*ಸರ್ಕಾರಿ ಶಾಲೆ ದತ್ತು ಪಡೆಯುವಂತೆ ಮಗಳಿಗೆ ಸೂಚಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್*

10 ಸಾವಿರ ಕೋಟಿ ಸಿಎಸ್ಆರ್ ಹಣ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆ
ಪ್ರಗತಿವಾಹಿನಿ ಸುದ್ದಿ: “ಇತಿಹಾಸದ ಪಾಠ ಕಲಿಸುವ ಕೆಲಸವಷ್ಟೇ ಆಗಬಾರದು, ಇತಿಹಾಸ ಸೃಷ್ಟಿಸುವಂತೆ ಮಕ್ಕಳನ್ನು ತಯಾರು ಮಾಡಿ. ನೀವು ಶಾಲೆಗೆ ಬರುವ ಮಕ್ಕಳನ್ನು ಮಾತ್ರ ಬೆಳೆಸುತ್ತಿಲ್ಲ. ಸಮಾಜವನ್ನೇ ಬೆಳೆಸುತ್ತಿದ್ದೀರಿ. ನೀವು ಪಾಠ ಹೇಳಿಕೊಟ್ಟ ಮಕ್ಕಳು ಎತ್ತರಕ್ಕೆ ಬೆಳೆದಾಗ ನಿಮಗೆ ಆಗುವ ಸಂತೋಷ ಬೇರೆ ಯಾವ ಸಮಯದಲ್ಲೂ ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಈ ನಾಡಿದ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಅವರನ್ನು ಓಡುವ ಕುದುರೆಗಳಂತೆ ತಯಾರು ಮಾಡಬೇಕು. ಬೆಂಗಳೂರಿನಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಪ್ರತಿಯೊಂದು ಶಾಲೆಯಲ್ಲೂ ದೊರೆಯುವಂತೆ ಶಿಕ್ಷಕರು ಶ್ರಮಿಸಬೇಕು” ಎಂದರು.
“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ನಾನು ಶಾಲಾ ಕಾರ್ಯಕ್ರಮಕ್ಕೆ ಹೋದರೆ ಮಕ್ಕಳಿಗೆ ಒಂದು ಮಾತು ಹೇಳುತ್ತೇನೆ. ನೀವು ಕನಸು ಕಾಣಬೇಕು. ಅದನ್ನು ನನಸಾಗಿಸಲು ಶ್ರಮ, ಬದ್ಧತೆ, ಶಿಸ್ತು ಇರಬೇಕು. ಮಕ್ಕಳು ದೊಡ್ಡ ಕನಸು ಕಾಣುವಂತೆ ಮಾಡಬೇಕು. ನೀವು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಹಾಕುವ ಅಡಿಪಾಯ ಕೊನೆವರೆಗೂ ಇರುತ್ತದೆ” ಎಂದು ಹೇಳಿದರು.
8-10 ಸಾವಿರ ಕೋಟಿ ಸಿಎಸ್ಆರ್ ಹಣ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆ
“ಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಎಂದು ಸಿಎಸ್ಆರ್ ಶಾಲೆ ಆರಂಭಿಸಲು ನೀತಿ ರೂಪಿಸಿದ್ದೇವೆ. 8-10 ಸಾವಿರ ಕೋಟಿ ಸಿಎಸ್ಆರ್ ಹಣ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆಗೆ ತೀರ್ಮಾನಿಸಿದ್ದೇವೆ. ಮಕ್ಕಳು ಶಿಕ್ಷಣಕ್ಕೆ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುವುದು ತಪ್ಪಬೇಕು. ಉತ್ತಮವಾಗಿರುವ ಖಾಸಗಿ ಶಾಲೆಗಳು ಈ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಶಿಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದ್ದೇವೆ. ಈ ಮೂಲಕ 90 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು. ಮುಂದಿನ ದಿನಗಳಲ್ಲಿ ಇದನ್ನು ಜಾರಿ ಮಾಡುತ್ತೇವೆ” ಎಂದು ಹೇಳಿದರು.
ಶೀಘ್ರ ಹೊಸ ನೇಮಕಾತಿಗಳಿಗೆ ಆದ್ಯತೆ
“ನಾವು ನಿಮ್ಮ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡು, ಅನೇಕ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ತೀರ್ಮಾನ ಮಾಡುತ್ತಿದ್ದೇವೆ. 1 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಮೊನ್ನೆಯಷ್ಟೇ ಯುವಕರ ಬದುಕಿನ ವಿಚಾರದಲ್ಲಿ ದೊಡ್ಡ ತೀರ್ಮಾನ ಮಾಡಿದ್ದು, 2.50 ಲಕ್ಷ ಹುದ್ದೆಗಳ ಪೈಕಿ, 56 ಸಾವಿರ ನೇಮಕಾತಿ ಮಾಡಲು ಅನುಮೋದನೆ ನೀಡಿದ್ದೇವೆ. ಸುಮಾರು 5 ಗಂಟೆಗಳ ಕಾಲ ಇವುಗಳ ಸಾಧಕ ಬಾಧಕಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ” ಎಂದರು.
ಸಂಘದ ಕಟ್ಟಡಕ್ಕೆ ನಿವೇಶನ
“ಸಂಘದ ಅಧ್ಯಕ್ಷರು ಅನೇಕ ಬೇಡಿಕೆಗಳನ್ನು ನೀಡಿದ್ದಾರೆ. ನನ್ನ ಪರಿಮಿತಿಯಲ್ಲಿ ಸಾಧ್ಯವಾಗುವ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ. ಸಂಘದ ಕಟ್ಟಡಕ್ಕೆ ಬಿಡಿಎ ಅಥವಾ ಜಿಬಿಎ ಅಡಿ ಎಲ್ಲಿ ನಿವೇಶನ ಲಭ್ಯವಿದೆ ಎಂದು ನೋಡಿಕೊಂಡು ನಿಮಗೆ ನೀಡಲಾಗುವುದು” ಎಂದರು.
“ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ವಿದ್ಯೆ. ಈ ವಿದ್ಯೆ ವೃತ್ತಿಯನ್ನು ಆಯ್ಕೆ ಮಾಡಿದವರು ನೀವು. ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ನೀವು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಗುರುವಿನ ಸ್ಥಾನ ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮೆಲ್ಲರಿಗೂ ಸಾಷ್ಟಾಂಗ ನಮನಗಳು. ನೀವು ಪವಿತ್ರವಾದ ವೃತ್ತಿ ಆಯ್ಕೆ ಮಾಡಿಕೊಂಡಿದ್ದೀರಿ” ಎಂದರು.
“ಶಿಕ್ಷಣ ವೃತ್ತಿ ಮೂಲಕ ನೀವು ದೊಡ್ಡ ತ್ಯಾಗ ಮಾಡುತ್ತಿದ್ದೀರಿ. ನೀವು ನಿಮ್ಮ ವಿಚಾರಗಳಿಗೆ ಹೋರಾಟ ಮಾಡುತ್ತಿದ್ದೀರಿ. ನೀವು ನಮ್ಮನ್ನು ಇರಿಸಿಕೊಳ್ಳಬಹುದು, ಮೇಲಕ್ಕೆ ಏರಿಸಬಹುದು. ಉಪಕಾರ ಸ್ಮರಣೆಯೂ ಇರಬೇಕು. ಕೆಲವರು ಭಾವನೆ ಮೇಲೆ ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ. ನಾವು ಬದುಕಿನ ಮೇಲೆ ತೀರ್ಮಾನ ಮಾಡುತ್ತೇವೆ. ನಾನು ಸಿದ್ದರಾಮಯ್ಯ ಅವರು ಏನೇ ಮಾಡಿದರೂ ಬದುಕಿನ ಮೇಲೆ ತೀರ್ಮಾನ ಮಾಡುತ್ತಿದ್ದೇವೆ” ಎಂದರು.
“ಬಂಗಾರಪ್ಪ ಅವರ ಕಾಲದಲ್ಲಿ ಗ್ರಾಮೀಣ ಕೃಪಾಂಕ ಯೋಜನೆಯಿಂದ ಅನೇಕರು ಶಿಕ್ಷಣ ವೃತ್ತಿಗೆ ಸೇರುವಂತಾಯಿತು. ರಾಜೀವ್ ಗಾಂಧಿ ಅವರು ಆಪರೇಷನ್ ಬ್ಲಾಕ್ ಬೋರ್ಡ್ ಯೋಜನೆ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿದರು” ಎಂದರು.
“ಮೂರು ಶಾಲೆ ನಡೆಸುತ್ತಿರುವ ನನ್ನ ಮಗಳಿಗೂ ಸರ್ಕಾರಿ ಶಾಲೆ ದತ್ತು ಪಡೆಯುವಂತೆ ಸೂಚಿಸಿದ್ದೇನೆ. ನಮ್ಮ ಕ್ಷೇತ್ರದ ಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ. ನಾನು ಶಿಕ್ಷಣ ಪ್ರೇಮಿ. ಶಿಕ್ಷಣದ ಮೇಲಿನ ಪ್ರೀತಿಯಿಂದ 2007ರಲ್ಲಿ ಪದವಿ ಪಡೆದೆ. ಇದು ನನಗೆ ಬಹಳ ಸಂತೋಷ ನೀಡಿದ ಸಮಯ” ಎಂದು ಹೇಳಿದರು.
ಬೂತ್ ಮಟ್ಟದ ಕೆಲಸಗಳಿಂದ ಕೈ ಬಿಡಲು ಸಾಧ್ಯವಿಲ್ಲ; ದಯವಿಟ್ಟು ಸಹಕರಿಸಿ
“ಬೂತ್ ಮಟ್ಟದ ಕೆಲಸಗಳಿಂದ ಕೈ ಬಿಡಿ ಎಂದು ಕೇಳಿಕೊಳ್ಳುತ್ತಾ ಇದ್ದೀರಿ. ಇದು ಮಾತ್ರ ಸಾಧ್ಯವಿಲ್ಲ ಎಂದು ಮನವಿ ಮಾಡುತ್ತಿರುವೆ. ಏಕೆಂದರೆ ಈಗಾಗಲೇ ಒಂದಷ್ಟು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಒಂದು ಮನೆಯಲ್ಲಿ ನಾಲ್ಕು ಮತಗಳು ಇದ್ದರೆ ಒಂದು ಮತವನ್ನು ಒಂದು ಬೂತ್ ನಲ್ಲಿ ಮಿಕ್ಕ ಮತಗಳನ್ನು ಇನ್ನೆಲ್ಲೋ ಹಾಕಿ ದೊಡ್ಡ ಕುತಂತ್ರ ಮಾಡುತ್ತಿದ್ದಾರೆ. ಶಿಕ್ಷಕರು ನ್ಯಾಯಬದ್ದವಾಗಿ ಕೆಲಸ ಮಾಡುವವರು. ಇನ್ನೇನು ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು ನೀವುಗಳು ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತಿದ್ದೇನೆ. ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಆಶೀರ್ವಾದ ಈ ಸರ್ಕಾರದ ಮೇಲಿರಲಿ” ಎಂದು ಹೇಳಿದರು.


