Belagavi NewsBelgaum News

*ಬಾಲಕಾರ್ಮಿಕರ ರಕ್ಷಣೆ, ಪುನರ್ವಸತಿಗೆ ಡಿಸಿ ನಿತೇಶ್ ಪಾಟೀಲ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಮೇ 31) ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಬಾಲಕಾರ್ಮಿಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಆಗಾಗ ಅನೀರಿಕ್ಷಿತ ಭೇಟಿ ಮಾಡುವುದರಿಂದ ಬಾಲಕಾರ್ಮಿಕರ ರಕ್ಷಣಾ ಕಾರ್ಯ ಪರಿಣಾಮಕಾರಿಯಾಗಲಿದೆ ಎಂದರು.

Home add -Advt

ಬಾಲಕಾರ್ಮಿಕರ ರಕ್ಷಣಾ ಕಾಯ್ದೆ-ಜಾಗೃತಿಗೆ ನಿರ್ದೇಶನ

ಬಾಲಕಾರ್ಮಿಕ ಕಾಯ್ದೆ ಅನುಷ್ಠಾನ, ತಪಾಸಣೆ, ಮೊಕದ್ದಮೆ ದಾಖಲಿಸುವುದು, ದಂಡ ವಸೂಲಾತಿ ಜತೆಗೆ ಕಾಯ್ದೆಯ ಕುರಿತು ಅರಿವು ಮೂಡಿಸಲು ಗೋಡೆಬರಹಗಳನ್ನು ಬರೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.

ಬಾಲಕಾರ್ಮಿಕರ ರಕ್ಷಣೆ ಕುರಿತು ಅಂಗನವಾಡಿ ಕೇಂದ್ರ, ಶಾಲಾ- ಕಾಲೇಜುಗಳು ಮತ್ತು ಸರಕಾರಿ ಕಚೇರಿಗಳ ಗೋಡೆಗಳ ಮೇಲೆ ಬರಹಗಳನ್ನು ಬರೆಸಬೇಕು ಎಂದು ಹೇಳಿದರು. ಬಾಲಕಾರ್ಮಿಕರ ರಕ್ಷಣೆ ಹಾಗೂ ಪುನರ್ವಸತಿ ಅಭಿಯಾನದ ಅಂಗವಾಗಿ ಜೂನ್ 1 ರಿಂದ 30ರವರೆಗೆ ಪ್ಯಾನ್ ಇಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು  ಎಂದು ತಿಳಿಸಿದರು.

ಬಾಲ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986 ರ ಕರ್ನಾಟಕ ನಿಯಮಗಳನ್ವಯ ಮಕ್ಕಳು ಬಾಲ ನಟ/ನಟಿಯಾಗಿ ನಟನಾ ಕೆಲಸ ಮಾಡಲು ಇರುವ ಕಾನೂನಾತ್ಮಕ ಅಂಶಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕಾರ್ಯಕಾರಿ ಸಮಿತಿಗಳ ನವೀಕರಣ

ನಿಯಮಾನುಸಾರ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಕಾರ್ಯಕಾರಿ ಸಮಿತಿಗಳನ್ನು ನವೀಕರಣಗೊಳಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅನುಮೋದನೆ ನೀಡಿದರು. ಕಳೆದ ವರ್ಷದಂತೆ ರಂಗಮಂದಿರದಲ್ಲಿ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಶ್ವ ಬಾಲಕಾರ್ಮಿಕರ ದಿನಾಚರಣೆ ದಿನದಂದೇ ಬಾಲ ಕಾರ್ಮಿಕರ ಪುನರ್ವಸತಿಗೆ ಸಂಬಂಧಿಸಿದ ಪರಿಹಾರ ಚೆಕ್ ಅಥವಾ ಇತರೆ ಪರಿಹಾರ ಧನಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹೊರಗುತ್ತಿಗೆ ನೌಕರರ ಸಂಬಳ ಕಡಿತ-ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸೂಚನೆ

ಹೊರಗುತ್ತಿಗೆ ನೌಕರರಿಗೆ ಸಂಬಳವನ್ನು ಕಡಿತ ಮಾಡಿ ನೀಡಲಾಗುತ್ತಿದೆ ಎಂದು ವ್ಯಾಪಕ ದೂರುಗಳು ಬರುತ್ತಿವೆ. ಆದ್ದರಿಂದ ಕನಿಷ್ಠ ವೇತನ ನಿಯಮಗಳಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಸಂಬಳವನ್ನು ಗುತ್ತಿಗೆದಾರರು ಕಡಿತಗೊಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಕೆಲ ಪ್ರಮುಖ ಸರಕಾರಿ ಇಲಾಖೆಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ಗಾರ್ಮೆಂಟ್ ಮತ್ತಿತರ ಕಡೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನದಲ್ಲಿಯೇ ಅಕ್ರಮವಾಗಿ ಕಡಿತ ಮಾಡಲಾಗುತ್ತಿದೆ ಎಂಬ ದೂರುಗಳಿದ್ದು, ಈ ಬಗ್ಗೆ ನಿರಂತರವಾಗಿ ಪರಿಶೀಲಿಸಬೇಕು.ಒಂದು ವೇಳೆ ಗುತ್ತಿಗೆದಾರರು ಕನಿಷ್ಠ ವೇತನ ನೀಡದಿರುವುದು ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಜ್ಯೋತಿ ಕಾಂತೆ ಅವರು, ಜಿಲ್ಲೆಯಲ್ಲಿ ಬಾಲಕಾರ್ಮಿಕರ ರಕ್ಷಣೆ, ಪುನರ್ವಸತಿ ಹಾಗೂ ಕಾಯ್ದೆ ಅನುಷ್ಠಾನದ ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಾಲಕಾರ್ಮಿಕರ ಪತ್ತೆ ಹಾಗೂ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರಾದ ಮಹ್ಮದ್‌ ಬಶೀರ್ ಅನ್ಸಾರಿ, ಕಾರ್ಮಿಕ ಅಧಿಕಾರಿಗಳಾದ ತರನ್ನುಮ್, ಮಲ್ಲಿಕಾರ್ಜುನ ಜೋಗುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button