ಬಿಜೆಪಿ ಪಾಲಿಗೆ ಶೂನ್ಯ ಸೃಷ್ಟಿಸಿದ ಆನಂದ ಮಾಮನಿ ನಿಧನ: 3 ಹೆಸರಿನ ಮಧ್ಯೆ ಯಾರಿಗೆ ಸಿಗಲಿದೆ ಯಲ್ಲಮ್ಮನ ಕೃಪೆ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಮೂವರು ಪ್ರಭಾವಿ ನಾಯಕರನ್ನು ಕಳೆದುಕೊಂಡ ಭಾರತೀಯ ಜನತಾ ಪಾರ್ಟಿ, 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ ನಾಯಕತ್ವದ ಕೊರತೆ ಎದುರಿಸುತ್ತಿದೆ.
ಇಡೀ ಜಿಲ್ಲೆಯನ್ನು, ಜಿಲ್ಲೆಯ ಎಲ್ಲ ಗುಂಪುಗಳನ್ನು ಮುನ್ನಡೆಸುವಂತಹ ನಾಯಕರು ಇಲ್ಲದೆ ಅಷ್ಟರಮಟ್ಟಿಗೆ ಬಿಜೆಪಿ ಬಡವಾಗಿದೆ. ಉಮೇಶ ಕತ್ತಿ ಮತ್ತು ಸುರೇಶ ಅಂಗಡಿ ಒಂದಿಷ್ಟರ ಮಟ್ಟಿಗೆ ಗಟ್ಟಿತನವನ್ನು ಹೊಂದಿದ್ದರು. ಈಗ ಇವರಿಬ್ಬರ ಜೊತೆಗೆ ಆನಂದ ಮಾಮನಿ ಸಹ ಹೊರಟುಹೋದರು.
ಸುರೇಶ ಅಂಗಡಿ ನಿಧನದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಯಾರನ್ನು ಕಣಕ್ಕಿಳಿಸುವುದು ಎಂದು ಕ್ಷೇತ್ರದ ತುಂಬ ತಡಕಾಡಿದರೂ ಗೆಲ್ಲುವ ಅಭ್ಯರ್ಥಿ ಸಿಗಲೇ ಇಲ್ಲ. ಹಾಗಾಗಿ ಅಂತಿಮವಾಗಿ ಅನುಕಂಪದ ಮತಗಳೇ ಕ್ಷೇತ್ರ ಉಳಿಸಿಕೊಳ್ಳಲು ಅನಿವಾರ್ಯ ಎನ್ನುವ ಹಂತಕ್ಕೆ ಬಂದು ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಕಣಕ್ಕಿಳಿಸಲಾಯಿತು. ಕೂದಲೆಳೆಯ ಅಂತರದಿಂದ ಅವರು ಗೆದ್ದು ಬಂದರು. 2024ರ ಚುನಾವಣೆಗೆ ಮತ್ತೆ ಹೊಸಬರತ್ತ ಚಿತ್ತ ಹರಿಸುವುದು ಬಿಜೆಪಿಗೆ ಅನಿವಾರ್ಯ.
ಅದಕ್ಕೂ ಮೊದಲು 2023ರ ವಿಧಾನಸಭೆ ಚುನಾವಣೆಗೆ ಹುಕ್ಕೇರಿ ಮತ್ತು ಸವದತ್ತಿ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಬೇಕಾಗಿದೆ. ಹುಕ್ಕೇರಿಯಿಂದ ಸ್ಪರ್ಧಿಸಲು ಉಮೇಶ ಕತ್ತಿ ಸಹೋದರ, ಮಗ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಸೇರಿದಂತೆ ಅನೇಕರು ತಯಾರಿದ್ದಾರೆ. ಆದರೆ ಸವದತ್ತಿ ಕ್ಷೇತ್ರ ಮಾತ್ರ ಅನಾಥವಾಗಿದೆ. ಸವದತ್ತಿಯಿಂದ ಸ್ಪರ್ಧಿಸುವಂತ ಪ್ರಬಲ ಅಭ್ಯರ್ಥಿ ಬಿಜೆಪಿಗೆ ಕಾಣುತ್ತಿಲ್ಲ.
ಸವದತ್ತಿಯಿಂದ ಆನಂದ ಮಾಮನಿ ಪತ್ನಿ ರತ್ನಾ ಅವರನ್ನು ಕಣಕ್ಕಿಳಿಸಬೇಕೆನ್ನುವ ಕೂಗು, ಚಿಂತನೆ ಆಗಲೇ ಆರಂಭವಾಗಿದೆ. ಅವರೊಂದಿಗೆ ಸಹೋದರ ಸಂಬಂಧಿ ವಿರೂಪಾಕ್ಷ ಮಾಮನಿ ಹೆಸರೂ ಕೇಳಿ ಬಂದಿದೆ. ಬಿಜೆಪಿಯ ಯುವ ಮುಖಂಡ ಕಡಬಿ ಶಿವಾಪುರದ ಮಹಾಂತೇಶ ಒಕ್ಕುಂದ ಅವರ ಹೆಸರು ಕೇಳಿಬರುತ್ತಿದೆಯಾದರೂ ಅವರು ವಿಧಾನಸಭೆಗೆ ಸ್ಪರ್ಧಿಸಲು ಅಷ್ಟಾಗಿ ಆಸಕ್ತರಾಗಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಅಂತಿಮವಾಗಿ ರತ್ನಾ ಮಾಮನಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಕಾಣುತ್ತಿದೆ.
ಕಾರ್ಯಕರ್ತರ ಮಧ್ಯೆ ಈಗಾಗಲೆ ಚರ್ಚೆ ಆರಂಭವಾಗಿದ್ದು, ಇನ್ನು 2 -3 ದಿನದಲ್ಲಿ ಸಭೆ ಸೇರಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ ಅಂತಿಮವಾಗಿ ಪಕ್ಷವೇ ನಿರ್ಧರಿಸಬೇಕಿದೆ.
ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಕಾಂಗ್ರೆಸ್ ಒಡಕಿನ ಲಾಭದಿಂದಲೇ ಆನಂದ ಮಾಮನಿ ನಿರಾಯಾಸದ ಗೆಲುವು ಸಾಧಿಸುತ್ತ ಬಂದಿದ್ದರು. ಈಗ ಪ್ರಬಲ ಅಭ್ಯರ್ಥಿ ಇಲ್ಲದಿದ್ದಲ್ಲಿ ಬಿಜೆಪಿ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ. ಹಾಗಾಗಿ ಮತ್ತೆ ಅದೇ ಅನುಕಂಪದ ಮತ ಸೆಳೆಯುವತ್ತ ಬಿಜೆಪಿ ಕೈ ಹಾಕಿದೆ.
ಕಾಂಗ್ರೆಸ್ ನಿಂದ ವಿಶ್ವಾಸ ವೈದ್ಯ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಸಚಿವ, ಯಮಕನಮರಡಿ ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಹೆಸರೂ ಕೇಳಿ ಬರುತ್ತಿದೆ. ಪಂಚನಗೌಡ ದ್ಯಾಮನಗೌಡ ಮತ್ತು ಸೌರವ್ ಛೋಪ್ರಾ ಸಹ ಪ್ರಯತ್ನ ನಡೆಸಿದ್ದಾರೆ.
ಒಟ್ಟಾರೆ ಸವದತ್ತಿ ಕ್ಷೇತ್ರ ಈಗ ಎಲ್ಲರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.
https://pragati.taskdun.com/politics-2/congress-organisation-satishjarkiholi-kpcc-president-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ