Karnataka NewsLatestPolitics

*ಡಿಸಿಎಂ ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್: ‘ಯೆಜ್ಡಿ ರೋಡ್‌ಸ್ಟರ್’ ಬೈಕ್ ಉಡುಗೊರೆ*

ಪ್ರಗತಿವಾಹಿನಿ ಸುದ್ದಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಾರಿ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯೊಂದು ಬಂದಿದೆ. ಭಾರತೀಯ ಕ್ಲಾಸಿಕ್ ಬೈಕ್‌ಗಳ, ಅದರಲ್ಲೂ ‘ಯೆಜ್ಡಿ’ ಬೈಕ್‌ಗಳ ಅಪ್ಪಟ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ಜನ್ಮದಿನದ ಪ್ರಯುಕ್ತ ಹೊಚ್ಚಹೊಸ ‘ಷಾಡೋ ಬ್ಲಾಕ್’ ಬಣ್ಣದ ಯೆಜ್ಡಿ ರೋಡ್‌ಸ್ಟರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

Home add -Advt

ಡಿ.ಕೆ. ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಯೆಜ್ಡಿ ಬೈಕ್‌ಗಳೆಂದರೆ ಎಲ್ಲಿಲ್ಲದ ಕ್ರೇಜ್‌. ಅದೇ ಬೈಕ್‌ ಅನ್ನು ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು, ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡರು. ಯುವಕನಾಗಿದ್ದಾಗ ಇದೇ ಯೆಜ್ಡಿ ಬೈಕ್‌ನಲ್ಲಿ ತಾವು ಮಾಡಿದ ಲಾಂಗ್ ರೈಡ್‌ಗಳನ್ನು ಹಾಗೂ ಆ ದಿನಗಳ ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದರು.

ಬೆಂಗಳೂರು ನಗರ ಕೇವಲ ಐಟಿ-ಬಿಟಿ, ಎಐ ಮತ್ತು ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ತನ್ನದೇ ಆದ ವಿಶಿಷ್ಟ ‘ಬೈಕ್-ರೈಡಿಂಗ್ ಕಲ್ಚರ್’ಗೂ ಜಗತ್ಪ್ರಸಿದ್ಧವಾಗಿದೆ. ಇಂದಿಗೂ ಉದ್ಯಾನ ನಗರಿಯ ಯುವಕರು ಮತ್ತು ಬೈಕ್ ಪ್ರೇಮಿಗಳ ಮನಸ್ಸಿನಲ್ಲಿ ಯೆಜ್ಡಿ ಬ್ರ್ಯಾಂಡ್ ತನ್ನದೇ ಆದ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದೆ. ಇದು ಯುವ ಜನರ ಸ್ವಾತಂತ್ರ್ಯ ಮತ್ತು ಆಕಾಂಕ್ಷೆಯ ಸಂಕೇತವಾಗಿಯೂ ಗುರುತಿಸಿಕೊಂಡಿದೆ.

ಸಂತಸ ಹಂಚಿಕೊಂಡ ಡಿ.ಕೆ. ಶಿವಕುಮಾರ್

ಬೆಂಗಳೂರಿನ ಸಫೀನಾ ಮೋಟಾರ್ಸ್‌ನ ಮುಖ್ಯಸ್ಥರಾದ ಫಿರೋಜ್ ಸತ್ತಾರ್ ಸೇಠ್‌ ಅವರು ಡಿಸಿಎಂ ಸ್ವಗೃಹದಲ್ಲಿ ಈ ಬೈಕ್ ಅನ್ನು ಡಿ.ಕೆ. ಶಿವಕುಮಾರ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಹಸ್ತಾಂತರಿಸಿದರು.

ತಮ್ಮ ನೆಚ್ಚಿನ ಬೈಕ್ ಅನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ಪಡೆದು ಮಾತನಾಡಿದ ಉಪಮುಖ್ಯಮಂತ್ರಿಗಳು, “ನನ್ನ ವಾಹನಗಳ ಕಲೆಕ್ಷನ್‌ಗೆ ಹೊಸ ಯೆಜ್ಡಿ ರೋಡ್‌ಸ್ಟರ್ ಸೇರ್ಪಡೆಯಾಗುತ್ತಿರುವುದು ನನಗೆ ಬಹಳ ಖುಷಿ ತಂದಿದೆ. ಶೀಘ್ರದಲ್ಲೇ ಈ ಬೈಕ್‌ನಲ್ಲಿ ರೈಡ್ ಹೋಗಲು ನಾನು ಕಾಯುತ್ತಿದ್ದೇನೆ. ಪ್ರತಿಯೊಬ್ಬ ನಿಜವಾದ ಬೈಕ್ ರೈಡರ್‌ನ ಆಕಾಂಕ್ಷೆ ಮತ್ತು ಸಾಧನೆಯನ್ನು ಪ್ರತಿನಿಧಿಸುವ ಇಂತಹ ಬ್ರ್ಯಾಂಡ್ ಅನ್ನು ನೋಡುವುದೇ ಒಂದು ಅದ್ಭುತ ಅನುಭವ,” ಎಂದು ತಮ್ಮ ಸಂತಸ ಹಂಚಿಕೊಂಡರು.

ಏನು ಈ ಬೈಕ್‌ನ ವಿಶೇಷತೆ?

ಡಿಸಿಎಂ ಅವರಿಗೆ ಉಡುಗೊರೆಯಾಗಿ ನೀಡಲಾಗಿರುವ ‘ಷಾಡೋ ಬ್ಲಾಕ್’ ಬಣ್ಣದ ಯೆಜ್ಡಿ ರೋಡ್‌ಸ್ಟರ್, ನೋಡುಗರಿಗೊಂದು ರಾಯಲ್ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ. ಇದು ಹಿಂದಿನ ಕಾಲದ ಸಾಂಪ್ರದಾಯಿಕ ವಿನ್ಯಾಸದೊಂದಿಗೆ, ಇಂದಿನ ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇಂದಿನ ಯುವ ಬೈಕ್ ಪ್ರೇಮಿಗಳನ್ನು ಸೆಳೆಯುವ ಎಲ್ಲಾ ಹೊಸ ಫೀಚರ್‌ಗಳೂ ಈ ಬೈಕ್‌ನಲ್ಲಿವೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಯೆಜ್ಡಿ ಸಂಸ್ಥೆಯು ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಈ ಹೊಸ ಬೈಕ್‌ನೊಂದಿಗೆ ಅವರು ಮತ್ತಷ್ಟು ಸ್ಮರಣೀಯ ರೈಡ್‌ಗಳನ್ನು ಮಾಡಲಿ ಎಂದು ಶುಭ ಹಾರೈಸಿದೆ.

Related Articles

Back to top button