ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಮೈಸೂರು ದಸರಾ ಇವತ್ತು ಜಗತ್ ಪ್ರಸಿದ್ಧವಾಗಿದೆ. ಅಲ್ಲಿ ಸರಕಾರದ ವಿಶೇಷವಾಗಿರುವ ಕಾರ್ಯಕ್ರಮಗಳು ನಡೆಯುತ್ತವೆ. ಕೋಟ್ಯಾಂತರ ರೂಗಳನ್ನು ಮೈಸೂರು ದಸರಾಕ್ಕಾಗಿ ಸರ್ಕಾರ ವ್ಯಯ ಮಾಡುತ್ತದೆ. ಜೊತೆಗೆ ಮೈಸೂರಿನ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದೆ.
ಆದರೆ ಹುಕ್ಕೇರಿ ದಸರಾ ಸರಕಾರದ ದಸರಾ ಅಲ್ಲ. ಸಹಕಾರದ ದಸರಾ. ಇಲ್ಲಿ ಶ್ರೀಗಳೇ ಸ್ವತಃ ಭಕ್ತರಿಗೆ ವಿಶೇಷವಾಗಿರುವ ನೆರವು ನೀಡುವುದು. ಅವರ ನೋವಿಗೆ ಸ್ಪಂದಿಸುವುದು. ಅದು ನಿಜಕ್ಕೂ ಕೂಡ ಮಾನವೀಯತೆಯಿಂದ ಕೂಡಿದೆ. ಅಲ್ಲಿ ಸರಕಾರವಿದ್ದರೆ, ಇಲ್ಲಿ ಶ್ರಮವಿದೆ ಎಂದು ಮೈಸೂರು ಅರಮನೆ ಪದಕಟ್ಟಿ ಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ, ಹುಕ್ಕೇರಿಯ ಹಿರೇಮಠ ಎಲ್ಲದರಲ್ಲಿಯೂ ಕೂಡ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ. ಮೈಸೂರಿನಿಂದ ನಾವು ಇಲ್ಲಿ ಬಂದಿದ್ದೇವೆ ಎಂದರೆ ಪರಮಪೂಜ್ಯರ ಅಖಂಡ ಕರ್ನಾಟಕದ ಪರಿಕಲ್ಪನೆ ಮೆಚ್ಚುವಂತದ್ದು. ಆದರೂ ಉತ್ತರ ಕರ್ನಾಟಕಕ್ಕೆ ಹೆಚ್ಚು ನೆರವನ್ನು ಸರಕಾರ ನೀಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾಡದೇವತೆ ಚಾಮುಂಡೇಶ್ವರಿ ಕೃಪೆಯೊ ಅನ್ನುವಂತೆ ಇವತ್ತು ಮೈಸೂರಿನ ಶ್ರೀಗಳು ಹುಕ್ಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಂಡು ಏಳು ದಿನಗಳವರೆಗೆ ಮೌನ ಅನುಷ್ಠಾನ ಮಾಡುವುದರೊಂದಿಗೆ ಈ ಭಾಗಕ್ಕೆ ಒಳಿತಾಗಲಿ ಎಂದು ಹರಿಸುತ್ತಿರುವುದು ಅಭಿಮಾನದ ಸಂಗತಿ. ಪರಮಪೂಜ್ಯರ ವಿಶೇಷವಾಗಿರುವ ಒಂದು ಪೂಜಾ ಕೈಂಕರ್ಯಕ್ಕೆ ನಾವು ನಮಿಸುತ್ತೇವೆ ಎಂದರು.
ಇಂಚಿಗೇರಿಯ ಪರಮಪೂಜ್ಯ ಅಭಿನವ ಮಂಜುನಾಥ ಮಹಾಸ್ವಾಮಿಗಳು ಮಾತನಾಡಿ ನೆರೆ ಸಂತ್ರಸ್ಥರಿಗೆ ನೆರವಾಗಿ, ಪ್ಲಾಸ್ಟಿಕ್ ಮುಕ್ತ ಮಹಾಭಾರತದ ಅರಿವಾಗಿ, ಬಡಜನರಿಗೆ ಬಂಧುವಾಗಿ ನಿಂತಿರುವ ಶ್ರೀಗಳು ನಿಜಕ್ಕೂ ಕೂಡ ನಮ್ಮ ಭಾಗದಲ್ಲಿ ಇದ್ದಾರೆ ಎನ್ನುವುದೇ ಒಂದು ದೊಡ್ಡ ಹೆಮ್ಮೆ ಎಂದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಮಾತನಾಡುತ್ತಾ ನಮ್ಮೂರಿನಲ್ಲಿಯೂ ಕೂಡ ಇಂತಹ ಉತ್ಸವ ನಡೆಯುತ್ತದೆ ಎನ್ನುವುದು ಹೆಮ್ಮೆಯ ಸಂಗತಿ. ಆದರೆ ಜನರಿಗೆ ಕಷ್ಟ ಬಂದಾಗ ಅವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
ಹುಬ್ಬಳ್ಳಿಯ ಹೇಮರಾಜ ಶಾಸ್ತ್ರಿಗಳು ಹೇಮರೆಡ್ಡಿ ಮಲ್ಲಮ್ಮನ ಪುರಾಣ ಪ್ರವಚನವನ್ನು ನೆರವೇರಿಸಿದರು. ಪಾಟೀಲ್ ಗವಾಯಿಗಳು ಅದ್ಭುತವಾದ ಸಂಗೀತವನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಗುರುಕುಲದ ವೇದವಟುಗಳ ವೇದಗೋಷ, ಪ್ರಾರ್ಥನೆ ಮತ್ತು ವಿಶೇಷವಾಗಿ ಚಂಡಿಕಾಯಾಗ ಜರುಗಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ