Kannada NewsLatestNational

*ದೆಹಲಿಯಲ್ಲಿ ಪಿಜಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ*

ಮಾಲೀಕನ ವಿರುದ್ಧ ಪ್ರಕರಣ ದಾಖಲು

Home add -Advt

ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ಭಾನುವಾರ ಮಧ್ಯಾಹ್ನ ಸತ್ಯನಿಕೇತನ ಪ್ರದೇಶದಲ್ಲಿ ಸಂಭವಿಸಿದ ಪಿಜಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಐದು ಅಂತಸ್ತಿನ ಹಳೆಯ ಪಿಜಿ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದ್ದರು. ರಕ್ಷಣಾ ಕಾರ್ಯಾಚರಣೆ ಇಂದಿಗೂ ಮುಂದುವರೆದಿದ್ದು, ಈವರೆಗೆ 13 ಜನರನ್ನು ರಕ್ಷಿಸಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ದೆಹಲಿ ವಿವಿಯ ಸೌತ್ ಕ್ಯಾಂಪಸ್‌ನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮುಖ ವಸತಿ ಪ್ರದೇಶವಾಗಿರುವ ಸತ್ಯನಿಕೇತನದ ಕಿರಿದಾದ ರಸ್ತೆಯೊಂದರಲ್ಲಿ ಸುಮಾರು 30 ವರ್ಷ ಹಳೆಯ ಕಟ್ಟಡವಿತ್ತು. ಈ ಐದು ಅಂತಸ್ತಿನ ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಇಬ್ಬರಿಂದ ಮೂವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎನ್ನಲಾಗಿದೆ.

ವಾರಾಂತ್ಯವಾಗಿದ್ದರಿಂದ ಹಲವು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿರುವುದು ಮತ್ತಷ್ಟು ಪ್ರಾಣಹಾನಿಯಾಗುವುದನ್ನು ತಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಕಟ್ಟಡ ಆನಂದ್ ಬನ್ಸಾಲ್ ಎಂಬುವವರಿಗೆ ಸೇರಿದ್ದಾಗಿದ್ದು, ಕಟ್ಟಡ ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Related Articles

Back to top button