
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ವಿಧಾನಸೌಧದ ಸಭಾಂಗಣದಲ್ಲಿ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
• ರಾಜ್ಯದಲ್ಲಿ ಜುಲೈ 18ರವರೆಗೆ ಮುಂಗಾರು ಮಳೆ ವಾಡಿಕೆಗಿಂತ ಒಟ್ಟಾರೆ ಶೇ.39ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಅತ್ಯಧಿಕ -43%, ಕರಾವಳಿಯಲ್ಲಿ -35%, ಉತ್ತರ ಒಳನಾಡಿನಲ್ಲಿ -33% ಮತ್ತು ದಕ್ಷಿಣ ಒಳನಾಡಿನಲ್ಲಿ -31% ರಷ್ಟು ಮಳೆ ಕೊರತೆ ದಾಖಲಾಗಿದೆ. 26 ಜಿಲ್ಲೆಗಳ ಒಟ್ಟು 158 ತಾಲೂಕುಗಳಲ್ಲಿ ಕೊರತೆ ಹಾಗೂ 20 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಕಂಡು ಬಂದಿದೆ. 51 ತಾಲೂಕುಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ವಿಜಯನಗರ ಜಿಲ್ಲೆ ತೀವ್ರ ಮಳೆ ಕೊರತೆ (-67%) ದಾಖಲಿಸಿದೆ.
• ರಾಜ್ಯದ 169 ಹೋಬಳಿಗಳಲ್ಲಿ ವಾಡಿಕೆ ಮಳೆಯಾಗಿದ್ದು, 509 ಹೋಬಳಿಗಳಲ್ಲಿ ಕೊರತೆ ಹಾಗೂ 118 ಹೋಬಳಿಗಳಲ್ಲಿ ತೀವ್ರ ಕೊರತೆ ದಾಖಲಾಗಿದೆ.
• ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆಯಾಗಿದ್ದು, ಒಟ್ಟಾರೆಯಾಗಿ ಶೇ.40 ರಷ್ಟು ಮಾತ್ರ ನೀರು ಸಂಗ್ರಹವಿದೆ. ಪ್ರಸ್ತುತ ಒಟ್ಟಾರೆ ಶೇ.359.98 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 681.83 ಟಿಎಂಸಿ ನೀರು ಸಂಗ್ರಹವಿತ್ತು.
• ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಒಟ್ಟು ಸಾಮರ್ಥ್ಯದ ಕೇವಲ ಸರಾಸರಿ ಶೇ.23 ರಷ್ಟು ನೀರು ಸಂಗ್ರಹವಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸರಾಸರಿ ಶೇ.51 ಹಾಗೂ ಕೃಷ್ಣಾ ಕಣಿವೆ ಜಲಾಶಯಗಳಲ್ಲಿ ಸರಾಸರಿ ಶೇ.48 ರಷ್ಟು ನೀರು ಸಂಗ್ರಹವಿದೆ. ಜಲಾಶಯಗಳಲ್ಲಿನ ಒಟ್ಟಾರ ಒಳ ಹರಿವು 52,108 ಕ್ಯೂಸೆಕ್ಸ್ ಇದೆ.
• ಪ್ರಸ್ತುತ 122 ತಾಲೂಕುಗಳ 539 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. 112 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇದುವರೆಗೆ 118 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗಿದೆ. 725 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಇದರ ಮೂಲಕ 622 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗಿದೆ.
• ಒಟ್ಟು 17 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 87 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬಾಡಿಗೆಗೆ ಪಡೆದ ಬೋರ್ವೆಲ್ಗಳ ಮೂಲಕ 24 ವಾರ್ಡ್ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, 20 ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ.
• ರಾಜ್ಯದಲ್ಲಿ ಪ್ರಸ್ತುತ 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 43.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಸರಾಸರಿ 51.33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿತ್ತು.
• ಜಿಲ್ಲೆಯಲ್ಲಿ ಎಲ್ಲರೂ ಟೀಂ ಆಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು ಮುಂಚೂಣಿಯಲ್ಲಿದ್ದು, ತಮ್ಮ ಅಧೀನದ ಅಧಿಕಾರಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಚಿಂತನೆ, ಆಲೋಚನೆಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ನಿಮ್ಮೆಲ್ಲರದ್ದು.
• ಕುಡಿಯುವ ನೀರಿನ ಪೂರೈಕೆಯನ್ನು ಖಾತ್ರಿಪಡಿಸಲು ಪ್ರತಿ ವಿಧಾನಸಭಾ ವ್ಯಾಪ್ತಿಗೆ ಹೆಚ್ಚುವರಿಯಾಗಿ ತಲಾ ರೂ.1ಕೋಟಿ ಒದಗಿಸಲಾಗುವುದು. ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಎಲ್ಲಾ ಜಿಲ್ಲಾಧಿಕಾರಿಗಳು pro active ಕ್ರಮ ಕೈಗೊಳ್ಳಬೇಕು.
• ಜಲಾಶಯಗಳ ಪರಿಸ್ಥಿತಿಯನ್ನು ನೋಡಿಕೊಂಡು ಸ್ಥಳೀಯ ಸಮಿತಿಯ ತೀರ್ಮಾನದಂತೆ, ಸ್ಥಳೀಯವಾಗಿ ಯಾವ ಬೆಳೆಗಳನ್ನು ಹಾಕಬೇಕು ಎಂಬ ಬಗ್ಗೆ ರೈತರಿಗೆ ಸಕಾಲದಲ್ಲಿ ಸೂಚನೆಗಳನ್ನು ನೀಡಬೇಕು.
• ರಾಜ್ಯದ ಬರಪರಿಸ್ಥಿತಿ ಬಗ್ಗೆ ಮುಂದಿನ 15ದಿನಗಳ ಒಳಗಾಗಿ ಕೇಂದ್ರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಬೇಕಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಬೇಕು. ಒಂದು ವಾರದ ಒಳಗಾಗಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಇದಕ್ಕಾಗಿ ಜಿಲ್ಲೆಗಳಲ್ಲಿರುವ ಎಲ್ಲಾ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಬರಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ತಾಲೂಕು, ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು.
• ಯಾವುದೇ ಹೊಸ ಬೋರ್ವೆಲ್ಗಳನ್ನು ಕೊರೆಯುವುದಿದ್ದರೂ ಸರಿಯಾಗಿ ಪರಿಶೀಲನೆ ನಡೆಸಬೇಕು. ಬೋಗಸ್ ಬೋರ್ವೆಲ್ ದಾಖಲೆಗಳನ್ನು ಸೃಷ್ಟಿಸಿದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆಯಾಗುತ್ತಾರೆ.
• ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಟ್ರಾನ್ಸ್ ಫಾರ್ಮರ್ ಗಳ ದುರಸ್ತಿಗೆ 4ಜಿ ವಿನಾಯಿತಿಯನ್ನು ಈಗಾಗಲೇ ನೀಡಲಾಗಿದೆ.
• ಎಲ್ಲಾ ಟಾಸ್ಕ್ಫೋರ್ಸ್ ನಿಗದಿತ ಅವಧಿಯಲ್ಲಿ ಸಭೆ ಸೇರಿ ಕ್ರಿಯಾ ಯೋಜನೆಗಳನ್ನು ಸಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.
• ಜಿಲ್ಲಾಧಿಕಾರಿ, ಸಿಇಒ, ಕೃಷಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ತಮ್ಮ ಪ್ರತಿದಿನದ ಕಾರ್ಯಸೂಚಿಯನ್ನು ಪ್ರಜಾಸೇವೆ ಇಲಾಖೆಗೆ ಒದಗಿಸಬೇಕು. ಜಿಲ್ಲೆಯಲ್ಲಿರುವ ಪ್ರತಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನಮ್ಮಲ್ಲಿ ಲಭ್ಯವಿರಬೇಕು. ನಿಮ್ಮ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗುವುದು.
• ಲಭ್ಯವಿರುವ ನೀರಿನ ಸಂಗ್ರಹದ ಬಗ್ಗೆ ಜಿಲ್ಲೆಯಲ್ಲಿ ರೈತರಿಗೆ ನಿರಂತರವಾಗಿ ಮಾಹಿತಿ ಹಾಗೂ ಸೂಚನೆಗಳನ್ನು ನೀಡಬೇಕು. ಕೇಂದ್ರದಿಂದ ಆಗಮಿಸುವ ಬರ ಅಧ್ಯಯನ ತಂಡಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.
• ಪ್ರತಿಯೊಬ್ಬ ರೈತರ ಸಮಸ್ಯೆಗಳ ಬಗ್ಗೆ ಅರಿವು ಇರಬೇಕು. ಬೆಳೆ ವಿಮೆ ಬಗ್ಗೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕು. ಈ ಕುರಿತು ರೈತರಿಗೆ ಸೂಕ್ತ ಮಾಹಿತಿಯನ್ನು ಒದಗಿಸಬೇಕು. ಬೆಳೆ ವಿಮೆ ವಿಚಾರದಲ್ಲಿ ಯಾವುದೇ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ.
• ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಮೇವಿನ ಬೀಜ ಬಿತ್ತನೆ ಮಾಡಬೇಕು. ಲಭ್ಯವಿರುವ ನೀರಾವರಿ ಸೌಲಭ್ಯಗಳನ್ನು ಬಳಸಿಕೊಂಡು ಮೇವಿನ ಬೀಜ ಬಿತ್ತನೆಗೆ ಕ್ರಮ ವಹಿಸಿ. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪ ಉಂಟಾಗದಂತೆ, ದೂರಿಗೆ ಆಸ್ಪದವಾಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ.
• ಕೆರೆಗಳಲ್ಲಿನ ನೀರಿನ ಲಭ್ಯತೆಯನ್ನು ಸರಿಯಾಗಿ ಪರಿಶೀಲಿಸಿ ಒದಗಿಸಬೇಕು. ಅಧಿಕಾರಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವದ ಅಂಕಿಅಂಶಗಳನ್ನು ಒದಗಿಸಬೇಕು. ಗುತ್ತಿಗೆದಾರರಿಗೆ ಅನುಕೂಲವಾಗುಂತೆ ಯಾವುದೇ ಕ್ರಿಯಾ ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸಬಾರದು. ಪ್ರತಿಯೊಂದು ಸಣ್ಣ ವಿಷಯಗಳ ಬಗ್ಗೆಯೂ ಎಚ್ಚರಿಕೆಯಿಂದಿದ್ದು, ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
• ತಹಶೀಲ್ದಾರ್ಗಳು ಎಲ್ಲೆಲ್ಲಿ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಿದ್ದಾರೆ ಎಂಬ ಬಗ್ಗೆ ವರದಿಯನ್ನು ಸಲ್ಲಿಸಬೇಕು.
• ಕುಡಿಯುವ ನೀರಿಗೆ ಯಾವುದೇ ಜಿಲ್ಲೆಯಲ್ಲಿ ಅನುದಾನದ ಕೊರತೆಯಿರುವುದಿಲ್ಲ. ಕೊರೆದಿರುವ ಬೋರ್ವೆಲ್ಗಳಿಗೆ ಪಂಪಿಂಗ್ ಮೆಷಿನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಬೋರ್ವೆಲ್ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗಳು ಸ್ಥಳೀಯವಾಗಿಯೇ ಕ್ರಮ ಕೈಗೊಳ್ಳಬೇಕು.
• ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ.ಖಾತೆಯಲ್ಲಿ ಒಟ್ಟು ರೂ.329.60 ಕೋಟಿ ಅನುದಾನ ಲಭ್ಯವಿದೆ.
• ಜನರು ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಳೀಯವಾಗಿ ಜನರಲ್ಲಿ ವಿಬಿ ರಾಮ್ ಜಿ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆರಂಭಿಸಬೇಕು. ವಿಬಿ ರಾಮ್ ಜಿ ಯೋಜನೆಯನ್ನು ರಾಜ್ಯದಲ್ಲಿ ಯಥಾಪ್ರಕಾರ ಅನುಷ್ಠಾನಗೊಳಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಜನರು ಕೂಲಿ ಹುಡುಕಿಕೊಂಡು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಯಾವುದೇ ಕಾರಣಕ್ಕೂ ಜನರು ಗುಳೇ ಹೋಗಬಾರದು.
• ವಿಬಿ ರಾಮ್ ಜಿ ಯೋಜನೆಯಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೂಲಿ ಕೆಲಸಕ್ಕೆ ಹೊರತಾಗಿ, ಜೀವನೋಪಾಯ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬರ ಪರಿಹಾರ ಚಟುವಟಿಕೆಗಳನ್ನು ಕೈಗೊಳ್ಳಲು ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
• ಪಂಚಾಯತ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ವಿಬಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಬೇಕು. ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಕೈಗೊಳ್ಳಬಾರದು. ವೈಯಕ್ತಿಕ ಕುಟುಂಬಗಳಿಗೆ ಅನುಕೂವಾಗುವಂತಹ ಜೀವನೋಪಾಯ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲು ಆದ್ಯತೆ ನೀಡಬೇಕು. ಯೋಜನೆಯ ಪ್ರತಿಯೊಂದು ಸ್ಥಳದಲ್ಲಿ ಕಾಮಗಾರಿ ವಿವರಗಳ ಬೋರ್ಡ್ ಅಳವಡಿಸಬೇಕು. ಹಳೆ ಕಾಮಗಾರಿಗೆ ಹೊಸ ಬಿಲ್ ಮಾಡುವ ಪರಿಪಾಟವನ್ನು ಬಿಡಬೇಕು.
• ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನುಜ ಪರಿಶೀಲಿಸುವ ಕಾರ್ಯವನ್ನು ಆರಂಭಿಸಿದ್ದು, ಜಿಲ್ಲಾಮಟ್ಟದಲ್ಲಿ ಈ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು.
• ಭಾರತ್ ಜೋಡೋ ಯುವ ಸಂಘ ಯೋಜನೆಯಡಿ, ಎಲ್ಲಾ ಪಂಚಾಯತ್ಗಳಲ್ಲಿ ಯೂತ್ಕ್ಲಬ್ಗಳನ್ನು ನೋಂದಾಯಿಸಿ ಕಾರ್ಯ ಚಟುವಟಿಕೆಗಳನ್ನು ಆರಂಭಿಸಲು ಉತ್ತೇಜನ ನೀಡಬೇಕು. ಮುಂದಿನ ತಿಂಗಳು ಯೋಜನೆಗೆ ಚಾಲನೆ ನೀಡಲಾಗುವುದು.
• ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿಯನ್ನು ಪರಿಣಾಮಕಾರಿಯಾಗಿ ರಾಜ್ಯದಾದ್ಯಂತ ಅನುಷ್ಠಾನಗೊಳಿಸಬೇಕು.
• ರಾಜ್ಯದಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ? ಎಷ್ಟು ದುರಸ್ತಿಯಲ್ಲಿವೆ? ಎಂಬ ಸಂಪೂರ್ಣ ಮಾಹಿತಿ ನೀಡಬೇಕು. ಎಲ್ಲಾ ಆರ್ಒ ಪ್ಲಾಂಟ್ಗಳು ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಬೇಕು. ಸಣ್ಣಪುಟ್ಟ ದುರಸ್ತಿ ಅಗತ್ಯವಿದ್ದರೆ ಸರಿಪಡಿಸಬೇಕು.
• ಪ್ರಜಾ ಸೇವೆ ಇಲಾಖೆ ಕಾರ್ಯವನ್ನು ಎಲ್ಲಾ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಎರಡು ದಿನ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕಾರ್ಯವನ್ನು ಮಾಡಬೇಕು. ಶಾಸಕರು ಹೋಬಳಿ ಮಟ್ಟಕ್ಕೆ ಭೇಟಿ ನೀಡಿ ಜನರ ಅಹವಾಲುಗಳಿಗೆ ಸ್ಪಂದನೆ ಮಾಡುವ ಕಾರ್ಯ ಮಾಡಬೇಕು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾ ರೆಡ್ಡಿ, ಯು.ಟಿ.ಖಾದರ್, ಯತೀಂದ್ರ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



