Belagavi NewsBelgaum NewsKannada NewsKarnataka News

ಅಕ್ರಮ ಪಂಪ್ ಸೆಟ್ ತೆರವುಗೊಳಿಸಲು ಟಾಸ್ಕ್ ಫೋರ್ಸ್ ರಚನೆಗೆ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ಬೇಸಿಗೆಯಲ್ಲಿ ಅಥವಾ ನೀರಿನ ಅಭಾವವಿರುವ ಪರಿಸ್ಥಿತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ನಿರ್ಧರಿಸಲು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಲಮಟ್ಟಿ ಜಲಾಶಯ, ಮಲಪ್ರಭಾ ಯೋಜನೆ , ಘಟಪ್ರಭಾ ಯೋಜನೆ ಮತ್ತು ಹಿಪ್ಪರಗಿ ಯೋಜನೆ ಸಮಿತಿ ಸಭೆಯನ್ನು ದಿನಾಂಕ:೦೮.೦೭.೨೦೨೩ ರಂದು ಮದ್ಯಾಹ್ನ ೧೨.೦೦ ಗಂಟೆಗೆ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಆಲಮಟ್ಟಿ ಇಲ್ಲಿ ಜರುಗಿಸಲಾಯಿತು.

ಬೆಳಗಾವಿ ವಿಭಾಗದ ಜಲಾಶಯಗಳಲ್ಲಿನ ನೀರಿನ ಪ್ರಮಾಣ ದಿನಾಂಕ:೦೮.೦೭.೨೦೨೩ ರಂದು ಈ ಕೆಳಗಿನಂತೆ ಇರುವುದನ್ನು ಸಭೆಗೆ ತಿಳಿಸಿದರು.
ಕ್ರ. ಸಂ ಜಲಾಶಯ ನೀರಿನ ಸಂಗ್ರಹ (ಟಿ.ಎಂ.ಸಿ)
ಒಟ್ಟು ಸಂಗ್ರಹ ಸಾಮರ್ಥ್ಯ – ಪ್ರಸ್ತುತ ನೀರಿನ ಸಂಗ್ರಹ
೧ ಹಿಡಕಲ್ ೫೧.೦೦ – ೨.೨೦೬
೨ ನವಿಲುತೀರ್ಥ ೩೭.೭೩೧ – ೩.೪೭೨
೩ ಹಿಪ್ಪರಗಿ ೬.೦೦ – ೧.೮೨
೪ ಆಲಮಟ್ಟಿ ೧೨೩.೦೮೧ – ೧.೪೮೪

ಬೆಳಗಾವಿ ವಿಭಾಗದ ಮಳೆಯ ಪ್ರಮಾಣ ದಿನಾಂಕ:೦೭.೦೭.೨೦೨೩ ರಂದು ಈ ಕೆಳಗಿನಂತೆ ಇರುವುದನ್ನು ಸಭೆಗೆ ತಿಳಿಸಿದರು.

ಅ. ನಂ ಜಿಲ್ಲೆಯ ಹೆಸರು ದಿನಾಂಕ:೦೧.೦೬.೨೦೨೩ ರಿಂದ ೦೭.೦೭.೨೦೨೩ ರವರೆಗೆ ಸಂಚಿತ ಮಳೆಯ ಪ್ರಮಾಣ
ವಾಡಿಕೆ (ಮಿ.ಮೀ) ವಾಸ್ತವಿಕ (ಮಿ.ಮೀ) ಕೊರತೆ (ಶೇಕಡಾ)
೧ ಬೆಳಗಾವಿ ೧೮೬ ೮೬ -೫೪
೨ ಬಾಗಲಕೋಟೆ ೯೭ ೩೩ -೬೬
೩ ವಿಜಯಪುರ ೧೦೧ ೪೮ -೫೨
೪ ಗದಗ ೯೯ ೭೧ -೨೮
೫ ಹಾವೇರಿ ೧೫೪ ೯೧ -೪೧
೬ ಧಾರವಾಡ ೧೫೬ ೮೪ -೪೬
೭ ಉತ್ತರ ಕನ್ನಡ ೯೧೩ ೬೫೦ -೨೯

ಮುಂಗಾರು ಮಳೆ ವಿಫಲತೆಯಿಂದಾಗಿ ಕೆಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿದ್ದರಿಂದ ಅವಶ್ಯವಿದ್ದ ಕಡೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಬಾಗಲಕೋಟೆ ಮತ್ತು ವಿಜಯಪೂರ ಜಿಲ್ಲಾಧಿಕಾರಿಗಳು ತಿಳಿಸಿದರು.
ಆಲಮಟ್ಟಿ, ಮಲಪ್ರಭಾ, ಹಿಪ್ಪರಗಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ಸಂಗ್ರಹಿತ ನೀರನ್ನು ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು.
ಪ್ರಸ್ತುತ ಜಿಲ್ಲೆಯ ಕೃಷ್ಣಾ ನದಿಗೆ ಅಲ್ಪ ಪ್ರಮಾಣದಲ್ಲಿ ಒಳ ಹರಿವು ಇದ್ದು, ನೀರು ಕೊಲ್ಹಾರ ಬ್ಯಾರೆಜ್‌ವರೆಗೆ ತಲುಪವವರೆಗೆ ಹಿಪ್ಪರಗಿ ಬ್ಯಾರೆಜಿನಿಂದ ಹರಿಬಿಡಲಾಗುವುದು. ಘಟಪ್ರಬಾ ನದಿಗೆ ಸಹ ಅಲ್ಪ ಪ್ರಮಾಣದಲ್ಲಿ ಒಳ ಹರಿವು ಪ್ರಾರಂಭವಾಗಿದ್ದು, ಜುಲೈ-೨೦೨೪ರ ವರೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹಣೆಯಾಗುವಂತೆ ಕ್ರಮವಹಿಸುವಂತೆ ಜಲಾಶಯದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.
ನದಿಗಳ ದಡಗಳಲ್ಲಿ ಅಕ್ರಮವಾಗಿ ಇರುವ ನೀರಾವರಿ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಸಂಬಂಧ ಅಕ್ರಮ ಪಂಪ್‌ಸೆಟ್‌ಗಳ ಸರ್ವೇ ಮಾಡಲು ಜಿಲ್ಲಾ ಮಟ್ಟದಲ್ಲಿ ಕಂದಾಯ ಇಲಾಖೆ, ಪೋಲಿಸ್, ನೀರಾವರಿ ಇಲಾಖೆ, ಹೆಸ್ಕಾಂ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಟಾಸ್ಕ್ ಪೋರ್ಸ್ ಸಮಿತಿಯನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನೀರಾವರಿ ಉದ್ದೇಶಕ್ಕಾಗಿ ನೀರಾವರಿ ಸಲಹಾ ಸಮಿತಿಯಿಂದ ಅಥವಾ ಸರ್ಕಾರದಿಂದ ಅನುಮತಿ ಪಡೆದು ಕ್ರಮಕೈಗೊಳ್ಳಬಹುದಾಗಿದೆಯೆಂದು ಸಂಬಂಧಿತ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು.

ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪೂರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಹೆಸ್ಕಾ ಇಲಾಖೆಯ ಅಧಿಕಾರಿಗಳು, ಆಲಮಟ್ಟಿ ಜಲಾಶಯ, ಮಲಪ್ರಬಾ ಯೋಜನೆ, ಘಟಪ್ರಬಾ ಯೋಜನೆ ಹಾಗೂ ಹಿಪ್ಪರಗಿ ಯೋಜನೆಯ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಸಂಬಂಧಿಸಿದ ಸೂಪರಿಂಟೆಂಡಿಂಗ್ ಇಂಜನೀಯರರು, ಮುಖ್ಯ ಅಭಿಯಂತರರು, ಕೃ.ಬಾ.ಜ.ನಿ.ನಿ.ಆಲಮಟ್ಟಿ, ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಅಭಿಯಂತರರು, ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು ಮತ್ತು ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button