ಜನ ಕಲ್ಲು ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಿ: ರಾಜಕೀಯ ನಾಯಕರಿಗೆ ಡಿ.ಕೆ. ಸುರೇಶ್ ಸಲಹೆ
ಪ್ರಗತಿವಾಹಿನಿ ಸುದ್ದಿ: ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಹಿತಕ್ಕೆ ಪೂರಕವಾಗಿಲ್ಲ. ಜನರಿಗೆ ಅಸಹ್ಯವಾಗುತ್ತಿದ್ದು, ಅವರು ಬೀದಿಯಲ್ಲಿ ಕಲ್ಲು ಹೊಡೆಯುವ ಮುನ್ನ ಎಲ್ಲಾ ಪಕ್ಷಗಳ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಸಲಹೆ ನೀಡಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಶುಕ್ರವಾರ ಉತ್ತರಿಸಿದರು. ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಪದಾಧಿಕಾರಿ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು.
“ಅಭಿವೃದ್ಧಿ ಮಾಡಲಿ ಎಂದು ಜನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ದೇಶದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ.
ಆದರೆ ಜನರಿಂದ ಆಯ್ಕೆಯಾದ ನಾಯಕರು ಆರೋಪ, ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ.
ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ. ಅದನ್ನು ಮರೆತು ಈ ರೀತಿ ಕಿತ್ತಾಡುತ್ತಿರುವುದು ಸರಿಯೇ? ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ. ಈ ಹೊತ್ತಿನಲ್ಲಿ ಜನ ಅಭಿವೃದ್ಧಿ, ಯುವಕರು, ರೈತರ ಸಮಸ್ಯೆ ಬಗೆಹರಿಸುವ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ. ಈ ಆರೋಪಗಳು ರಾಜ್ಯದ ಜನರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಜನ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಎದುರಾಗಲಿದೆ.
ಪರಿಸ್ಥಿತಿ ಹೀಗೆ ಮುಂದಿವರಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ಈ ಪರಿಸ್ಥಿತಿ ಬರಬಹುದು ಎಂದು ಎಲ್ಲಾ ಪಕ್ಷದ ನಾಯಕರಿಗೆ ಎಚ್ಚರಿಸಲು ಬಯಸುತ್ತೇನೆ.
ಆರೋಪ ಪ್ರತ್ಯಾರೋಪಗಳನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ” ಎಂದು ತಿಳಿಸಿದರು.
ಮೈಸೂರಿನಲ್ಲಿ ಜಿ.ಟಿ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ನಾಡಿಗೆ ಒಳ್ಳೆಯದಾಗಲಿ ಎಂದು ಸಿಎಂ ಹಾಗೂ ಡಿಸಿಎಂ ನಾಡ ದೇವಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ. ಚುನಾವಣೆಗೆ ಇನ್ನೂ ಸಮಯವಿದೆ. ರಾಜಕೀಯ ಕೆಸರೆರಚಾಟ ನಿಲ್ಲಲಿ” ಎಂದು ತಿಳಿಸಿದರು.
ಸರಿ ತಪ್ಪುಗಳ ಬಗ್ಗೆ ತನಿಖಾಧಿಕಾರಿಗಳು ತನಿಖೆ ಮಾಡುತ್ತಾರೆ:
ಎಸ್.ಟಿ ಸೋಮಶೇಖರ್ ಹಾಗೂ ಜಿಟಿ ದೇವೇಗೌಡ ಅವರು ಒಟ್ಟಾಗಿ ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿರುವ ಬಗ್ಗೆ ಕೇಳಿದಾಗ, “ಅವರು ದೂರು ಕೊಟ್ಟು ತಮ್ಮ ಕೆಲಸ ಮಾಡಿದ್ದಾರೆ. ನ್ಯಾಯಾಲಯ ಅವರ ಮನವಿ ಪುರಸ್ಕರಿಸಿ ತನಿಖೆಗೆ ಆದೇಶ ನೀಡಿದೆ. ತನಿಖೆ ಮುಗಿಯುವವರೆಗೂ ಎಲ್ಲರೂ ತಾಳ್ಮೆಯಿಂದ ಇರಬೇಕು. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.
ಜಿ.ಟಿ.ಡಿ ವಾಸ್ತವಾಂಶದ ಬಗ್ಗೆ ಮಾತನಾಡಿದ್ದಾರೆ:
ಜಿ.ಟಿ ದೇವೇಗೌಡ ಅವರ ಹೇಳಿಕೆ ಕಾಂಗ್ರೆಸ್ ಗೆ ಆತ್ಮಸ್ಥೈರ್ಯ ತುಂಬಿದೆಯೇ ಎಂದು ಕೇಳಿದಾಗ, “ಇದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ನಾಯಕರಿಗೆ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅವರ ಪಕ್ಷದ ನಾಯಕರು ಮಾಡಿದ್ದನ್ನೆಲ್ಲ ಒಪ್ಪಬೇಕು ಎಂದೇನಿಲ್ಲ. ಅವರು ವಾಸ್ತವತೆ ಯನ್ನು ಹೇಳಿದ್ದಾರೆ. ಇಲ್ಲಿ ಎಲ್ಲ ಪಕ್ಷದವರೂ ಫಲಾನುಭವಿಗಳಿದ್ದು, ಆರೋಪಿಗಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ತೀರ್ಮಾನದಂತೆ ಆಗಿದೆ. ಹೀಗಾಗಿ ಇದನ್ನು ಏಕೆ ದೊಡ್ಡದಾಗಿ ಮಾಡಿತ್ತಿದ್ದೀರಿ ಎಂದು ಹೇಳಿದ್ದಾರೆ” ಎಂದರು.
ಈ ಪ್ರಕರಣ ತಲೆ ತಗ್ಗಿಸುವಂತಹದ್ದು:
ಮುನಿರತ್ನ ಅವರ ಪ್ರಕರಣ ತನಿಖೆ ಹಿಂದುಳಿಯುತ್ತಿದೆ ಎಂಬ ಪ್ರಶ್ನೆಗೆ, “ಈ ವಿಚಾರವಾಗಿ ಮಾಹಿತಿ ಇಲ್ಲ. ಇದು ಅಸಹ್ಯವಾದ ವಾತಾವರಣ. ರಾಜ್ಯದ ಬೆಳವಣಿಗೆಗೆ ಒಳ್ಳೆಯದಲ್ಲ. ಕರ್ನಾಟಕ ಉತ್ತಮ ಆಡಳಿತ, ಬೆಳವಣಿಗೆ ಹಾಗೂ ಪ್ರಗತಿ ಸಾಧಿಸುತ್ತದೆ ಎಂದು ಎಲ್ಲಾ ಕಡೆ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಬೆಳವಣಿಗೆ ತಲೆತಗ್ಗಿಸುವಂತಿದೆ” ಎಂದು ತಿಳಿಸಿದರು.
ಈ ಅಸಹ್ಯ ವಾತವರಣಕ್ಕೆ ಮುನ್ನುಡಿ ಬರೆದಿದ್ದು ಯಾವ ಪಕ್ಷ ಎಂದು ಕೇಳಿದಾಗ, “ಎಲ್ಲಾ ಪಕ್ಷಗಳು ಇದಕ್ಕೆ ಕಾರಣ. ಇದು ಒಂದು ಪಕ್ಷದ ಕೊಡುಗೆ ಅಲ್ಲ. ಸುದ್ದಿಯಲ್ಲಿರಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ಇದರ ಜತೆಗೆ ಮಾಧ್ಯಮಗಳ ಪಾತ್ರವೂ ಇದೆ. ಮಾಧ್ಯಮಗಳು ಸಮಾಜ ತಿದ್ದುವ ಜವಾಬ್ದಾರಿ ಹೊಂದಿವೆ. ಜನ ನಾಯಕರ ಮೇಲೆ ಬೇಸತ್ತಿದ್ದಾರೆ” ಎಂದು ತಿಳಿಸಿದರು.
ನಾನು ವಿಶ್ರಾಂತಿಯಲ್ಲಿ ಇದ್ದೇನೆ
ಚನ್ನಪಟ್ಟಣಕ್ಕೆ ನಿಖಿಲ್ ಅಭ್ಯರ್ಥಿಯಾಗಲಿದ್ದು, 50 ಕೋಟಿ ಕೇಳಿರುವ ಆರೋಪದ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನಿಗ ವಿಶ್ರಾಂತಿಯಲ್ಲಿದ್ದೇನೆ” ಎಂದು ತಿಳಿಸಿದರು.
ರಾಮನಗರ ನಂಬರ್ 1 ಜಿಲ್ಲೆ ಮಾಡುವ ಗುರಿ:
ಚನ್ನಪಟ್ಟಣದಲ್ಲಿ ಸರ್ಕಾರದ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಇದು ಸರ್ಕಾರದ ಜವಾಬ್ದಾರಿ. ಅಲ್ಲಿನ ಶಾಸಕರು ನಿಷ್ಕ್ರಿಯರಾಗಿದ್ದರು. ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಲ್ಲಿನ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಅರ್ಜಿಗಳು ಬಂದಿದ್ದವು, ಚನ್ನಪಟ್ಟಣ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಭಾಗ. ಹಿಂದೆ ಸಾತನೂರು ಕ್ಷೇತ್ರದಲ್ಲಿ ಚನ್ನಪಟ್ಟಣದ ಭಾಗವಾಗಿತ್ತು. ಅವರ ರಾಜಕೀಯ ಜೀವನದಲ್ಲಿ ಆ ಜನರ ಕೊಡುಗೆಯೂ ಇದೆ. ರಾಮನಗರ ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ನಿಲ್ಲುವಂತೆ ಮಾಡುವ ಪ್ರಯತ್ನ ಮಾಡುವುದಾಗಿ ನಾನು, ಡಿಸಿಎಂ ಇಬ್ಬರೂ ಹೇಳಿದ್ದೇವೆ. ನಾನು ಸೋತಿದ್ದರೂ ನಮ್ಮ ಗುರಿ ಜಿಲ್ಲೆಯ ಅಭಿವೃದ್ಧಿ. ಈ ನಿಟ್ಟಿನಲ್ಲಿ ನಾಲ್ಕೂ ತಾಲೂಕಿನ ನಾಯಕರು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಇದ್ದ ಶಾಸಕರು ನಮಗೆ ಸಹಕಾರ ನೀಡುತ್ತಿರಲಿಲ್ಲ. ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ” ಎಂದು ತಿಳಿಸಿದರು.
ನಿರ್ಮಾಪಕ, ನಟ, ನಿರ್ದೇಶಕರು ಒಂದೇ ತಂಡದಲ್ಲಿದ್ದಾರೆ:
ಯೋಗೇಶ್ವರ್ ಅವರು ಅತಂತ್ರರಾದರೆ ಎಂದು ಕೇಳಿದಾಗ, “ಅದು ಅವರ ವೈಯಕ್ತಿಕ ವಿಚಾರ. ಅವರು ಈಗ ಸ್ನೇಹಿತರು. ಅವರಲ್ಲಿ ಒಬ್ಬರು ನಿರ್ದೇಶಕರು, ನಟರು, ನಿರ್ಮಾಪಕರು ಇದ್ದಾರೆ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು. ಒಬ್ಬರು ನಿರ್ಮಾಪಕರಾದರೆ, ಮತ್ತೊಬ್ಬರು ನಟರಾಗುತ್ತಾರೆ. ಅವರ ತಂಡದ ಬಗ್ಗೆ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.
ಜಮೀರ್ ಪ್ರೀತಿ, ಅಭಿಮಾನಕ್ಕೆ ನಮನ:
ಚನ್ನಪಟ್ಟಣಕ್ಕೆ ಸುರೇಶ್ ಅವರೇ ಅಭ್ಯರ್ಥಿಯಾಗಬೇಕು ಎಂದು ಜಮೀರ್ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಅವರ ಅಭಿಮಾನಕ್ಕೆ ಪ್ರೀತಿ ವಿಶ್ವಾಸಕ್ಕೆ ಸಾಷ್ಟಾಂಗ ನಮಸ್ಕಾರಗಳು. ಚುನಾವಣೆ ಘೋಷಣೆ ನಂತರ ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ನಿರ್ಧರಿಸಲಿದೆ” ಎಂದು ತಿಳಿಸಿದರು.
ನಿಮಗೆ ಅನ್ಯಾಯ ಆಗಿದೆ ಹೀಗಾಗಿ ನೀವೇ ಸ್ಪರ್ಧಿಸಬೇಕು ಎಂಬ ಒತ್ತಾಯದ ಬಗ್ಗೆ ಕೇಳಿದಾಗ, “ನನಗೆ ಅನ್ಯಾಯ ಆಗಿಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ” ಎಂದರು.
ಕೊನೆ ಕ್ಷಣದಲ್ಲಿ ನೀವೇ ನಿಲ್ಲುತ್ತೀರಿ ಅದಕ್ಕೆ ಇಷ್ಟು ಕೆಲಸ ಆಗುತ್ತಿದೆ ಎಂದು ಕೇಳಿದಾಗ, “ರಾಮನಗರದಲ್ಲೂ ಸುಮಾರು ₹500 ಕೋಟಿ ಮೊತ್ತದ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಮಾಗಡಿಯಲ್ಲೂ ಕೆಲಸ ನಡೆಯುತ್ತಿವೆ. ನಾನು ಸೋತಿದ್ದೇನೆ ಎಂದು ಕೆಲಸ ನಿಲ್ಲಿಸಿಲ್ಲ. ಆ ಭಾಗದ ಶಾಸಕರು ನಾಯಕರು ಮನವಿ ಮಾಡಿದರೆ ಅವರ ಕೆಲಸ ಮಾಡಿಕೊಡುತ್ತೇವೆ” ಎಂದು ತಿಳಿಸಿದರು.
ಹೊಸ ಸಂಸದರ ಕೆಲಸ ಹೇಗಿದೆ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ನಾನು ಬೇರೆಯವರ ಬಗ್ಗೆ ಮಾಹಿತಿ ಪಡೆಯಲು ಸಮಯಾವಕಾಶವಿಲ್ಲ. ನಾನು ಎಂದಿಗೂ ಹಿಂದೆ ತಿರುಗಿ ನೋಡಲ್ಲ, ಮುಂದೆ ನೋಡುತ್ತೇನೆ, ಋಣಾತ್ಮಕತೆಗಿಂತ ಸಕಾರಾತ್ಮಕತೆ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತೇನೆ. ನನ್ನ ಕಷ್ಟ ಕಾಲದಲ್ಲಿ ನಿಂತವರ ರಕ್ಷಣೆ, ಅಭಿವೃದ್ಧಿ ನನ್ನ ಗುರಿ” ಎಂದು ತಿಳಿಸಿದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು:
ಸಿಎಂ ಅವರು ಮೈಸೂರಲ್ಲಿ ತಾಯಿ ಚಾಮುಂಡೇಶ್ವರಿ ಇನ್ನು ಒಂದು ವರ್ಷ ಆಶೀರ್ವಾದ ಮಾಡಲಿ ಎಂಬ ಹೇಳಿಕೆ ಬಗ್ಗೆ ಕೇಳುದಾಗ, “ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ. ತಾಯಿ ಚಾಮುಂಡಿ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲ” ಎಂದು ತಿಳಿಸಿದರು.
ದಲಿತ ಮುಖಂಡರು ಪ್ರತ್ಯೇಕ ಸಭೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ನಮ್ಮ ಸಮಾಜದ ನಾಯಕರು ಸೇರಿ ಅನೇಕ ವಿಚಾರ ಚರ್ಚೆ ಮಾಡುತ್ತೇವೆ. ಪರಮೇಶ್ವರ್ ಅವರು 8 ವರ್ಷ ಪಿಸಿಸಿ ಅಧ್ಯಕ್ಷರಾಗಿದ್ದರು, ಸತೀಶ್ ಜಾರಕಿಹೊಳಿ ಅವರು ಕಾರ್ಯಾಧ್ಯಕ್ಷರಾಗಿದ್ದವರು. ಆ ಸಮಾಜದ ಕಷ್ಟ ಸುಖ ಕೇಳಿ, ಏಳಿಗೆ ಬಯಸುವುದು, ರಾಜ್ಯದ ವಿದ್ಯಮಾನಗಳನ್ನು ಯಾವ ರೀತಿ ಎದುರಿಸಬೇಕು ಎಂದು ಚರ್ಚೆ ಮಾಡುವುದು ಸಹಜ. ಅದರಲ್ಲಿ ತಪ್ಪೇನಿಲ್ಲ” ಎಂದು ತಿಳಿಸಿದರು.
ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು:
ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, “ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಜನಗಣತಿ ಘೋಷಣೆ ಮಾಡಿದ್ದು, ಈ ಸಮಯದಲ್ಲೇ ಅಗತ್ಯ ಮಾನದಂಡ ಬಳಸಿ ಸಮೀಕ್ಷೆ ಮಾಡಿದರೆ ಯಾವುದೇ ಗೊಂದಲ ಇರುವುದಿಲ್ಲ. ಹೀಗಾಗಿ ಜನಗಣತಿವರೆಗೂ ಕಾಯುವುದು ಉತ್ತಮ ಎಂದು ಹೇಳುತ್ತೇನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ