Kannada NewsLatest

ತಬ್ಬಲಿ ಮಕ್ಕಳ ಆರೈಕೆಗೆ ಕುಟೀರ ಸ್ಥಾಪಿಸಲು ಸಲಹೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ರೋಗದಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಆರೈಕೆ ಹಾಗೂ ಪುನರ್ವಸತಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿ, ಶೀಘ್ರವಾಗಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಿ ಅಂತಹ ಮಕ್ಕಳಿಗೆ ಆರೈಕೆ ಮಾಡಿ ಪೋಷಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರವನ್ನು ಬರೆದಿರುವ ಅವರು, ಕೆಲವು ಜಿಲ್ಲೆಗಳಲ್ಲಿ ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೋವಿಡ್ ನಿಂದ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಮಕ್ಕಳು ರೋದಿಸುತ್ತಿದ್ದ ಮನಕಲಕುವಂತಹ ಅನೇಕ ದೃಶ್ಯಗಳನ್ನು ಕಂಡಿದ್ದೇನೆ. ಇಂತಹ ದುಸ್ಥಿತಿಯಲ್ಲಿರುವ ಮಕ್ಕಳ ಕುರಿತು ಕೂಡಲೇ ಸಮೀಕ್ಷೆಯನ್ನು ನಡೆಸಬೇಕು. ಇಂತಹ ದುಸ್ಥಿತಿಯಲ್ಲಿರುವ ಮಕ್ಕಳ ಆರೈಕೆಗಾಗಿ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೂಡಲೇ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಿ, ಅವರಿಗೆ ಮನೋಸ್ಥೈರ್ಯ ತುಂಬಿ, ಅಗತ್ಯ ಚಿಕಿತ್ಸೆ, ಆಹಾರದೊಂದಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಪೋಷಿಸಲು ನೆರವಾಗಬೇಕಿದೆ ಎಂದರು.

ಇಂತಹ ಅನಾಥ ಮಕ್ಕಳ ಆರೈಕೆ ಹಾಗೂ ಪುನರ್ವಸತಿಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿ, ಶೀಘ್ರವಾಗಿ ಅನಾಥ ಮಕ್ಕಳ ಕುಟೀರಗಳನ್ನು ಸ್ಥಾಪಿಸಿ ಅಂತಹ ಮಕ್ಕಳಿಗೆ ಆರೈಕೆ ಮಾಡಿ ಪೋಷಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕಾರಜೋಳ ಕೋರಿದ್ದಾರೆ.

ಇನ್ಮುಂದೆ ಸೋಂಕಿತರು ನೇರವಾಗಿ ಆಸ್ಪತ್ರೆಗೆ ದಾಖಲಾಗುವಂತಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button