Politics

*ಮುನಿರತ್ನ ನೇತೃತ್ವದಲ್ಲಿ ಏಡ್ಸ್ ಸೋಂಕು ಹರಡುವ ಜಾಲ; ಸಮಗ್ರ ತನಿಖೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: “ಮುನಿರತ್ನ ಅವರ ನೇತೃತ್ವದಲ್ಲಿ ಏಡ್ಸ್ ಸೋಂಕನ್ನು ಅವರ ವಿರೋಧಿಗಳಿಗೆ ಹರಡಿಸುವ ಯತ್ನ ನಡೆದಿದೆ. ಅವರ ನೇತೃತ್ವದಲ್ಲಿ ಸೋಂಕನ್ನು ಹರಡಿಸುವ ಜಾಲವೇ ಸಕ್ರಿಯವಾಗಿದೆ. ಇದರ ವಿರುದ್ಧ ಸರ್ಕಾರ ವಿಶೇಷ ತನಿಖೆ ನಡೆಸಬೇಕು” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಆಗ್ರಹಿಸಿದರು.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ಯಾರನ್ನೆಲಾ ಬಳಸಿಕೊಂಡು ಸೋಂಕನ್ನು ಹರಡಿಸಲಾಗಿದೆ. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತನಿಖೆ ಮೂಲಕ ಬಹಿರಂಗಗೊಳಿಸಬೇಕಿದೆ” ಎಂದರು.

ಬಿಜೆಪಿ- ಜೆಡಿಎಸ್‌ ಅವರಿಂದ ರಾಜಕೀಯ ಬಣ್ಣ

ಜೆಡಿಎಸ್‌ ಹಾಗೂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಒಕ್ಕಲಿಗ, ದಲಿತ ಹಾಗೂ ಮಹಿಳಾ ಸಮುದಾಯದ ವಿರುದ್ದ ಶಾಸಕ ಮುನಿರತ್ನ ಅವರು ಅವಹೇಳನ ಮಾಡಿದ್ದಾರೆ. ಶಾಸಕರ ಅವಹೇಳನಕಾರಿ ಮಾತುಗಳು ಜಗಜ್ಜಾಹೀರಾಗಿದೆ. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ರಾಜಕೀಯಕ್ಕೂ ಹಾಗೂ ಮುನಿರತ್ನ ಅವರ ಮಾತಿಗೂ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿದರು.

“ದೂರುದಾರರ ವಿರುದ್ಧ ಸಮುದಾಯದ ಹೆಸರಿನಲ್ಲಿ ಅತಿ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ದಲಿತ, ಒಕ್ಕಲಿಗ ಮತ್ತು ಮಹಿಳೆಯರನ್ನು ಬಹಳ ಕೀಳಾಗಿ ನೋಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣವಲ್ಲ. ಅವರ ಮನಸ್ಸಿನ ಮಾತುಗಳು. ಈ ರೀತಿ ಮಾತನಾಡಿ ಎಂದು ನಾವು ಹೇಳಿಲ್ಲ. ಹೊಸದಾಗಿ ಮುನಿರತ್ನ ಅವರ ಮೇಲೆ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಲಿ. ಆ ನಂತರ ಇದಕ್ಕೆ ಸೂಕ್ತ ಉತ್ತರ ಕೊಡುತ್ತೇವೆ” ಎಂದು ಹೇಳಿದರು.

ಅನೇಕ ಹೆಣ್ಣು ಮಕ್ಕಳನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಪ್ರಶ್ನೆ ಕೇಳಿದಾಗ “ಈ ರೀತಿಯ ಕೃತ್ಯಗಳನ್ನು ನನ್ನ ರಾಜಕೀಯ ಜೀವನದಲ್ಲಿ ಕೇಳಿರಲೇ ಇಲ್ಲ. ವಿದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದನ್ನು ಕೇಳಿದ್ದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇದರ ಮೂಲಕ ಬಿಜೆಪಿಯವರ ಬಣ್ಣವೂ ಬಯಲಾಗಬೇಕು” ಎಂದರು.

“ಮುನಿರತ್ನ ಅವರ ಹಿಂದೆ ನಿಂತಿರುವ ಸಿ.ಟಿ.ರವಿ, ಆರ್. ಅಶೋಕ್‌ ಹಾಗೂ ಕುಮಾರಸ್ವಾಮಿ ಅವರು ಇದಕ್ಕೆ ಹೇಳಿಕೆ ನೀಡಬೇಕು. ಕಾಂಗ್ರೆಸ್‌ ಅವರ ಮೇಲೆ ಈ ರೀತಿಯ ಅಸ್ತ್ರ ಪ್ರಯೋಗಿಸಿ ಎಂದು ಇವರುಗಳೇ ಕುಮ್ಮಕ್ಕು ನೀಡಿರಬಹುದು. ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು” ಎಂದರು.

ಎರಡೂ ಸಮುದಾಯಗಳ ಸ್ವಾಮೀಜಿಗಳು ಹೋರಾಟ ಮಾಡಬೇಕು

ಸ್ವಾಮೀಜಿಗಳು ಈ ವಿಚಾರದಲ್ಲಿ ಮದ್ಯಪ್ರವೇಶ ಮಾಡಬೇಕೆ ಎಂದು ಕೇಳಿದಾಗ “ಒಕ್ಕಲಿಗ, ದಲಿತ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದರ ಬಗ್ಗೆ ಎರಡೂ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟವಾಗಬೇಕು. ಇಲ್ಲದಿದ್ದರೆ ದಾರಿಯಲ್ಲಿ ಹೋಗುವವರೆಲ್ಲಾ ಮಾತನಾಡಲು ಪ್ರಾರಂಭ ಮಾಡುತ್ತಾರೆ” ಎಂದರು.

“ನಾನು ನನ್ನ ಜೀವಮಾನದಲ್ಲಿ ಇಂತಹ ಪದಗಳನ್ನು ಕೇಳಿಲ್ಲ. ನಾವುಗಳು ಉತ್ತರಪ್ರದೇಶದಲ್ಲಿ ವಾಸಿಸುತ್ತಿಲ್ಲ. ನಾಗರೀಕತೆಯಿರುವ ಕರ್ನಾಟಕದಲ್ಲಿದ್ದೇವೆ. ಮುನಿರತ್ನ ಮಾಡಿರುವ ಕೃತ್ಯಗಳನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ” ಎಂದು ಹೇಳಿದರು.

ಮುನಿರತ್ನ ಅವರ ಎಲ್ಲಾ ಹಗರಣಗಳ ತನಿಖೆ ಆಗಬೇಕೆ ಎಂದು ಕೇಳಿದಾಗ “ಮಾಧ್ಯಮಗಳು ಬೇರೆಯವರ ಬಗ್ಗೆ ಸುದ್ದಿ ಮಾಡುವಂತೆ ಇವರ ಬಗ್ಗೆಯೂ ನಿಮ್ಮ ಬಳಿ ಇರುವ ದಾಖಲೆಗಳನ್ನು ಬಳಸಿಕೊಂಡು ಸುದ್ದಿ ಮಾಡಬೇಕು. ಆದರೆ ನೀವು ಮಾಡುತ್ತಿಲ್ಲ” ಎಂದರು.

ಕುಮಾರಸ್ವಾಮಿ ಅವರದ್ದು ಮಾತ್ರ ಹಳಸಲು

ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ ಹಳಸಲು ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಅವರದ್ದು ಮಾತ್ರ ಹಳಸಲು, ಬೇರೆಯವರದ್ದು ತಾಜಾ ಪ್ರಕರಣವೇ? ಸತ್ತವರ ಹೆಸರಿನಲ್ಲಿ ಡಿನೋಟಿಫೇಶನ್‌ ಮಾಡಿದ್ದಾರೆ ಎಂದು ಆಗಾಗ ಹೇಳುತ್ತಿರುತ್ತಾರೆ. ಆದರೆ ಅವರ ಅತ್ತೆಯವರೇ ಸತ್ತವರ ಹೆಸರಿನ ಜಮೀನು ಪಡೆದುಕೊಂಡಿದ್ದಾರೆ. ಬೇಸರ ಮಾಡಿಕೊಳ್ಳದೆ ಇದಕ್ಕೆ ಅವರು ಉತ್ತರ ನೀಡಬೇಕು” ಎಂದು ಹೇಳಿದರು.

“ಕುಮಾರಸ್ವಾಮಿ ಅವರ ದ್ವಂದ್ವ ನೀತಿಗಳು, ಜನರಿಗೆ ಸುಳ್ಳು ಹೇಳುವುದು, ಯಾಮಾರಿಸುವುದು, ಮೋಸ ಮಾಡುತ್ತಿರುವ ಅವರ ನಿಲುವಿನ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು” ಎಂದು ಹೇಳಿದರು.

ಕುಮಾರಸ್ವಾಮಿ ಅವರಂತೆ ಬಣ್ಣ ಕಟ್ಟಲು ಬರುವುದಿಲ್ಲ

ಲೋಕಾಯುಕ್ತ ತನಿಖೆ ಗಂಗೇನಹಳ್ಳಿ ಪ್ರಕರಣದಲ್ಲಿ ಏಕೆ ಮುಂದುವರೆದಿಲ್ಲ ಎಂದು ಕೇಳಿದಾಗ “ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ನಾನು ಕುಮಾರಸ್ವಾಮಿ ಅವರಂತೆ ಲಾಯರ್‌ ಅಲ್ಲ, ಅವರಂತೆ ಬಣ್ಣ ಕಟ್ಟಲು ಬರುವುದಿಲ್ಲ” ಎಂದರು.

ಗಣೇಶ ವಿಸರ್ಜನೆ ವೇಳೆ ನಡೆಯುತ್ತಿರುವ ಗಲಾಟೆಗಳ ಬಗ್ಗೆ ಕೇಳಿದಾಗ “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕೆಲವು ಕಡೆ ಮಾತ್ರ ಸಂದರ್ಭ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಯಾವುದೇ ಸಮುದಾಯವಿದ್ದರೂ ಅವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು” ಎಂದರು.

ಚನ್ನಪಟ್ಟಣ ನಗರಸಭೆಯ ಜೆಡಿಎಸ್‌ ಸದಸ್ಯರು ಕಾಂಗ್ರೆಸ್‌ ಸೇರಿರುವ ಬಗ್ಗೆ ಕೇಳಿದಾಗ “ಇದರ ಬಗ್ಗೆ ಈ ಮೊದಲೇ ತೀರ್ಮಾನವಾಗಿತ್ತು. ಈಗ ಅಧಿಕೃತವಾಗಿ ಆದೇಶವಾಗಿದೆ. 14 ಜನ ಸದಸ್ಯರಲ್ಲಿ13 ಮಂದಿ ಸೇರ್ಪಡೆಯಾಗಿದ್ದಾರೆ. ಇದರ ಬಗ್ಗೆ ಹಿಂದೆಯೇ ಅರ್ಜಿ ನೀಡಿದ್ದೆವು. ಈಗ ಇದನ್ನು ಅಧಿಕೃತಗೊಳಿಸಿದ್ದಾರೆ” ಎಂದರು.

ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್‌ ಅವರು ನಿಲ್ಲದಿದ್ದರೆ, ಶರತ್‌ ಚಂದ್ರ ಅವರಿಗೆ ಟಿಕೆಟ್‌ ನೀಡಿ ಎನ್ನುವ ಬೇಡಿಕೆ ಬಗ್ಗೆ ಕೇಳಿದಾಗ “ಅವರವರ ಅನಿಸಿಕೆಗಳನ್ನು ಹೇಳುತ್ತಿರುತ್ತಾರೆ. ಇದರ ಬದಲು ಮಾಧ್ಯಮಗಳು ಮುನಿರತ್ನ ಅವರ 100 ಎಪಿಸೋಡ್ ಗಳ ಹಾಗೂ ಕಾಂಪೌಂಡ್‌ ಬಿದ್ದು ಹೋದ ವಿಚಾರವನ್ನು ಬಯಲು ಮಾಡಿ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button