ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರುಗೆ ಪತ್ರ ಬರೆದಿರುವ ಡಿಸಿಎಂ ಗೋವಿಂದ ಕಾರಜೋಳ ಮಲಪ್ರಭಾ ನದಿ ಪಾತ್ರದಲ್ಲಿನ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಮಲಪ್ರಭಾ ನದಿ ತೀರದಲ್ಲಿ ಮಾನವರ ದುರಾಸೆಯಿಂದ ಹೆಚ್ಚು ಒತ್ತುವರಿಯಾಗಿದ್ದು, ಇದರಿಂದಾಗಿ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಉಂಟಾಗುತ್ತಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಒಟ್ಟು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗುತ್ತಿದೆ. ಹೀಗಾಗಿ ಮಲಪ್ರಭಾ ನದಿ ಪಾತ್ರದಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಮಲಪ್ರಭಾ ನದಿಯ ಉಳಿವಿಗೆ ಒತ್ತುವರಿ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಗೋವಿಂದ್ ಕಾರಜೋಳ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮತ್ತು ಪ್ರವಾಹ ನಿಯಂತ್ರಿಸುವ ಬಗ್ಗೆ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಿಗದಿಪಡಿಸಬೇಕು. ತುರ್ತು ಪರಿಹಾರ ಕಂಡುಕೊಳ್ಳುವ ಬಗ್ಗೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕಾರಜೋಳ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ