ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳೆದ 63 ದಿನಗಳಿಂದ ದೆಹಲಿಯಲ್ಲಿದ್ದ ನಾನು ಇಂದು ಬೆಂಗಳೂರಿಗೆ ಬಂದಿದ್ದೇನೆ. ಕೊರೋನಾ ಸೋಂಕನ್ನು ತಡೆಗಟ್ಟುವ ತಂಡದಲ್ಲಿ ನಾನಿದ್ದೇನೆ. ಹೀಗಾಗಿ ನಾನು ತುರ್ತು ಸೇವೆಯಲ್ಲಿ ಇದ್ದೇನೆ. ನಾನೂ ಕೂಡ ಕೊರೊನಾ ವಾರಿಯರ್ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.
ದೇಶಾದ್ಯಂತ ದೇಶೀಯ ವಿಮಾನಗಳ ಸಂಚಾರ ಇಂದಿನಿಂದ ಆರಂಭವಾಗಿದ್ದು, ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವವರು 2 ವಾರಗಳ ಹೋಂ ಕ್ವಾರಂಟೈನ್ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಇದೇ ವೇಳೆ ಇಂದು ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಸರ್ಕಾರದ ನಿಯಮಗಳನ್ನು ಗಮನಿಸದೇ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಕೊರೋನಾ ಸೋಂಕನ್ನು ಕಡಿಮೆ ಮಾಡುವ ತಂಡದಲ್ಲಿದ್ದೇನೆ. ನಾವು ಹೊರಗೆ ಬರಬಾರದು ಅಂದರೆ ಹೇಗೆ? ಇಂದು ವಿಕಾಸ ಸೌಧದಲ್ಲಿ ಸಭೆ ಇದ್ದು, ನಾನು ಫಾರ್ಮಾ ಮಿನಿಸ್ಟರ್ ಆಗಿ ಆ ಸಭೆ ನಡೆಸಬೇಕು. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾನು ತುರ್ತು ಸೇವೆಯಲ್ಲಿ ಬಂದಿದ್ದರೂ ಜಾಗರೂಕತೆಯಿಂದ ಇದ್ದೇನೆ. ಆರೋಗ್ಯ ಸೇತು ಆ್ಯಪ್ ಕೂಡ ಹಾಕಿಕೊಂಡಿದ್ದೇನೆ. ಅದರಲ್ಲಿ ನಾನು ಸೇಫ್ ಅಂತ ತೋರಿಸುತ್ತದೆ. ಇದನ್ನೆಲ್ಲಾ ತಿಳಿದುಕೊಂಡೇ ನಾವು ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ದೇಶದಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು ಎಂದು ಹೇಳಿದ್ದಾರೆ.
ನಾನು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ನನಗೆ ಟೆಸ್ಟ್ ಮಾಡಿದರು. ನನ್ನ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ಕೂಡ ನೋಡಿದರು. ಇದನ್ನೆಲ್ಲ ನೋಡಿದ ಬಳಿಕವೇ ನನ್ನನ್ನು ಹೊರಗೆ ಬಿಟ್ಟಿದ್ದು ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ