*ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ, ತುರ್ತು ಪರಿಸ್ಥಿತಿಯ ಯೋಜನೆ ಜಾರಿ ಮಾಡಿ: ರಾಜ್ಯ ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಬಿತ್ತನೆ ಕಾರ್ಯಗಳು ಹಿನ್ನಡೆ ಕಂಡಿದ್ದು, ಬೆಳೆಗಳು ಒಣಗುವ ಭೀತಿ ಎದುರಾಗಿದೆ. ಜಲಾಶಯಗಳ ನೀರಿನ ಮಟ್ಟವೂ ನಿರಂತರವಾಗಿ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆಯುವ ಆತಂಕ ಎದುರಾಗಿದೆ. ಸದ್ಯದ ಮಾಹಿತಿ ಪ್ರಕಾರ 150 ಕ್ಕೂ ಅಧಿಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಹಲವೆಡೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಈಗಾಗಲೇ ಬಿತ್ತನೆಯಾದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿದೆ. ಇದು ಕೃಷಿ ಉತ್ಪಾದನೆಯ ಮೇಲೆ ಹಾಗೂ ಉದ್ಯೋಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಕೃಷಿ ಕಾರ್ಮಿಕರು ನಗರಗಳತ್ತ ಹಾಗೂ ನೆರೆ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜಲಾಶಯಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಕುಸಿದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಇದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಯಾವ ಮಟ್ಟಿಗೆ ತೀವ್ರವಾಗಬಹುದು ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿಲ್ಲ, ತಾಲೂಕುಗಳಿಗೆ ಭೇಟಿ ನೀಡಿಲ್ಲ ಎಂಬುದು ದುರದೃಷ್ಟಕರ. ಕೃಷಿ ಇಲಾಖೆಗೆ ಪೂರ್ಣಾವಧಿ ಸಚಿವರೇ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ರೈತರ ಬದುಕಿನ ಪ್ರಶ್ನೆ ಎದುರಾಗಿರುವಾಗ, ಕೃಷಿ ಇಲಾಖೆಗೆ ನಾಯಕತ್ವ ಇಲ್ಲವಾಗಿರುವುದು ಆಡಳಿತದ ಆದ್ಯತೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ದೂರಿದ್ದಾರೆ.
ಸಂಕಷ್ಟ ಉಲ್ಬಣಿಸುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಆಡಳಿತದ ಲಕ್ಷಣ. ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡುವಲ್ಲಿ ವಿಳಂಬ ಮಾಡಿದಷ್ಟೂ ರೈತರಿಗೆ ಪರಿಹಾರ, ಬೆಳೆಹಾನಿ ಸಮೀಕ್ಷೆ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ಕೇಂದ್ರ ಸರ್ಕಾರದಿಂದ ಪಡೆಯಬೇಕಾದ ನೆರವು ಮೊದಲಾದ ಪ್ರಕ್ರಿಯೆಗಳು ತಡವಾಗುತ್ತವೆ. ಈ ವಿಳಂಬದ ಬೆಲೆಯನ್ನು ಕಟ್ಟುವುದು ಸರ್ಕಾರವಲ್ಲ, ರೈತರು ಮತ್ತು ಗ್ರಾಮೀಣ ಬಡ ಜನತೆ ಎಂದು ಅವರು ಹೇಳಿದ್ದಾರೆ.
ಬರ ಎಂದರೆ ಯಾವುದೇ ಪಕ್ಷದ ಸಮಸ್ಯೆಯಲ್ಲ. ಅದು ರಾಜ್ಯದ ಸಮಸ್ಯೆ. ರೈತರ ಬದುಕು ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯವಾಗಬೇಕು. ಈಗಲಾದರೂ ಪರಿಸ್ಥಿತಿ ಗಂಭೀರತೆ ಅರ್ಥ ಮಾಡಿಕೊಂಡು ತ್ವರಿತ, ಪರಿಣಾಮಕಾರಿ ಹಾಗೂ ಸಮನ್ವಯದ ಕ್ರಮ ಕೈಗೊಂಡರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮಾನವೀಯ ಹಾಗೂ ಆರ್ಥಿಕ ಸಂಕಷ್ಟವನ್ನು ತಡೆಯಲು ಸಾಧ್ಯ ಎಂದು ಅವರು ಸಲಹೆ ನೀಡಿದ್ದಾರೆ.
ಕ್ರಮ ವಹಿಸಿ
ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ವಹಿಸಬೇಕಾದ ಕ್ರಮಗಳನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ ಪತ್ರದಲ್ಲಿ ತಿಳಿಸಿದ್ದಾರೆ.
- ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಪರಿಶೀಲಿಸಿ, ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು.
- ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲಾವಾರು ಬರ ಪರಿಶೀಲನಾ ಸಭೆ ನಡೆಸುವಂತೆ ಸೂಚಿಸಿ, ವಾರವಾರದ
ಪ್ರಗತಿ ಪರಿಶೀಲನೆ ನಡೆಸಬೇಕು. - ರಾಜ್ಯವ್ಯಾಪಿ ತುರ್ತು ಪರಿಸ್ಥಿತಿಯ ಯೋಜನೆ ಪ್ರಕಟಿಸಿ, ಪರ್ಯಾಯ ಬೆಳೆ, ಬಿತ್ತನೆ ಸಲಹೆ, ಬೀಜ, ಮೇವು, ಜಾನುವಾರುಗಳ ಸಂರಕ್ಷಣೆ, ಕುಡಿಯುವ ನೀರು ಹಾಗೂ ತುರ್ತು ಉದ್ಯೋಗ ಸೃಷ್ಟಿಗೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು.
- ವಿಬಿ ಜಿರಾಮ್‌ಜಿ ಯೋಜನೆಯನ್ನು ಜಾರಿಗೊಳಿಸಿ, ಗ್ರಾಮೀಣ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿಗಳನ್ನು ಆರಂಭಿಸಬೇಕು. ಕೃಷಿ ಕಾರ್ಮಿಕರು ಬದುಕಿಗಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.
- ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗುವ ಗ್ರಾಮಗಳನ್ನು ಈಗಲೇ ಗುರುತಿಸಿ, ಟ್ಯಾಂಕರ್, ಬೋರ್‌ವೆಲ್ ಪುನಶ್ಚೇತನ, ಪರ್ಯಾಯ ನೀರು ಪೂರೈಕೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ತುರ್ತು ಅನುದಾನ ಬಿಡುಗಡೆ ಮಾಡಬೇಕು.
- ಬೆಳೆಹಾನಿಯ ವೈಜ್ಞಾನಿಕ ಸಮೀಕ್ಷೆಯನ್ನು ತಕ್ಷಣ ಆರಂಭಿಸಿ, ರೈತರಿಗೆ ಮಧ್ಯಂತರ ಪರಿಹಾರ, ಬೆಳೆ ವಿಮೆ ಹಾಗೂ ಅಗತ್ಯ ಕೃಷಿ ಸಾಧನಗಳ ನೆರವನ್ನು ವಿಳಂಬವಿಲ್ಲದೆ ಒದಗಿಸಬೇಕು.
- ಕೃಷಿ ಇಲಾಖೆಗೆ ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಿ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ವಿಶೇಷ ಬರ ನಿರ್ವಹಣಾ ಕಾರ್ಯಪಡೆಯನ್ನು ರಚಿಸಬೇಕು. ಹಾಲಿ ಸಚಿವರೊಬ್ಬರಿಗೆ ಹೆಚ್ಚುವರಿಯಾಗಿ ಕೃಷಿ ಇಲಾಖೆ ಉಸ್ತುವಾರಿ ಕೊಡಬೇಕು.
- ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸಿದ್ಧಪಡಿಸಿ, ರಾಜ್ಯಕ್ಕೆ ದೊರೆಯಬೇಕಾದ ಎಲ್ಲ ನೆರವು ಮತ್ತು ಪರಿಹಾರವನ್ನು ಪಡೆಯಲು ತುರ್ತು ಕ್ರಮ ಕೈಗೊಳ್ಳಬೇಕು.
Declare Drought-Affected Areas, Implement Emergency Plan, and Begin Crop Loss Survey: Demand to State Government
Bengaluru, July 2: Opposition Leader R. Ashok has written a letter to Chief Minister D.K. Shivakumar urging him to take immediate war-like precautions and relief measures to manage the intensifying drought situation in the state.
Due to the severe shortage of monsoon rains, farmers, agricultural labourers, and rural populations in many parts of the state are facing severe hardships. Sowing activities have been delayed, and crops are at risk of withering. Reservoir water levels are continuously declining, raising serious concerns that drinking water problems could become acute in the coming days. According to current information, drought conditions have emerged in more than 150 taluks, with rainfall significantly below normal in several areas. Crops already sown are drying up due to lack of moisture. This is directly impacting agricultural production and employment. Agricultural labourers are migrating to cities and neighbouring states, he has expressed concern in the letter.
The sharp decline in reservoir water levels in most districts of North Karnataka, including Belagavi and Bagalkot, is an extremely alarming development. This has also affected multi-village drinking water schemes. The government must seriously consider how severe the drinking water crisis could become in the future. It is unfortunate that most District In-Charge Ministers have neither convened comprehensive review meetings on the drought situation in their districts nor visited the taluks. The Agriculture Department is functioning without a full-time Minister. When the livelihoods of lakhs of farmers are at stake, the absence of leadership in the Agriculture Department raises questions about the administration’s priorities, he has criticised.
Taking precautionary measures before the crisis escalates is a sign of good governance. The longer the delay in declaring drought-affected areas, the more delayed will be the processes of providing compensation to farmers, conducting crop loss surveys, supplying fodder for livestock, ensuring drinking water, and securing assistance from the Central Government. It is not the government, but the farmers and the poor rural population who will pay the price for this delay, he stated.
Drought is not a problem of any one party; it is a problem of the entire state. In matters concerning farmers’ lives and the rural economy, public interest must take precedence over politics. He advised that if the government understands the seriousness of the situation even now and takes swift, effective, and coordinated measures, it will be possible to prevent the humanitarian and economic crises that may arise in the coming days.
Measures to be Taken
In the letter, Opposition Leader R. Ashok has outlined the measures that need to be taken to manage the drought situation:
- Assess the ground situation district-wise and taluk-wise and immediately declare the affected areas as drought-prone.
- Direct all District In-Charge Ministers and In-Charge Secretaries to immediately convene district-level drought review meetings and conduct weekly progress reviews.
- Announce a state-wide emergency plan and formulate a comprehensive action plan for alternative crops, sowing advice, seeds, fodder, livestock protection, drinking water supply, and emergency employment generation.
- Implement the MGNREGA (Vibhi Jiramji) scheme and immediately start works in rural areas. It is the government’s responsibility to ensure that agricultural labourers are not forced to migrate for survival.
- Identify villages that are likely to face drinking water shortages immediately, and release emergency funds for tankers, borewell rejuvenation, alternative water supply, and multi-village drinking water schemes.
- Immediately begin a scientific survey of crop losses and provide interim relief to farmers, crop insurance, and necessary agricultural inputs without delay.
- Immediately appoint a full-time Agriculture Minister for the Agriculture Department and constitute a state-level special drought management task force under the leadership of the Chief Secretary. Additional charge of the Agriculture Department may be given to one of the existing Ministers in the interim.
- As per Central Government guidelines, prepare all necessary documents promptly and take urgent steps to secure all required assistance and relief for the state.




