Film & EntertainmentKannada NewsKarnataka NewsLatest

*ಯಶ್ ಸ್ಟಾರ್‌ಡಂಗೆ ಸಾಯಿ ಪಲ್ಲವಿ ಫಿದಾ*: *ಭಾಷೆಯ ಗಡಿ ಮೀರಿದ ಅಭಿಮಾನಕ್ಕೆ ಮೆಚ್ಚುಗೆ!*

ಪ್ರಗತಿವಾಹಿನಿ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ಜನಪ್ರಿಯತೆಗೆ ನಟಿ ಸಾಯಿ ಪಲ್ಲವಿ ಮನಸೋತಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಯಶ್ ಯಾವ ಭಾಷೆಯ ಪ್ರದೇಶಕ್ಕೆ ಹೋದರೂ ಅಭಿಮಾನಿಗಳಿಂದ ಸಿಗುವ ಅದ್ಭುತ ಸ್ವಾಗತವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಯಶ್ ಸರ್ ಬರುವ ವೇಳೆಗೆ ಜನರಿಂದ ಕೇಳಿಬರುವ ಹರ್ಷೋದ್ಗಾರ ತುಂಬಾ ಆಕರ್ಷಕವಾಗಿರುತ್ತದೆ. ಇಂತಹ ಸ್ಟಾರ್‌ಡಂ ಸಿಗುವುದು ಅಪರೂಪ” ಎಂದು ಸಾಯಿ ಪಲ್ಲವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಬಗ್ಗೆ ಮಾತನಾಡುವಾಗ ಸಾಯಿ ಪಲ್ಲವಿ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು.

‘ಕೆಜಿಎಫ್’ ಮೂಲಕ ಯಶ್ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ‘ಟಾಕ್ಸಿಕ್’ ಚಿತ್ರದಿಂದಲೂ ನಿರೀಕ್ಷೆ ಹೆಚ್ಚಿದೆ. ಯಶ್ ಯಾವ ಭಾಷೆಯ ಚಿತ್ರದಲ್ಲಿ ನಟಿಸದಿದ್ದರೂ, ಬೇರೆ ಭಾಷೆಗಳ ಪ್ರೇಕ್ಷಕರಿಂದಲೂ ಅದೇ ಮಟ್ಟದ ಪ್ರೀತಿ ಮತ್ತು ಹರ್ಷೋದ್ಗಾರ ಸಿಗುತ್ತದೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

“ನಾವೆಲ್ಲರೂ ಬೇರೆ ಬೇರೆ ಭಾಷೆಗಳಿಗೆ ಸೇರಿದವರಾಗಿರಬಹುದು. ಆದರೆ, ಈ ಸಿನಿಮಾ ನಮ್ಮೆಲ್ಲರನ್ನು ಒಂದಾಗಿಸಿದೆ. ಭಾಷೆಯ ಗಡಿಗಳನ್ನು ಮೀರಿ ನಿಲ್ಲುವ ಶಕ್ತಿ ಸಿನಿಮಾಕ್ಕಿದೆ” ಎಂಬ ಮಾತುಗಳ ಮೂಲಕ ಭಾರತೀಯ ಚಿತ್ರರಂಗದ ಏಕತೆಯ ಮಹತ್ವವನ್ನು ಸಾಯಿ ಪಲ್ಲವಿ ಎತ್ತಿಹಿಡಿದಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಯಶ್ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ನಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಮೂಡಿದ್ದು, ಯಶ್ ಮತ್ತು ಸಾಯಿ ಪಲ್ಲವಿ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button