*ದಿನಬೆಳಗಾದರೆ ಸುಳ್ಳು ಆರೋಪ; ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಘನತೆಗೆ ತಕ್ಕಂತೆ ವರ್ತಿಸಲಿ: ಡಿಸಿಎಂ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳು. ಅವರಿಗೊಂದು ಘನತೆ ಇದೆ. ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಕ್ಸ್ ಖಾತೆ ಮೂಲಕ ಯತೀಂದ್ರ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಎಂಬುವವರು ಪೊಲೀಸ್ ಅಧಿಕಾರಿ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.
“ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟ್ನರ್ ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯೆ ನೀಡಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಅವರ ತಂದೆಯವರು ಅನೇಕ ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಕೇಳಿದೆ. ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಮುಖ್ಯಮಂತ್ರಿಗಳು. ಅವರುಗಳು ಇವರಂತೆ ಸುಮ್ಮ ಸುಮ್ಮನೆ ಮಾತನಾಡುತ್ತಾರಾ?
ದೇವರು, ಜನ ಕೊಟ್ಟ ಅವಕಾಶ, ಬೆಂಬಲಿಗರ ಸಹಾಯ, ತಂದೆ ತಾಯಿ ಆಶೀರ್ವಾದ, ತಮ್ಮದೇ ಆದ ಹೋರಾಟದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಮನಸ್ಸಿಗೆ ಬಂದಂತೆ ಈ ರೀತಿ ಮಾತನಾಡಿದರೆ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಮಾತು, ವರ್ತನೆ ಎಂದರೆ ನಾವು ಹೆದರಿ ಗಡ, ಗಡ ನಡಗುವಂತೆ ಇರಬೇಕು.
ನಮ್ಮ ಮಾಜಿ ಶಾಸಕ ಯತೀಂದ್ರ ಅವರು ತಮ್ಮ ತಂದೆಗಾಗಿ ಸ್ಥಾನ ತ್ಯಾಗ ಮಾಡಿದವರು. ನಾವು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಅವರನ್ನು ಎಂಎಲ್ ಸಿ ಮಾಡುತ್ತೇವೆ ಎಂದರೂ ಅದನ್ನು ಬೇಡ ಎಂದವರು. ಆತ ತಂದೆಯ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯನಾಗಿ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ನೂರಾರು ಕೆಲಸಗಳಿರುತ್ತವೆ. ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳ ವರ್ಗಾವಣೆ ಅರ್ಜಿ ಇಟ್ಟುಕೊಂಡು ಅನೇಕರು ಬರುತ್ತಾರೆ. ಹಾಗೆಂದು ಯತೀಂದ್ರ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿ ಖುಷಿಪಡಬೇಕು. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ”.
ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ವಿಚಾರ ಪ್ರಸ್ತಾಪ ಮಾಡಲೇಬೇಕು. ಈ ವಿಚಾರದ ಜತೆಗೆ ಅವರು ಇದುವರೆಗೂ ಜನತೆಗೆ ಕೊಟ್ಟ ಮಾತನ್ನು ಬಿಚ್ಚಿಟ್ಟು ಚರ್ಚೆ ಮಾಡಲಿ. ಪಕ್ಷದ ಅಧ್ಯಕ್ಷರಾಗಿ ಅವರಿಗೆ ವಿಚಾರ ಪ್ರಸ್ತಾಪಿಸುವ ಹಕ್ಕಿದೆ. ಅದನ್ನು ನಾನೇಕೆ ಕಿತ್ತುಕೊಳ್ಳಲಿ, ಬೇಡ ಎನ್ನಲಿ” ಎಂದು ತಿಳಿಸಿದರು.
ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸಿರುವ ಬಗ್ಗೆ ಕೇಳಿದಾಗ, “ಇದು ಅವರ ಪಕ್ಷದ ವಿಚಾರ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.
ಜಿ.ಟಿ ದೇವೇಗೌಡರ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಲ್ಲಾ ಪಕ್ಷದ ಶಾಸಕರು ಕೆಲಸದ ವಿಚಾರವಾಗಿ ನನ್ನನ್ನು ಭೇಟಿ ಮಾಡುತ್ತಾರೆ. ನನಗೆ ಅನೇಕ ಸ್ನೇಹಿತರಿದ್ದಾರೆ. ಅವರ ಜೊತೆ ಊಟ, ಚರ್ಚೆ ಮಾಡುತ್ತೇವೆ. ಕುಮಾರಸ್ವಾಮಿ ಅವರು ಕೂಡ 40 ಜನ ಕಾಂಗ್ರೆಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಏನು ಬಿಜೆಪಿಯ ವಕ್ತಾರರೇ?’.
ಅಶೋಕ್ ವಿರೋಧ ಪಕ್ಷದ ನಾಯಕರಾಗಿರುವುದಕ್ಕೆ ನೀವು ಸಂತೋಷಗೊಂಡಿದ್ದೀರಾ ಎಂದು ಕೇಳಿದಾಗ, “ಹೌದು, ನನಗೆ ಬಹಳ ಸಂತೋಷವಾಗಿದೆ. ಅವರು ಹಿರಿಯರಲ್ಲವೇ? ಅವರು ಸೋತಿದ್ದಾರೆ ಎಂದು ನಾನು ಎಲ್ಲೂ ಹೇಳಿಲ್ಲ. ರಾಜಕೀಯದಲ್ಲಿ ಸೋಲು, ಗೆಲವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಬೇಕು. ಎಂತೆಂಥಹವರೇ ಸೋತಿದ್ದಾರೆ, ಗೆದ್ದಿದ್ದಾರೆ. ನಾನು, ದೇವೇಗೌಡರು, ಕುಮಾರಸ್ವಾಮಿ ಅವರು ಸೋತಿಲ್ಲವೇ? ಚುನಾವಣೆಗೆ ನಿಂತವರೆಲ್ಲಾ ಗೆಲ್ಲಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಈಗ ರಾಜಕೀಯ ಪಂದ್ಯ ರೋಚಕವಾಗಿದೆ ಎಂದು ಅನಿಸುತ್ತಿದೆಯಲ್ಲವೇ ಎಂದು ಕೇಳಿದಾಗ, “ಅವರು ಏನೇನೋ ದೊಡ್ಡ ಸ್ಕೀಮು, ತಂತ್ರ, ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲವೂ ನಡೆಯಲಿ ಬಿಡಿ. ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ” ಎಂದು ತಿಳಿಸಿದರು.
ಅಶೋಕಣ್ಣ ತಮ್ಮ ಅನುಭವದ ಭಂಡಾರದ ಮೂಲಕ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ
ಸರ್ಕಾರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದೆ ಎಂಬ ನೂತನ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅಶೋಕಣ್ಣ ಏಳು ಬಾರಿ ಗೆದ್ದಿದ್ದು, ಹಿರಿಯ ನಾಯಕರಿದ್ದಾರೆ. ಅವರಿಗೆ ದೊಡ್ಡ ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ಸ್ಥಾನ ಎಂದರೆ ಸಂವಿಧಾನದ ಮೂಲಕ ಕೊಟ್ಟಿರುವ ಸ್ಥಾನ. ಅವರಿಗೆ ಈ ಸ್ಥಾನ ಸಿಕ್ಕಿರುವುದು ಸಂತೋಷ. ಆ ಪಕ್ಷದಲ್ಲಿ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಹಳ ಸಮರ್ಥವಾಗಿ ನಿರ್ವಹಿಸಲಿ. ಅವರ ಅನುಭವದ ಭಂಡಾರದ ಮೂಲಕ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿ, ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡಲಿ. ಬಿಜೆಪಿ ಕೊನೆಗೂ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಿರುವುದು ಸಂತೋಷದ ವಿಚಾರ” ಎಂದು ಪ್ರತಿಕ್ರಿಯಿಸಿದರು.
ವಿಶ್ವಕಪ್: ಟೀಂ ಇಂಡಿಯಾಗೆ ಶುಭ ಹಾರೈಕೆ:
ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಫೈನಲ್ ಪಂದ್ಯದಲ್ಲೂ ಉತ್ತಮ ಆಟವಾಡಿ ಕಪ್ ಗೆಲ್ಲುವ ಆತ್ಮವಿಶ್ವಾಸವಿದೆ. ಭಾರತ ತಂಡ ವಿಶ್ವಕಪ್ ಗೆದ್ದೇ ಗೆಲ್ಲಲಿದೆ ಎಂಬುದು ನನ್ನ ಹಾಗೂ ಎಲ್ಲಾ ಭಾರತೀಯರ ನಂಬಿಕೆ. ರಾಜ್ಯ ಸರ್ಕಾರದ ಪರವಾಗಿ ನಾವು ಟೀಂ ಇಂಡಿಯಾಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ