ಪ್ರಗತಿವಾಹಿನಿ ಸುದ್ದಿ; ಮುಂಬೈ: ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲಿಸಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಆಶಿಸ್ ಶೆಲಾರ್, ದೀಪಿಕಾ ಯೋಧ ಮಾಸ್ತಾನಿಯಂತೆ ನಟಿಸುವುದನ್ನು ನಿಲ್ಲಿಸಬೇಕು ಎಂದು ಗುಡುಗಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಜೆಎನ್ ಯು ನಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿಗೆ ಮೌನ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ದೀಪಿಕಾ ವಿರುದ್ಧ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ದೀಪಿಕಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದನ್ನು ಖಂಡಿಸಿರುವ ಬಿಜೆಪಿ ಮುಖಂಡ, ಆಶಿಸ್ ಶೆಲಾರ್, ’ನಿಮ್ಮ ಹಿಂದೆ ಸಂಜಯ್ ಲೀಲಾ ಭನ್ಸಾಲಿಯಂತಹ ನಿರ್ದೇಶಕರು ಇದ್ದಾಗ ’ಯೋಧ ಮಸ್ತಾನಿ’ ಪಾತ್ರವನ್ನು ಚಿತ್ರಿಸುವುದು ಸುಲಭ. ಆದರೆ, ನಿಜ ಜೀವನದಲ್ಲಿ ನಿಮ್ಮ ಹಿಂದೆ ನಿರ್ದೇಶಕರು ಇಲ್ಲದಿದ್ದಾಗ ತನ್ನನ್ನು ಯೋಧ ಅಥವಾ ಮಸ್ತಾನಿ ಎಂದು ಬಿಂಬಿಸಲು ಪ್ರಯತ್ನಿಸಬಾರದು. ಏಕೆಂದರೆ ಆ ರೀತಿಯ ಜೀವನವನ್ನು ವಾಸ್ತವದಲ್ಲಿ ಬದುಕಲು ಸಾಧ್ಯವಾಗುದಿಲ್ಲ ಎಂದು ಕಿಡಿಕಾರಿದ್ದಾರೆ.
ಜೆಎನ್ಯು ವಿಶ್ವವಿದ್ಯಾಲಯದಲ್ಲಿ ದಾಳಿಗೆ ಒಳಗಾದ ವಿದ್ಯಾರ್ಥಿಗಳನ್ನು ದೀಪಿಕಾ ಪಡುಕೋಣೆ ಭೇಟಿಯಾಗಿರುವುದು ಸರಿಯಲ್ಲ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಯಾರೂ ಸಹ ಜೆಎನ್ ಯು ವಿದ್ಯಾರ್ಥಿಗಳನ್ನು ಭೇಟಿಯಾಗುವುದು ಸೂಕ್ತವೂ ಅಲ್ಲ. ದೀಪಿಕಾ ಯೋಧ ಮಸ್ತಾನಿಯಂತೆ ನಟಿಸುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.5ರಂದು ರಾತ್ರಿ ಜೆಎನ್ ಯು ಕ್ಯಾಂಪಸ್ ಒಳಗೆ ನುಗ್ಗಿದ್ದ ಮುಸುಕುಧಾರಿ ದುಷ್ಕರ್ಮಿಗಳು ವಿದ್ಯಾರ್ಥಿಸಂಘದ ಅಧ್ಯಕ್ಷೆ ಐಷೆ ಘೋಷ್ ಸೇರಿದಂತೆ ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಖಂಡಿಸಿ ಜೆಎನ್ಯು ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ