ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತಾವು ಪೂರ್ಣಗೊಳಿಸಿದ ಲೋಕೋಪಯೋಗಿ ಇಲಾಖೆಯ ಅಭಿವೃದ್ಧಿ ಕಾರ್ಯದ ಬಿಲ್ ಗಳನ್ನು ಶೀಘ್ರದಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿಸುವಂತೆ ಬೆಳಗಾವಿ ಜಿಲ್ಲಾ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘ ಸರಕಾರವನ್ನು ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಇಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಅವರನ್ನು ಧಾರವಾಡದಲ್ಲಿ ಭೆಟ್ಟಿಯಾಗಿ, ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆಗಾಗಿ 2016-17 ಹಾಗು 2017-18 ನೇ ಸಾಲಿಗಾಗಿ ನಿರ್ವಹಿಸಿದ ಕಾಮಗಾರಿಗಳ ಬಿಲ್ ಅಂದಾಜು 200 ಕೋಟಿ ರೂಪಾಯಿ ಹಾಗು ಬೆಳಗಾವಿ, ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹಾಗು ಜಿಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು ಅದರ ಮೊತ್ತ ಕೂಡ ಸುಮಾರು 200 ಕೋಟಿ ರೂಪಾಯಿಯಷ್ಟಾಗುತ್ತದೆ. ಹೀಗೆ ಒಟ್ಟು 400 ರೂಪಾಯಿ ಬಿಲ್ ಸಂದಾಯವಾಗಬೇಕಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕೆಲಸವಿಲ್ಲದಿದ್ದರೂ ತಮ್ಮ ಬಳಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರನ್ನು ಅವರ ಕುಟುಂಬದವರನ್ನು ಗುತ್ತಿಗೆದಾರರು ಕೈಬಿಡದೆ ಮಾನವೀತೆಯ ದೃಷ್ಟಿಯಿಂದ 6-8 ತಿಂಗಳು ಸಾಕಿದ್ದಾರೆ. ಕೋಟ್ಯಂತರ ರೂಪಾಯಿ ಸಾಲ ಪಡೆದು ಸರಕಾರದ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರು ಸರಕಾರ ಬಿಲ್ ಸಂದಾಯ ಮಾಡದೇಯಿರುವದರಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಆದಷ್ಟು ಬೇಗನೆ ಉಳಿದ ಬಿಲ್ ಮಂಜೂರು ಮಾಡಿ ಬಿಡುಗಡೆ ಮಾಡಬೇಕೆಂದು ಸಂಘ ಆಗ್ರಹಿಸಿದೆ.
ಲೋಕೋಪಯೋಗಿ ಇಲಾಖೆ, ಕೇಂದ್ರ ಸರಕಾರ ಸಿ ಆರ್ ಎಫ್ ಯೋಜನೆಯ ಹಣ ಬಿಡುಗಡೆಮಾಡಿಲ್ಲವೆಂದು ಹೇಳುತ್ತಿದೆ, ಆದರೆ ಕೇಂದ್ರ ಸಚಿವರೂ, ಸಂಸದರೂ ಕೇಂದ್ರ ಹಣ ಬಿಡುಗಡೆ ಮಾಡಿದೆಯೆಂದು ಹೇಳಿದ್ದಾರೆ. ಕೇಂದ್ರದಿಂದ ಹಣ ಬರದೆಯಿದ್ದರೂ ಇತರ ಬಾಬ್ತು ಗಳಿಗೆ ಮೀಸಲಾದ ಹಣವನ್ನು ಕಾರ್ಯ ನಿರ್ವಹಿಸಿದ ಗುತ್ತಿಗೆದಾರರಿಗೆ ನೀಡಿ ನಂತರ ಬಿಡುಗಡೆಯಾಗುವ ಹಣ ಬಳಸಿಕೊಳ್ಳಲು ಅವಕಾಶವಿದೆಯೆಂದು ಉಪಮುಖ್ಯಮಂತ್ರಿಗಳಿಗೆ ಸೂಚಿಸಿತು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಭರವಸೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ಡಿ ಎಲ್ ಕುಲಕರ್ಣಿ, ಗುತ್ತಿಗೆದಾರರು ಸಾಲಸೋಲ ಮಾಡಿ ಸರಕಾರದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಆದರೆ ವರ್ಷಗಟ್ಟಲೆ ಬಿಲ್ ಬರದೇ ಆರ್ಥಿಕ ಸಂಕಷ್ಟದಲ್ಲಿದ್ದು ಸರಕಾರ ಕೂಡಲೇ ಕಾಮಗಾರಿ ಬಿಲ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ