Kannada NewsKarnataka News

ಶಂಕರ ಮುನವಳ್ಳಿ, ಲಕ್ಷ್ಮಣರಾವ್ ಕುಲಕರ್ಣಿ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಖಾಸಬಾಗದ ಬಜಾರಗಲ್ಲಿಯ ರಹವಾಸಿಗಳಾಗಿದ್ದ ಲಕ್ಷ್ಮಣರಾವ್ ಗೋಪಾಲರಾವ್ ಕುಲಕರ್ಣಿ ನಿಧನರಾಗಿದ್ದಾರೆ. ಅವರಿಗೆ ೮೩ ವರ್ಷಗಳಾಗಿದ್ದವು.
ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಉತ್ತಮ ಜ್ಯೋತಿಷಿಗಳಾಗಿದ್ದರು. ಇವರು ಪತ್ನಿ, ೫ ಜನ ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

ಶಂಕರ ಮುನವಳ್ಳಿ

ಸದಾ ವಿವಾದದಲ್ಲೇ ಜೀವನ ಕಳೆದಿದ್ದ, ಕಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ (67) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೂಲತಃ ರಾಮದುರ್ಗದವರಾಗಿದ್ದ ಮುನವಳ್ಳಿ ನಿರಂತರವಾಗಿ ಒಂದಿಲ್ಲೊಂದು ವಿವಾದದ ಸುತ್ತಲೇ ಇರುತ್ತಿದ್ದರು.

ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಸಂದರ್ಭದಲ್ಲಿ ಉಮಾಭಾರತಿ ಬರುವ ರೈಲಿನಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜದ ಮೇಲೆ ಇಸ್ಪೀಟ್ ಆಡುತ್ತಿದ್ದರು ಎನ್ನುವ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ದೊಡ್ಡ ಸುದ್ದಿಯಾಗಿದ್ದರು ಶಂಕರ ಮುನವಳ್ಳಿ. ನಂತರ ಅದು ಕ್ರಿಯೇಟೆಡ್ ಎಂದು ಬಹಿರಂಗವಾಗಿ ಮುಜುಗರಕ್ಕೆ, ಸಂಕಷ್ಟಕ್ಕೆ ಒಳಗಾಗಿದ್ದರು.

ಬಿ.ಎಸ್.ಯಡಿಯೂರಪ್ಪ ಆಡಿದ ಮಾತೊಂದಕ್ಕೆ ಮಾನನಷ್ಟ ಮೊಕದ್ದಮೆ ಹೂಡಿ ನಂತರ ಅವರೇ ರಾಜಿಗೆ ಬರುವಂತೆ ಮಾಡಿದ್ದರು. ನಿರಂತರವಾಗಿ ರಾಜಕೀಯ ನಾಯಕರ ಮೇಲಿನ ನಿಷ್ಠೆ ಬದಲಿಸುತ್ತ ಎಲ್ಲರ ವಿಶ್ವಾಸ ಕಳೆದುಕೊಂಡರೂ ವಿವಾದ ಮೈಮೇಲೆಳೆದುಕೊಳ್ಳುವುದನ್ನು ಮಾತ್ರ ಬಿಡುತ್ತಿರಲಿಲ್ಲ.

ಜಾರಕಿಹೊಳಿ ಸಹೋದರರ ವಿರುದ್ಧ, ಕಾಂಗ್ರೆಸ್ ನ ಹಲವು ನಾಯಕರ ವಿರುದ್ಧ ಕೂಡ ನಿರಂತರವಾಗಿ ಹರಿಹಾಯುತ್ತಿದ್ದರು. ಆದರೆ ಕೆಲವೇ ದಿನದಲ್ಲಿ ಮತ್ತೆ ಅವರನ್ನೇ ಹಾಡಿಹೊಗಳುತ್ತಿದ್ದರು. ಹಾಗಾಗಿ ಯಾವ ನಾಯಕರೂ ಅವರನ್ನು ಹತ್ತಿರ ಸೇರಿಸಿಕೊಳ್ಳದಂತೆ ಮಾಡಿಕೊಂಡಿದ್ದರು.

ಸಾವಿರಾರು ಕೋಟಿ ರೂ. ಬೆಲೆ ಬಾಳುವ ಕುಲಕರ್ಣಿ ಕಂಪೌಂಡ್ ವಿವಾದವನ್ನು ನ್ಯಾಯಾಲಯಕ್ಕೆ ಒಯ್ದು ಹೋರಾಟ ನಡೆಸಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು.

ಇಂದು ಸಂಜೆ ಶಹಾಪುರದ ರುತ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button