Politics

*ಅಣ್ಣ ಸಿಎಂ ಆಗಬೇಕೆಂಬ ಕನಸು ಬಿಚ್ಚಿಟ್ಟ ಡಿ.ಕೆ.ಸುರೇಶ್*

ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಸೀಮಿತವಲ್ಲ, ನಮ್ಮ ರಾಜ್ಯಕ್ಕೆ ನ್ಯಾಯಯುತ ಪಾಲು ನೀಡಬೇಕು

ಪ್ರಗತಿವಾಹಿನಿ ಸುದ್ದಿ: ಈ ದೇಶ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಎಲ್ಲಾ ರಾಜ್ಯಗಳು ಸಮಾನಾಂತರ ಹಕ್ಕು ಹೊಂದಿವೆ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸುರೇಶ್ ಅವರು ಶನಿವಾರ ಮಾತನಾಡಿದರು.

ಅಮಿತ್ ಶಾ ಅವರ ಕ್ಷೇತ್ರ ಮರು ವಿಂಗಡಣೆ ಹೇಳಿಕೆ ಹಾಗೂ ತೆರಿಗೆ ಪಾಲಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಕೇಂದ್ರ ಸರ್ಕಾರ ಪ್ರತಿ ಹಂತದಲ್ಲೂ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಬೇಕಾದರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ಆದರೆ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒಂದಲ್ಲಾ ಒಂದು ರೀತಿ ಕಾನೂನು ಹಾಗೂ ನಿಯಮಗಳನ್ನು ಹೇರುತ್ತಿದೆ” ಎಂದು ತಿಳಿಸಿದರು.

Home add -Advt

“ತೆರಿಗೆ ವಿಚಾರದಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ನಾನು ಈಗಾಗಲೇ ಪ್ರಸ್ತಾಪ ಮಾಡಿದ್ದು, ನಾವು ಎಷ್ಟು ತೆರಿಗೆ ಕಟ್ಟುತ್ತಿದ್ದೇವೆ. ಎಷ್ಟು ಪಾಲು ಅವರು ನೀಡುತ್ತಿದ್ದಾರೆ. ರಾಜ್ಯಗಳ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ, ಕೇಂದ್ರ ಸರ್ಕಾರ ನಮ್ಮ ರಾಜ್ಯಗಳನ್ನು ಯಾವ ದೃಷ್ಟಿಯಿಂದ ನೋಡುತ್ತಿದೆ ಎಂದು ಹೇಳಿದ್ದೇನೆ” ಎಂದರು.

“ಇನ್ನು ಹಿಂದಿ ಹೇರಿಕೆ ವಿಚಾರವೂ ರಾಜ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಆರ್ಥಿಕ ನೀತಿಯಲ್ಲಿ ಶೇ.1ರಷ್ಟು ತೆರಿಗೆ ಪಾಲು ಕಡಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಜನ ತಿರುಗಿ ಬಿದ್ದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ನೀಡುವುದನ್ನು ಕಲಿಯಬೇಕು. ಕೇಂದ್ರ ಸರ್ಕಾರದ ತೀರ್ಮಾನಗಳು ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವಂತೆ ಇರಬೇಕು. ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ” ಎಂದು ಎಚ್ಚರಿಸಿದರು.

ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು

“ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ, ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೇನೆ. ಈ ವರ್ಷ ಜನಗಣತಿ ನಡೆಯುವ ಸಾಧ್ಯತೆ ಇದ್ದು, ಮಹಿಳಾ ಮೀಸಲಾತಿ ಜಾರಿಯನ್ನು ಮಾಡಲಾಗುತ್ತಿದೆ. ಜನಸಂಖ್ಯೆ ಹಾಗೂ ಕ್ಷೇತ್ರ ವಿಂಗಡಣೆ ನೋಡಿದರೆ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಉತ್ತರ ಭಾರತದ ಪಾಲಾಗಲಿದೆ. ಇದನ್ನು ಸಾಧಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ. ಇದರ ವಿರುದ್ಧ ನಮ್ಮ ಕನ್ನಡಿಗರು, ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ದಕ್ಷಿಣ ಭಾರತದ ಮೇಲೆ ಕೇಂದ್ರ ತೋರುತ್ತಿರುವ ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು. ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಅಸ್ಥಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಎಲ್ಲಾ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ” ಎಂದು ಕರೆ ನೀಡಿದರು.

ಇದು ಕಾನೂನಾತ್ಮಕವಾಗಿ ಹತ್ತಿಕ್ಕುವ ಪ್ರಯತ್ನವೇ ಎಂದು ಕೇಳಿದಾಗ, “ಹೌದು, ಕಾನೂನು ಮಾಡಿ ಅವರ ಸಂಖ್ಯಾಬಲದ ಮೇಲೆ ನಮ್ಮನ್ನು ಸದೆಬಡಿಯುವ ಪ್ರಯತ್ನ ಮಾಡಲಾಗುವುದು. ಮುಂದೆ ನಾವು ಏನೇ ಪ್ರಶ್ನೆ ಮಾಡಿದರು, ಕಾನೂನಿನ ನೆಪವೊಡ್ಡಿ ಎಲ್ಲವನ್ನು ನಿಭಾಯಿಸುವ ಕಲೆಯನ್ನು ಬಿಜೆಪಿ ಬಹಳ ಚೆನ್ನಾಗಿ ರೂಢಿಸಿಕೊಂಡಿದೆ” ಎಂದರು.

ಅತ್ಯಾಚಾರ ಮಾಡಿರುವವರ ಬಗ್ಗೆ ಮಾತನಾಡುವುದಿಲ್ಲ

ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೆದರಿಸುತ್ತಿದ್ದಾರೆ ಎಂಬ ಮುನಿರತ್ನ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಕುರಿತು ನಾನು ಮಾತನಾಡುವುದಿಲ್ಲ. ಮಾಧ್ಯಮಗಳು ಇಂತಹವರ ಬಗ್ಗೆ ಕೇಳುತ್ತಿದ್ದೀರಾ? ಆತನ ಅತ್ಯಾಚಾರ ಪ್ರಕರಣಗಳ ಬಗ್ಗೆ, ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಲಿ. ಆತ ಓರ್ವ ರೇಪಿಸ್ಟ್ ಎಂದು ದೂರುದಾರರು ಹೇಳಿದ್ದಾರೆ. ದೇವಾಲಯ ಎಂದು ಪರಿಗಣಿಸಿರುವ ವಿಧಾನಸೌಧದಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅತ್ಯಾಚಾರದ ಬಗ್ಗೆ ನೀವು ಆತನನ್ನು ಪ್ರಶ್ನೆ ಮಾಡಿದ್ದೀರಾ? ಈ ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಆತನನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು. ಆತನಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿರುವುದು ಈಗಲ್ಲ. ಒಕ್ಕಲಿಗರ ತಾಯಂದಿರನ್ನು ಕೆಟ್ಟದಾಗಿ ಬಳಸಿಕೊಳ್ಳಲು ಆಲೋಚಿಸಿದಾಗ. ಒಕ್ಕಲಿಗರ ಬಗ್ಗೆ ಯಾವೆಲ್ಲಾ ಅವಾಚ್ಯ ಶಬ್ಧ ಬಳಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಈಗ ಈ ರೀತಿ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಅವರು ಎಸ್.ಎಂ ಕೃಷ್ಣ ಹಾಗೂ ಡಿ.ಕೆ. ರವಿ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೇಳಿರುವುದರ ಬಗ್ಗೆ ಪ್ರಶ್ನಿಸಿದಾಗ, “ಕೊರಂಗು ಮುನಿರತ್ನ ನಾಯ್ಡು ಕಬ್ಬಿಣದ ಪ್ರತಿಮೆ ಮಾಡಬೇಕು ಎಂಬ ಅರ್ಜಿಯೂ ನನಗೆ ಬಂದಿದೆ. ಈ ಬಗ್ಗೆ ನಾನು ಡಿಸಿಎಂ ಬಳಿ ಮನವಿ ಮಾಡುತ್ತೇನೆ” ಎಂದು ತಿರುಗೇಟು ನೀಡಿದರು.

ಹೈಕಮಾಂಡ್ ಭೇಟಿಗೆ ವಿಶೇಷ ಅರ್ಥ ಬೇಡ

ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ ಎಂಬ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ ಎಂದರೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಪಕ್ಷದ ಅಧ್ಯಕ್ಷರು. ಪ್ರತಿ ತಿಂಗಳು, ಹದಿನೈದು ದಿನಕ್ಕೊಮ್ಮೆ ದೆಹಲಿಗೆ ಹೋಗುತ್ತಾರೆ. ಅಧ್ಯಕ್ಷ ಸ್ಥಾನ ಇದ್ದಾಗ, ಇಲ್ಲದಿದ್ದಾಗಲೂ ಅವರು ಹೈಕಮಾಂಡ್ ನಾಯಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿರುತ್ತಾರೆ. ಅವರು ಸರ್ಕಾರಿ ಅಥವಾ ಖಾಸಗಿ ಕೆಲಸದ ಮೇಲೆ ದೆಹಲಿಗೆ ಹೋದರೂ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸರ್ಕಾರದ ಉತ್ತಮ ಆಡಳಿತ, ಪಕ್ಷ ಸಂಘಟನೆ ಹೊರತಾಗಿ ಶಿವಕುಮಾರ್ ಅವರಿಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಅವರು ಈಗ ಉಪಮುಖ್ಯಮಂತ್ರಿಯಾಗಿದ್ದು, ಹಕ್ಕು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ನಲ್ಲಿ ಅಜಿತ್ ಪವಾರ್, ಏಕನಾಥ ಶಿಂಧೆ ಹುಟ್ಟುಕೊಂಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರ ಮಾತಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಅವರು ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಅನಗತ್ಯವಾಗಿ ಕಾಂಗ್ರೆಸ್, ಶಿವಕುಮಾರ್ ಅವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದೇಕೆ?” ಎಂದು ಪ್ರಶ್ನಿಸಿದರು.

ಶಿವಕುಮಾರ್ ಕದ್ದುಮುಚ್ಚಿ ಯಾರನ್ನೂ ಭೇಟಿ ಮಾಡಿಲ್ಲ

ಏಕಾಂಗಿಯಾಗಿ ಪ್ರಧಾನಿ ಭೇಟಿ, ಅಮಿತ್ ಶಾ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಚರ್ಚೆ ಆರಂಭವಾಗಿದೆ ಎಂದು ಕೇಳಿದಾಗ, “ಶಿವಕುಮಾರ್ ಅವರು ಪ್ರಧಾನಿ ಭೇಟಿಯಾಗುವಾಗ, ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಹೈಕಮಾಂಡ್ ಗೆ ತಿಳಿಸಿದ್ದರು. ಅವರು ಕದ್ದುಮುಚ್ಚಿ ಹೋಗಿಲ್ಲ. ಸಾರ್ವಜನಿಕವಾಗಿ ತಿಳಿಸಿಯೇ ಹೋಗಿದ್ದರು. ಸದ್ಗುರು ಅವರು ಮನೆಗೆ ಬಂದು ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಶಿವಕುಮಾರ್ ಮೊದಲಿನಿಂದಲೂ ದೇವರ ಮೇಲೆ ಭಕ್ತಿ ಹೊಂದಿದ್ದವರು. ಶಿವಕುಮಾರ್ ಎಂದು ಹೆಸರು ಬಂದಿದ್ದೆ ಶಿವನ ಹರಕೆಯಿಂದ ಅವರು ಜನಿಸಿದ ಕಾರಣ ನಮ್ಮ ತಂದೆ ತಾಯಿ ಅವರಿಗೆ ಶಿವಕುಮಾರ್ ಎಂದು ಹೆಸರಿಟ್ಟರು. ಮಗು ಜನಿಸಬೇಕು ಎಂದು ನಮ್ಮ ಅಪ್ಪ ಅಮ್ಮ ದೇವರಿಗೆ ಪ್ರತಿ ವರ್ಷ ಪರ ಮಾಡುತ್ತಿದ್ದರು. ನಮ್ಮ ತಂದೆ ನಿತ್ಯ ಶಿವನ ದೇವಾಲಯಕ್ಕೆ ಹೋಗದೆ ಕೆಲಸ ಆರಂಭಿಸುತ್ತಿರಲಿಲ್ಲ. ನಾನು ಹಾಗೂ ಶಿವಕುಮಾರ್ ಅವಕಾಶ ಸಿಕ್ಕಾಗೆಲ್ಲ ಶಿವನ ದೇವಾಲಯಕ್ಕೆ ಹೋಗುತ್ತೇವೆ. ಕಳೆದ 35 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಬಂದಿದ್ದಾರೆ. ಈಗ ಮಾಧ್ಯಮಗಳಿರುವ ಕಾರಣ ದೇವಾಲಯ ಭೇಟಿ ಬಗ್ಗೆ ಪ್ರಚಾರ ಆಗುತ್ತಿದೆ. ಅವರು ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ ವರ್ಷಕ್ಕೆ ಎರಡು ಮೂರು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಇದರ ಜತೆಗೆ ಶೃಂಗೇರಿ ಮಠ, ಕೇರಳ, ತಮಿಳುನಾಡು, ಉತ್ತರ ಭಾರತದ ದೇವಾಲಯಕ್ಕೆ ಹೋಗುತ್ತಾರೆ. ಇದರಲ್ಲಿ ವಿಶೇಷ ಅರ್ಥವಿಲ್ಲ. ಒಬ್ಬ ಹಿಂದೂವಾಗಿ ತನ್ನ ಸಂಸ್ಕೃತಿ, ಸಂಸ್ಕಾರ ಪಾಲಿಸುತ್ತಿದ್ದಾರೆ” ಎಂದು ತಿಳಿಸಿದರು.

“ನಾವು ಎಲ್ಲಾ ಜಾತಿ, ಧರ್ಮಗಳನ್ನು ಗೌರವಿಸುತ್ತೇವೆ. ಶಿವಕುಮಾರ್ ಅವರು ತಮ್ಮ ಗುರುಗಳಿಂದ ದೀಕ್ಷೆ ಪಡೆದಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂದು. ಈ ದೀಕ್ಷೆ ಅಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಿಮ್ಮನ್ನು ಯಾವ ಧರ್ಮದ ಆಚಾರದಂತೆ ಅಂತ್ಯಸಂಸ್ಕಾರ ಮಾಡುತ್ತಾರೆ? ಯಾರು ಯಾವ ಜಾತಿ, ಧರ್ಮದಲ್ಲಿ ಹುಟ್ಟಿರುತ್ತಾರೋ ಆ ಜಾತಿ ಧರ್ಮಗಳ ಆಚಾರ ವಿಚಾರ ಹುಟ್ಟು, ಸಾವು ತೀರ್ಮಾನವಾಗುತ್ತದೆ. ಸತ್ತ ನಂತರ ನಮ್ಮನ್ನು ಯಾವ ರೀತಿ ಮಣ್ಣು ಮಾಡುತ್ತಾರೆ ನಮಗೆ ಗೊತ್ತಾಗುವುದಿಲ್ಲ. ನಮ್ಮ.ಕುಟುಂಬದವರು, ಸ್ನೇಹಿತರು, ಬಂಧು ಬಳಗ, ಅಭಿಮಾನಿಗಳಿಗೆ ಗೊತ್ತಾಗುತ್ತದೆ. ಪ್ರತಿಯೊಬ್ಬರದ್ದು ತಮ್ಮದೇ ಆದ ಆಚರಣೆ ಇರುತ್ತದೆ” ಎಂದು ಹೇಳಿದರು.

ನೀವು ದೇವಾಲಯಗಳಿಗೆ ಭೇಟಿ ನೀಡುವುದಿಲ್ಲವೇ ಎಂದು ಕೇಳಿದಾಗ, “ನಾನು ದೇವಾಲಯಗಳಿಗೆ ಹೋಗುತ್ತೇನೆ. ಆದರೆ ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ. ಏನು ಮಾಡಲು ಸಾಧ್ಯ?” ಎಂದು ತಿಳಿಸಿದರು.

ಟೆಂಪಲ್ ರನ್ ವಿಚಾರದಲ್ಲಿ ನೀವು ಶಿವಕುಮಾರ್ ಅವರ ಮುಂದೆ ಡಲ್ ಎಂದು ಕೇಳಿದಾಗ, “ನಾನು ನಿಮ್ಮನ್ನೇ ದೇವರೆಂದು ಭಾವಿಸಿದ್ದೇನೆ. ನೀವು ಕೂಡ ಪ್ರಜೆಗಳು. ಜನರೇ ದೇವರು. ಕಾಯಕವೇ ಕೈಲಾಸ ಎಂದು ನಂಬಿದ್ದೇನೆ” ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸತೀಶ್ ಜಾರಕಿಹೊಳಿ ಭೇಟಿ

ಸತೀಶ್ ಜಾರಕಿಹೊಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ರಾಮನಗರ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಭೇಟಿ ಮಾಡಿದ್ದೆ. ಸಿಎಂ ಜತೆ ಚರ್ಚಿಸಿ ಫೆಬ್ರವರಿ ಕೊನೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದರು. ಬಜೆಟ್ ಮುಗಿದ ನಂತರ ಮಾಡುವುದಾಗಿ ಹೇಳಿದ್ದಾರೆ. ನಾನು ಹೊಸದಾಗಿ ಅವರನ್ನು ಭೇಟಿ ಮಾಡಿಲ್ಲ. ಸುಮಾರು ಹತ್ತಾರು ಬಾರಿ ಭೇಟಿ ಮಾಡಿದ್ದೇನೆ. ಕ್ಷೇತ್ರದ ಕೆಲಸದ ವಿಚಾರವಾಗಿ ಎಲ್ಲರ ಜತೆಗೂ ಚರ್ಚೆ ಮಾಡುತ್ತೇನೆ. ಪರಮೇಶ್ವರ್, ಮಹದೇವಪ್ಪ, ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ, ಜಮೀರ್, ಕೃಷ್ಣ ಭೈರೇಗೌಡ ದಿನೇಶ್ ಗುಂಡೂರಾವ್, ರಹೀಮ್ ಖಾನ್, ಹಾಗೂ ಸಿಎಂ ಸೇರಿ ಎಲ್ಲರನ್ನು ಭೇಟಿ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಕೆಲಸ ಕಾರ್ಯಕ್ಕಾಗಿ ಜನ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಸ್ಥಳೀಯವಾಗಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದಾಗ, ಮಂತ್ರಿಗಳ ಅವಶ್ಯಕತೆ ಬಿದ್ದಾಗ ಅವರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದರು.

ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಎಂದು ಕೇಳಿದಾಗ, “ಮಾಧ್ಯಮಗಳಿಗೆ ಇದೊಂದು ಸುದ್ದಿ. ವಿಶ್ಲೇಷಣೆ ಮಾಡುವವರಿಗೆ ಒಂದು ವಿಚಾರಕ್ಕೆ ಯಾವೆಲ್ಲಾ ಆಯಾಮ ನೀಡಬಹುದು ಅದನ್ನು ನೀಡುವುದು ಅವರ ಕೆಲಸ. ಆದರೆ ನಮ್ಮ ಗುರಿ ಸ್ಪಷ್ಟವಾಗಿದೆ” ಎಂದರು.

ಎಲ್ಲಾ ಸಚಿವರಿಗೂ ನಿಮ್ಮ ಮೇಲೆ ವಿಶೇಷ ಕಾಳಜಿ ಇದೆ ಎಂದು ಕೇಳಿದಾಗ, “ನಾನು ಮೊದಲಿನಿಂದಲೂ ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ” ಎಂದರು.

ಶಿವಕುಮಾರ್ ಪಕ್ಷವನ್ನು ನಂಬಿದ್ದಾರೆ

ಪಕ್ಷ ಶಿವಕುಮಾರ್ ಅವರನ್ನು ಡಿಸಿಎಂ ಮಾಡಿದೆ ಎಂದು ಹೇಳಿದಿರಿ, ಅಷ್ಟು ಸಾಕಾ ಎಂದು ಕೇಳಿದಾಗ, “ಅದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಶಿವಕುಮಾರ್ ಅವರು ಪಕ್ಷವನ್ನು ನಂಬಿದ್ದಾರೆ. ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಈಗ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆ ಕಾಲ ಬರುತ್ತದೆಯೋ ಇಲ್ಲವೋ ನನಗೇನು ಗೊತ್ತು, ನಾನು ಹೇಗೆ ಹೇಳಲು ಸಾಧ್ಯ” ಎಂದು ಹೇಳಿದರು.

ನಿಮ್ಮ ಅಣ್ಣನನ್ನು ಸಿಎಂ ಮಾಡುವುದು ನಿಮ್ಮ ಆಸೆ ಎಂದು ಹೇಳಿದ್ದೀರಿ ಎಂದು ಹೇಳಿದಾಗ, “ನನಗೆ ಆ ಆಸೆ ಇದೆ ಎಂದು ಈಗಲೂ ಹೇಳುತ್ತೇನೆ. ನಾನು ನನ್ನ ಆಸೆ ಮುಚ್ಚಿಟ್ಟಿಲ್ಲ. ಅದಕ್ಕೂ ಕಾಲ ಬರಬೇಕು. ಈಗ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಕೂತಿದ್ದಾರೆ. ಅವರನ್ನು ಎಳೆದು ಇವರನ್ನು ಕೂರಿಸಬೇಕು. ಅದು ಹೇಗಾಗುತ್ತದೆ. ಸಿದ್ದರಾಮಯ್ಯ ಅವರು ಆ ಸ್ಥಾನದಲ್ಲಿ ಕೂತಿರುವಾಗ ಅವರ ಗೌರವ, ಘನತೆ, ಅವರ ಮೇಲೆ ಇರುವ ನಂಬಿಕೆ ಎಲ್ಲವನ್ನು ಚಿಂತನೆ ಮಾಡಬೇಕು. ಇದೆಲ್ಲವನ್ನು ಪಕ್ಷ ಮಾಡುತ್ತದೆ” ಎಂದರು.

ನಿಮಗೆ ಆ ನಂಬಿಕೆ ಇದೆಯೇ ಎಂದು ಕೇಳಿದಾಗ, “ಡಿ.ಕೆ. ಶಿವಕುಮಾರ್ ಅವರು ಇರುವುದೇ ನಂಬಿಕೆ ಮೇಲೆ. ಎಲ್ಲರೂ ನಂಬಿಕೆ ಮೇಲೆ ಬದುಕಬೇಕು. ನಂಬಿಕೆ ಇಲ್ಲದೆ ಬದುಕಲು ಸಾಧ್ಯವೇ? ಎಲ್ಲರೂ ಮತ್ತೊಬ್ಬರನ್ನು ನಂಬಿಯೇ ಜೀವನ ಮಾಡಬೇಕು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button