*ಬೈಪಾಸ್ನಲ್ಲಿ ದೆವ್ವದ ವದಂತಿ*: *ಬಿಳಿಸೀರೆ ಫೋಟೋ ವೈರಲ್, ಪೊಲೀಸರಿಂದ ಸತ್ಯಾಂಶ ಬಯಲು!*

ಪ್ರಗತಿವಾಹಿನಿ ಸುದ್ದಿ: ಬೈಪಾಸ್ ರಸ್ತೆಯಲ್ಲಿ ಬಿಳಿಸೀರೆ ಧರಿಸಿದ ಮಹಿಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೆವ್ವದ ಕಾಟದ ವದಂತಿ ಹರಡಿದೆ. ರಾತ್ರಿ ವೇಳೆ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರ ಮೇಲೆ ದೆವ್ವ ದಾಳಿ ಮಾಡಿದೆ ಎಂಬ ಸಂದೇಶಗಳೂ ಹರಿದಾಡುತ್ತಿವೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಅಚ್ಚರಿಯ ಮಾಹಿತಿ ನೀಡಿದ್ದಾರೆ. ಇಂತಹ ಯಾವುದೇ ಘಟನೆ ನಡೆದಿಲ್ಲ, ಕೃತಕ ಬುದ್ಧಿಮತ್ತೆ (AI) ಬಳಸಿ ಸುಳ್ಳು ಚಿತ್ರಗಳನ್ನು ಸೃಷ್ಟಿಸಿ ಭಯ ಹುಟ್ಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 12ರ ರಾತ್ರಿ ಚನ್ನಗಿರಿ ಪಟ್ಟಣದ ಹೊರವಲಯದಲ್ಲಿರುವ ಬೈಪಾಸ್ ರಸ್ತೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಯುತ್ತಿದ್ದಾಗ ಮೂವರು ಕಾರ್ಮಿಕರ ಮೇಲೆ ದೆವ್ವ ದಾಳಿ ಮಾಡಿದೆ ಎಂಬ ಬರಹಗಳೊಂದಿಗೆ ಫೋಟೋಗಳು ಹರಿದಾಡಿವೆ. ಬಿಳಿಸೀರೆ ಧರಿಸಿದ ಮಹಿಳೆ ರಸ್ತೆ ಪಕ್ಕದಲ್ಲಿ ನಿಂತಿರುವ ಚಿತ್ರ ಹಾಗೂ ಕೆಲಸ ಮಾಡುತ್ತಿದ್ದ ಪುರುಷರ ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಬೈಪಾಸ್ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡಲು ಜನರು ಭಯಪಡುವಂತಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಜವಾಗಿಯೂ ಇಂತಹ ಘಟನೆ ನಡೆದಿದೆಯೇ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ಬಳಿಕ ಪ್ರತಿಕ್ರಿಯಿಸಿರುವ ರವೀಶ್, ಬಿಳಿಸೀರೆ ಧರಿಸಿದ ಮಹಿಳೆ ಕಾಣಿಸಿಕೊಂಡಿದ್ದಾಳೆ ಅಥವಾ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂಬ ಯಾವುದೇ ಘಟನೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಚಿತ್ರಗಳನ್ನು ಸೃಷ್ಟಿಸಿ, ಅವುಗಳನ್ನು ನೈಜ ಘಟನೆಗಳಂತೆ ಬಿಂಬಿಸಿ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಸುಳ್ಳು ಚಿತ್ರಗಳು ಮತ್ತು ಸಂದೇಶಗಳನ್ನು ಹರಿಬಿಟ್ಟಿರುವ ಇನ್ಸ್ಟಾಗ್ರಾಂ ಖಾತೆಯನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪರಿಶೀಲನೆ ಬಳಿಕ ಸುಳ್ಳು ಸುದ್ದಿಗಳನ್ನು ಹರಡಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಚನ್ನಗಿರಿ ಬೈಪಾಸ್ನಲ್ಲಿ ದೆವ್ವದ ಕಾಟದ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಫೋಟೋಗಳು ಮತ್ತು ಸಂದೇಶಗಳನ್ನು ಪರಿಶೀಲಿಸದೆ ನಂಬಬಾರದು, ಹಂಚಿಕೊಳ್ಳಬಾರದು ಎಂಬುದನ್ನು ಈ ಘಟನೆ ಮತ್ತೆ ನೆನಪಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




