*ಶಾರುಖ್ ಖಾನ್ ಕೆರಳಿಸಿದ್ದ ಆ ಒಂದು ವಿಡಿಯೋ*: *ಇನ್ಫ್ಲುಯೆನ್ಸರ್ಗೆ ಕಾನೂನು ನೋಟಿಸ್*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ವಿಡಿಯೋ ಇದೀಗ ಕಾನೂನು ಸಮರಕ್ಕೆ ಕಾರಣವಾಗಿದೆ. ಸದ್ಗುರು ಕಾರ್ಯಕ್ರಮದಲ್ಲಿ ನಡೆದ ಸಂಭಾಷಣೆಯ ತುಣುಕೊಂದು ವಿವಾದದ ಕಿಡಿ ಹೊತ್ತಿಸಿದೆ. ವಿಡಿಯೋಗೆ ನೀಡಿದ ಕ್ಯಾಪ್ಶನ್ ನಟನ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೀಗ ವಿಡಿಯೋ ಹಂಚಿಕೊಂಡ ಇನ್ಫ್ಲುಯೆನ್ಸರ್ಗೆ ಶಾರುಖ್ ಪರ ವಕೀಲರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ಇತ್ತೀಚೆಗೆ ಸದ್ಗುರು ಅವರ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಜೊತೆ ಶಾರುಖ್ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಈ ವಿಡಿಯೋಗೆ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರು ನೀಡಿದ ಕ್ಯಾಪ್ಶನ್ ಈಗ ವಿವಾದಕ್ಕೆ ಕಾರಣವಾಗಿದೆ. ‘ಅನಂತ್ ಅಂಬಾನಿ ಶಾರುಖ್ಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ’ ಎಂಬರ್ಥದ ಕ್ಯಾಪ್ಶನ್ ಹಾಕಲಾಗಿತ್ತು. ಸಂಭಾಷಣೆಯ ಸಂದರ್ಭವನ್ನು ತಿರುಚಿ ತಪ್ಪು ಅರ್ಥ ಬರುವಂತೆ ಬಿಂಬಿಸಲಾಗಿದೆ ಎಂಬುದು ಶಾರುಖ್ ಪರ ವಕೀಲರ ಆರೋಪ.
ಈ ಪೋಸ್ಟ್ ದಾರಿತಪ್ಪಿಸುವಂತಿದ್ದು, ಶಾರುಖ್ ಖಾನ್ ಅವರ ಘನತೆ ಮತ್ತು ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 356ರ ಅಡಿಯಲ್ಲಿ ಮಾನನಷ್ಟ ನೋಟಿಸ್ ನೀಡಲಾಗಿದೆ. ಯಾವುದೇ ಪುರಾವೆಗಳಿಲ್ಲದೆ ಸಾರ್ವಜನಿಕ ವ್ಯಕ್ತಿಗಳ ಕುರಿತು ಸುಳ್ಳು ಮತ್ತು ಹಾನಿಕಾರಕ ಹೇಳಿಕೆಗಳನ್ನು ಪ್ರಸಾರ ಮಾಡುವುದು ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.
ನೋಟಿಸ್ ತಲುಪಿದ 48 ಗಂಟೆಗಳ ಒಳಗಾಗಿ ಐದು ಷರತ್ತುಗಳನ್ನು ಪಾಲಿಸುವಂತೆ ಸುವಿಜ್ಞಾ ಶರ್ಮಾ ಅವರಿಗೆ ಸೂಚಿಸಲಾಗಿದೆ. ವಿವಾದಾತ್ಮಕ ಇನ್ಸ್ಟಾಗ್ರಾಂ ರೀಲ್ ಅನ್ನು ತಕ್ಷಣವೇ ಅಳಿಸಬೇಕು. ಆಧಾರರಹಿತ ಮಾಹಿತಿಯನ್ನು ಮತ್ತೆ ಹಂಚಿಕೊಳ್ಳಬಾರದು. ವಿಡಿಯೋಗೆ ಸಂಬಂಧಿಸಿದ ಕ್ಯಾಪ್ಶನ್ ಮತ್ತು ಹೇಳಿಕೆಗಳನ್ನು ತೆಗೆದುಹಾಕಬೇಕು. ಮೂಲ ವಿಡಿಯೋ ತುಣುಕು ಹಾಗೂ ಪೋಸ್ಟ್ಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಬೇಕು. ಕೈಗೊಂಡ ಕ್ರಮಗಳ ಕುರಿತು ಲಿಖಿತ ದೃಢೀಕರಣವನ್ನೂ ನೀಡಬೇಕು ಎಂದು ಸೂಚಿಸಲಾಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಶಾರುಖ್ ಖಾನ್ ಸದ್ಯ ತಮ್ಮ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ಕಿಂಗ್’ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರ ತೆರೆಗೆ ಬರಲಿದೆ. ಇದೇ ಮೊದಲ ಬಾರಿಗೆ ಪುತ್ರಿ ಸುಹಾನಾ ಖಾನ್ ಜೊತೆ ಶಾರುಖ್ ತೆರೆ ಹಂಚಿಕೊಳ್ಳುತ್ತಿದ್ದಾರೆ.
ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಸಿನಿಮಾ ನಿರೀಕ್ಷೆಯ ನಡುವೆ ಶಾರುಖ್ ಅವರ ಈ ಕಾನೂನು ಸಮರ ಕೂಡ ಇದೀಗ ಸುದ್ದಿಯಾಗಿದೆ.




