
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ನೀಡಲಾಗಿದ್ದ ದಸರಾ ರಜೆ ಮುಗಿದಿದ್ದು, ಇಂದಿನಿಂದ ಮಕ್ಕಳು ಮತ್ತೆ ಶಾಲೆಗಳತ್ತ ಮರಳಿದ್ದಾರೆ. ಆದರೆ ಒಂದು ಜಿಲ್ಲೆಯಲ್ಲಿ ಮಾತ್ರ ದಸರಾ ರಜೆ ವಿಸ್ತರಿಸಲಾಗಿದೆ.
ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಮನವಿಯನ್ನು ಪರಿಗಣಿಸಿ ಶಾಲಾ ಶಿಕ್ಷಣ ಇಲಾಖೆಯೇ ಈ ಜಿಲ್ಲೆಯಲ್ಲಿ ಶಾಲೆಗಳಿಗೆ ದಸರಾ ರಜೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಹೌದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಕ್ಟೋಬರ್ 21ರವರೆಗೆ ಮಾತ್ರ ಶಾಲೆಗಳಿಗೆ ದಸರಾ ರಜೆ ನೀಡಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ದಸರಾ ರಜೆ ವಿಸ್ತರಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪೋಷಕರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಮನವಿಯನ್ನು ಪರಿಗಣಿಸಿ ಅಕ್ಟೋಬರ್ 22ರವರೆಗೆ ರಜೆ ಮುಂದುವರಿಸಲು ನಿರ್ಧರಿಸಲಾಗಿದೆ.
ಹೀಗಾಗಿ ಜಿಲ್ಲೆಯ ಶಾಲೆಗಳಿಗೆ ಇಂದು ರಜೆ ಇರಲಿದ್ದು, ಅಕ್ಟೋಬರ್ 23ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 21ರಂದು ಹೊರಡಿಸಲಾದ ಅಧಿಕೃತ ಜ್ಞಾಪನ ಪತ್ರದಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ರಜೆ ವಿಸ್ತರಣೆಯ ನಿರ್ಧಾರವನ್ನು ತಿಳಿಸಿದ್ದಾರೆ.
ಐತಿಹಾಸಿಕ ದಸರಾ ಉತ್ಸವದ ಕೊನೆಯ ದಿನವಾದ ಅಕ್ಟೋಬರ್ 21ರಂದು ಪೂಜಾ ವಿಧಿವಿಧಾನಗಳು ಹಾಗೂ ಮೆರವಣಿಗೆಗಳು ತಡರಾತ್ರಿಯವರೆಗೂ ನಡೆಯಲಿವೆ. ಈ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸುವುದರಿಂದ ಮರುದಿನವೇ ಶಾಲೆಗೆ ಹಾಜರಾಗುವುದು ಕಷ್ಟವಾಗಬಹುದು ಎಂಬುದು ರಜೆ ವಿಸ್ತರಣೆಗೆ ಪ್ರಮುಖ ಕಾರಣವಾಗಿದೆ.
ಇದಲ್ಲದೆ, ದೂರದ ಸ್ಥಳಗಳಿಂದ ದಸರಾ ಆಚರಣೆಗೆ ಬಂದಿರುವ ಕುಟುಂಬಗಳು ವಾಪಸ್ ಮನೆಗೆ ತಲುಪಲು ವಿಳಂಬವಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 22ರಂದು ಶಾಲೆಗಳನ್ನು ಪುನರಾರಂಭಿಸುವ ಬದಲು ಒಂದು ದಿನ ರಜೆ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಒಂದು ದಿನ ದಸರಾ ರಜೆ ವಿಸ್ತರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



