ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಬಿಐ ಅಧಿಕಾರಿಗಳು ನಿನ್ನೆ ನಡೆಸಿದ್ದ ದಾಳಿ ವೇಳೆ ಕೇವಲ 6.78 ಲಕ್ಷ ಮಾತ್ರ ಸಿಕ್ಕಿದೆ. ಆದರೆ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಂತೆ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಸದ ಡಿ.ಕೆ ಸುರೇಶ್ ಒತ್ತಾಯಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಸಿಬಿಐ ರೇಡ್ ವೇಳೆ ಅಧಿಕಾರಿಗಳಿಗೆ ಸಿಕ್ಕ ಹಣದ ಬಗ್ಗೆ ಮಾಹಿತಿ ನೀಡಿರುವ ಸಂಸದರು, ಸಿಬಿಐ ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಒಟ್ಟು 6.78 ಲಕ್ಷ ರೂಪಾಯಿಗಳು ಮಾತ್ರ ಸಿಕ್ಕಿದೆ. ಆದರೆ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದೆ ಎಂದಿದ್ದಾರೆ. ಹಾಗಾದರೆ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ ಎಂಬುದನ್ನು ಅಧಿಕಾರಿಗಳೇ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
ಸಿಬಿಐ ದಾಳಿಯಲ್ಲಿ ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಚೇರಿಯಲ್ಲಿ 3.5 ಲಕ್ಷ ರೂಪಾಯಿಗಳು. ಇಬ್ಬರ ಮನೆಯಿಂದ ಒಟ್ಟು 6.78 ಲಕ್ಷ ರೂಪಾಯಿಗಳು ಮಾತ್ರ ಸಿಕ್ಕಿವೆ. ಇನ್ನು ನನ್ನ ಅಣ್ಣನ ದೆಹಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ. ಅಲ್ಲದೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ ಈ ಬಗ್ಗೆ ಅಧಿಕಾರಿಗಳ ದಾಖಲೆಯಲ್ಲಿಯೇ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆಮಾಡಿರುವ ದಾಖಲೆಗಳಲ್ಲಿ 57 ಲಕ್ಷ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಇದೀಗ 50 ಲಕ್ಷದ ಲೆಕ್ಕ ಸಿಕ್ಕಿದ್ದು, ಉದ್ಯಮಿ, ಡಿಕೆಶಿ ಆಪ್ತ ಸಚಿನ್ ನಾರಾಯಣ ಮನೆಯಲ್ಲಿ ಹಣ ಸಿಕ್ಕಿದೆ. ಭಾನುವಾರವಾಗಿದ್ದರಿಂದ ಅವರು ಬ್ಯಾಂಕ್ ಗೆ ಹಣ ಹಾಕಲಾಗದೆ ಮನೆಯಲ್ಲಿ ಇರಿಸಿಕೊಂಡಿದ್ದರು ಎನ್ನುವ ಮಾಹಿತಿ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ