Kannada NewsKarnataka NewsLatest

ಕೊರೋನಾದಿಂದ ಗುಣಮುಖರಾದ ಅಪ್ಪ, ಮಗ: ಕೆಎಲ್ಇ ಆಸ್ಪತ್ರೆಯಿಂದ ಬಿಡುಗಡೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೊರೊನಾ ವೈರಸ್ ಕೊವಿಡ್ -೧೯ ಅನ್ನು ಜಯಿಸಿ ಸಂಪೂರ್ಣ ಗುಣಮುಖರಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಇಬ್ಬರು ಬಿಡುಗಡೆಗೊಂಡರು.
ಅಥಣಿ ಮೂಲದ ತಂದೆ ೭೦ ವರ್ಷ ಹಾಗೂ ಮಗ ೩೦ ವರ್ಷ ವಯಸ್ಸಾದವರಾಗಿದ್ದು ಕಳೆದ ೭ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ವೈರಸ್ ನಿಂದ ಸಂಪೂರ್ಣ ಗುಣಮುಖವಾಗಿದ್ದು, ಅವರನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಪುಷ್ಪಗುಚ್ಚ ನೀಡಿ ಆಸ್ಪತ್ರೆಯಿಂದ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,  ಆಸ್ಪತ್ರೆಯಲ್ಲಿ ಕೋವಿಡ್ -೧೯ ಅನ್ನು ಎದುರಿಸಲು ಸಕಲ ವ್ಯವಸ್ಥೆಯನ್ನು ಕಳೆದ ಮೂರು ತಿಂಗಳ ಹಿಂದೆಯೇ ಮಾಡಿಕೊಳ್ಳಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಇದನ್ನು ಎದುರಿಸಲು ನಾವು ಸರಕಾರದೊಂದಿಗೆ ಕೈಜೋಡಿಸಿ, ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್ -೧೯ ರೋಗಿಗಳಿಗಾಗಿಯೇ ಸುಮಾರು ೪೦ ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಅವುಗಳಲ್ಲಿ ೪ ಹಾಸಿಗೆಗಳು ವೆಂಟಿಲೇಟರ್ ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಹೊಂದಿವೆ. ತುರ್ತು ಪರಿಸ್ಥಿಯನ್ನು ನಿಭಾಯಿಸಲು ಇವು ಅನುಕೂಲವಾಗಲಿವೆ ಎಂದು ತಿಳಿಸಿದರು.
ಕೋವಿಡ್ ಚಿಕಿತ್ಸೆಯಲ್ಲಿ ಯಾವುದೇ ನ್ಯೂನ್ಯತೆಗಳು ಎದುರಾಗದಂತೆ ಸಕಲ ವ್ಯವಸ್ಥೆಯೊಂದಿಗೆ ಚಿಕಿತ್ಸೆಗಾಗಿ ಮುಂದಡಿ ಇಡಲಾಗಿದೆ. ಈಗಾಗಲೇ ೮ ಜನ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ ಈಗಾಗಲೇ ಇಬ್ಬರು ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ರೋಗಿಗಳು ಗುಣಮುಖವಾಗಲಿ ಹಾಗೂ ಕೊವಿಡ್ -೧೯ ನಿರ್ನಾಮವಾಗಲಿ ಎಂದು ಬಯಸಿ, ಸಕಲರೂ ಆರೋಗ್ಯವಾಗಲಿ, ಸಾಮಾಜಿಕ ಪಿಡುಗು ಕೊನೆಯಾಗಲೀ ಎಂದು ಹಾರೈಸಿದರು.
ಚಿಕಿತ್ಸೆಯ ನಂತರ ಗುಣಮುಖರಾದ ಹಿರಿಯರು, ಯಾವುದೇ ನ್ಯೂನ್ಯತೆ ಬರದ ಹಾಗೆ ಅತೀ ಹೆಚ್ಚು ಕಾಳಜಿ ತೆಗೆದುಕೊಂಡು ಚಿಕಿತ್ಸೆ ನೀಡಿದರು. ವೈದ್ಯಕೀಯ ಸೇವೆಯೊಂದಿಗೆ ಅವರ ಪ್ರೀತಿ ವಾತ್ಸಲ್ಯ ಹಾಗೂ ಮಾನವೀಯತೆಗೆ ನಾವು ಚಿರಋಣಿ ಎಂದು ಭಾವುಕರಾಗಿ ನುಡಿದರು.
ಇದಕ್ಕೂ ಮೊದಲು ಕೋವಿಡ್ ವಾರ್ ರೂಮ್ ಅನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಡಿ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಮೆಡಿಕಲ್ ಸೂಪರಿಟೆಂಡೆಂಟ ಡಾ. ಆರ್ ಎಸ್ ಮುಧೋಳ, ಡಾ. ಎ ಎಸ್ ಗೋಗಟೆ, ಡಾ. ಮಾಧವಪ್ರಭು ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button