕಾಲದಿಂದಲೂ ವಿದ್ಯಾ ಕ್ಷೇತ್ರದಲ್ಲಿ ಹೆಸರುವಾಸಿ. ಹಾಸನ, ಮೈಸೂರು, ಬೆಂಗಳೂರಿನಿಂದ ಮಕ್ಕಳು ಬಂದು ಓದುತ್ತಿದ್ದರು. ಕನಕಪುರ- ಬೆಂಗಳೂರು ರಸ್ತೆ ಎಜುಕೇಶನ್ ಕಾರಿಡಾರ್ ಆಗುತ್ತಿದೆ. ದಯಾನಂದ ಸಾಗರ್, ಜೈನ್ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳು ಇಲ್ಲಿವೆ. ಸುರೇಶ್ ಅವರು ಸಾಕಷ್ಟು ಪರಿಶ್ರಮ ಪಟ್ಟಿ ಈ ಭಾಗದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 300 ವಿದ್ಯಾರ್ಥಿಗಳಂತೆ ಈಗ 4 ಸಾವಿರ ನೆರವು ನೀಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ನಾವು ಪ್ರತಿ ವರ್ಷ ಕನಕೋತ್ಸವ ಮಾಡಿ ಅನೇಕ ಕಾರ್ಯಕ್ರಮ ಮಾಡಲಾಗುತ್ತಿದೆ. ನಿಮ್ಮ ಪೋಷಕರು ನನಗೆ ಆಶೀರ್ವಾದ ಮಾಡಿದ್ದು, ನಾನು ರಾಜ್ಯಕ್ಕೆ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ. ನನ್ನ ಡಿಸಿಎಂ ಹುದ್ದೆ ವಿಧಾನಸೌಧದಲ್ಲಿ ಮಾತ್ರ. ನಾನು ಇಲ್ಲಿನ ಪ್ರತಿನಿಧಿ. ನೀವು ನಮ್ಮ ಮನೆ ಮಕ್ಕಳು.” ಎಂದು ತಿಳಿಸಿದರು.
“ಇಲ್ಲಿ ಹಚ್ಚಿರುವ ಜ್ಯೋತಿ ನಿಮ್ಮ ಬದುಕು ಬೆಳಗಿಸುವ ಜ್ಯೋತಿ. ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನಸಂಪದ, ಜ್ಞಾನಶಕ್ತಿ ಸ್ವರೂಪಸ್ಯ ದೀಪಜ್ಯೋತಿ-ಪ್ರಕಾಶಿತಃ. ಎಲ್ಲರಿಗೂ ಶುಭವಾಗಲಿ, ನಿಮ್ಮ ಬದುಕು ಕತ್ತಲೆಯಿಂದ ಬೆಳಕಿನತ್ತ ಸಾಗಲಿ ಎಂದು ಶುಭ ಹಾರೈಸುತ್ತೇನೆ” ಎಂದು ತಿಳಿಸಿದರು.
ನಿಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಿ
“ಕನಕಪುರದಲ್ಲಿರುವ ಡೈರಿ, ಇಡೀ ದೇಶದಲ್ಲಿ ಇಲ್ಲ. ನೀವು ಅಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ. ಒಂದು ಲೀಟರ್ ಹಾಲಿಗಿಂತ, ಒಂದು ಲೀಟರ್ ನೀರಿಗೆ ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ಇದೆ. ನೋಬಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಎಂಬುವವರು ಒಂದು ಮಾತು ಹೇಳಿದ್ದಾರೆ. ನೀವು ಒಬ್ಬ ವ್ಯಕ್ತಿಗೆ ಮೀನನ್ನು ಊಟವಾಗಿ ನೀಡಿದರೆ ಅದು ಒಂದು ದಿನಕ್ಕೆ ಸೀಮಿತವಾಗುತ್ತದೆ. ಆದರೆ ಮೀನುಗಾರಿಕೆಯನ್ನು ಕಲಿಸಿಕೊಟ್ಟರೆ ಅದು ಅವನ ಜೀವನ ಪೂರ್ತಿ ಆತನಿಗೆ ಊಟ ತಯಾರಿಸುವ ಸಾಮರ್ಥ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ನೀವು ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದರ ಮೇಲೆ ನಿಮ್ಮ ಜೀವನ ರೂಪಿಸಿಕೊಳ್ಳಿ” ಎಂದರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ