Belagavi NewsBelgaum NewsKannada NewsKarnataka NewsLatest

*ಕೃಷ್ಣ ಮೆಣಸೆ ನಿಧನ*

​ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವಾತಂತ್ರ್ಯ ಹೋರಾಟಗಾರ, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ನಾಯಕ ಕೃಷ್ಣ ಮೆಣಸೆ ಸೋಮವಾರ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಗಾಂಧಿ ವಾದಿಯಾಗಿದ್ದ ಕೃಷ್ಣ ಮೆಣಸೆ, ಗೋವಾ ವಿಮೋಚನೆ ಹೋರಾಟದಲ್ಲೂ ಭಾಗವಹಿಸಿದ್ದರು. ಬರಹಗಾರರಾಗಿ, ಕಾರ್ಮಿಕ ಸಂಘದ ನಾಯಕರಾಗಿ ಕೃಷ್ಣಾ ಮೆಣಸೆ ಗುರುತಿಸಲ್ಪಟ್ಟಿದ್ದರು.

ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುತ್ರರಾದ ಆನಂದ ಮೆಣಸೆ, ಭೂವಿಜ್ಞಾನದ ನಿವೃತ್ತ ಪ್ರಾಧ್ಯಾಪಕ ಮತ್ತು ವಕೀಲ ಸಂಜಯ ಮೆಣಸೆ, ಪುತ್ರಿಯರಾದ ಲತಾ ಪಾವ್ಶೆ ಮತ್ತು ನೀತಾ ಪಾಟೀಲ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿ ಅಥವಾ ಇತರ ಸೌಲಭ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ್ದರು. ಏಕೀಕರಣದ ನಂತರ ಕರ್ನಾಟಕದ ನಾಯಕರಾಗಿ ರಾಜ್ಯದಾದ್ಯಂತ ಕಮ್ಯೂನಿಷ್ಟ್ ಚಳವಳಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಜ್ಯ ಸಮಿತಿ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದರು. ಮರಾಠಿ ಸಾಹಿತಿಯಾಗಿ ಹೆಸರು ಗಳಿಸಿದ್ದರು. 1975ರಲ್ಲಿ ಮುಂಬೈನಲ್ಲಿ ಅನ್ನಪೂರ್ಣ ಮಹಿಳಾ ಮಂಡಲ ಸ್ಥಾಪಿಸಿ, ಮಹಿಳಾ ಕಾರ್ಮಿಕರ ಹೋರಾಟಕ್ಕೆ ಧ್ವನಿ ನೀಡಿದ್ದರು. 1984ಲ್ಲಿ ಬೆಳಗಾವಿ ಸಿಟಿ ಮಜ್ದೂರ್ ಕೋ–ಆಪ್‌ ಕ್ರೆಡಿಟ್ ಸೊಸೈಟಿ ಸ್ಥಾಪಿಸುವಲ್ಲಿ ಮುಂಚೂಣಿ ವಹಿಸಿದ್ದರು.

1988ರಲ್ಲಿ ‘ಪೂರ್ವಗಾಮಿ’ ಎಂಬ ಹೋರಾಟದ ಸಂಸ್ಥೆ ಸ್ಥಾಪಿಸಿದರು. ಅವರು ಆರಂಭಿಸಿದ ‘ಸಾಮ್ಯವಾದಿ’ ಎಂಬ ಮರಾಠಿ ವಾರಪತ್ರಿಕೆ ಇನ್ನೂ ಪ್ರಕಟವಾಗುತ್ತಿದೆ. ಹಲವಾರು ವರ್ಷಗಳ ಕಾಲ ಬೆಳಗಾವಿಯಲ್ಲಿ ಭಾರತೀಯ ಅಲ್ಯುಮಿನಿಯಂ ಕಂಪನಿಯ ಲೇಬರ್ ಯೂನಿಯನ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಕೃಷ್ಣಾ ಮೆಣಸೆ ಅವರು ವಿಶ್ವಗುರು ಬಸವೇಶ್ವರರ ವಚನಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಅವರು ಮಾರ್ಕ್ಸವಾದ ಮತ್ತು ಕಾರ್ಮಿಕ ಚಳುವಳಿ, ಕೋಮು ಸೌಹಾರ್ದತೆ ಮತ್ತು ಕಾರ್ಮಿಕ ಹಕ್ಕುಗಳ ಕುರಿತು ಪುಸ್ತಕಗಳ ಸರಣಿಯನ್ನು ಬರೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button