*ದಸರಾ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಚಿತ್ರಹಿಂಸೆ*: *ಟಿ.ಸಿ ಕೊಟ್ಟು ಬೆದರಿಕೆ ಹಾಕಿದ ಕಾಲೇಜು ಆಡಳಿತ ಮಂಡಳಿ*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಟಿ.ಸಿ ಕೊಟ್ಟು ಬೌನ್ಸ್ ರ್ ಗಳನ್ನು ಕರೆದು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂಡಿ ಹಾಕಿ ಬೌನ್ಸರ್ಗಳನ್ನು ಕರೆಯಿಸಿಕೊಂಡು ಬೆದರಿಸಿದ್ದಲ್ಲದೇ ಕಾಲೇಜು ಆಡಳಿತ ಮಂಡಳಿಯು ವಿದ್ಯಾಅರ್ಥಿಗಳಿಗೆ ಟಿ.ಸಿ. ನೀಡಿದೆ.
ಈ ಘಟನೆ ಬೆಂಗಳೂರಿನ ಕೋಗಿಲು ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ನಡೆದಿದೆ. ಪಿಯು ಕಾಲೇಜು ಮುಖ್ಯಸ್ಥ ಸಲ್ಮಾನ್ ವಿರುದ್ಧ ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಬೆದರಿಕೆ ಹಾಗೂ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ದಸರಾ ರಜೆ ನೀಡುವಂತೆ 15ರಿಂದ 20 ವಿದ್ಯಾರ್ಥಿಗಳ ಒಗ್ಗೂಡಿ ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ರಜೆ ನೀಡಲು ಆಡಳಿತ ಮಂಡಳಿ ನಿರಾಕರಿಸಿತ್ತು. ಅಕ್ಟೋಬರ್ 14 ರಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಕ್ಲಾಸ್ ರೂಮ್ನಲ್ಲಿ ಕೂಡಿ ಹಾಕಲಾಗಿತ್ತು. ಐ.ಡಿ. ಕಾರ್ಡ್ಗಳನ್ನು ಕಸಿದುಕೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ತರಗತಿಯಲ್ಲಿ ಬಲವಂತವಾಗಿ ಇರಿಸಲಾಗಿತ್ತು.
ಸಾಲದ್ದಕ್ಕೆ ಕಾಲೇಜಿಗೆ ಬೌನ್ಸರ್ಗಳನ್ನು ಕರೆಯಿಸಿಕೊಂಡು ಬೆದರಿಕೆ ಹಾಕಿಸಲಾಗಿತ್ತು. ಕಾಲೇಜಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದರು. ಅಲ್ಲದೆ ತರಗತಿಯಲ್ಲಿ ಸಂಜೆವರೆಗೂ ನಿಲ್ ಡೌನ್ ನಲ್ಲಿ ಕೂರಿಸಿಕೊಂಡಿದ್ದರು. ಸಂಜೆವರೆಗೂ ತಿನ್ನಲೂ ಊಟ ಹಾಗೂ ಕುಡಿಯಲು ನೀರು ನೀಡಿದೆ ಹಿಂಸಿಸಿದ್ದಾರೆ.
ಈ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ದಸರಾ ರಜೆ ಕೇಳುವುದಿಲ್ಲ ಎಂದು ಹೇಳಿದರೂ ವಿದ್ಯಾರ್ಥಿಗಳನ್ನು ಬಿಟ್ಟಿಲ್ಲ. ಕೊನೆಗೆ ಸಂಜೆ ವೇಳೆಗೆ ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಬಳಿಕ ಏಕಾಏಕಿ ಕಾಲೇಜು ಆಡಳಿತ ಮಂಡಳಿಯು ಇ-ಮೇಲ್ ಮುಖಾಂತರ ಟಿ.ಸಿ. ನೀಡಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿಗಳ ಪೋಷಕರು ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



