*ಬೆಂಗಳೂರಿಗೆ ಡ್ರಗ್ಸ್ ಪಾರ್ಸೆಲ್ ಬಂದಿದ್ದೇಗೆ*: *ಪೊಲೀಸರ ದಾಳಿಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಜಾಲ*

ಪ್ರಗತಿವಾಹಿನಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತ್ಯೇಕ ದಾಳಿಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ಬರೋಬ್ಬರಿ 5.87 ಕೆಜಿ MDMA ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ದೆಹಲಿಯಿಂದ ವಿಮಾನದ ಮೂಲಕ ಡ್ರಗ್ಸ್ ತಂದು ಬೆಂಗಳೂರಿಗೆ ತಲುಪಿಸುತ್ತಿದ್ದ ಜಾಲದ ಸುಳಿವು ಇದೀಗ ಪೊಲೀಸರಿಗೆ ಸಿಕ್ಕಿದೆ.
ಕೆಂಚೇನಹಳ್ಳಿ ಬಳಿ ಕೆಲವರು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾರೆ ಎಂಬ ಮಾಹಿತಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಅವರಿಂದ 5.72 ಕೆಜಿ MDMA ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಗಂಗೊಂಡನಹಳ್ಳಿಯ 28 ವರ್ಷದ ಕಾರು ಮೆಕ್ಯಾನಿಕ್ ಇಮ್ರಾನ್ ಪಾಷಾ ಹಾಗೂ ಹೊಸಕೋಟೆಯ 27 ವರ್ಷದ ಆಯೇಷಾ ಸಿದ್ದಿಕಿ ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ, ನವದೆಹಲಿಯಿಂದ ಮಾದಕ ವಸ್ತುಗಳ ಪಾರ್ಸೆಲ್ ತಂದುಕೊಟ್ಟರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆರೋಪಿಗಳಿಗೆ ಆಮಿಷವೊಡ್ಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಅದರಂತೆ ಇಬ್ಬರೂ ವಿಮಾನದ ಮೂಲಕ ನವದೆಹಲಿಗೆ ತೆರಳಿ, ಅಲ್ಲಿನ ಪೂರೈಕೆದಾರರನ್ನು ಭೇಟಿಯಾಗಿ ಮಾದಕ ವಸ್ತುಗಳನ್ನು ಪಡೆದುಕೊಂಡಿದ್ದರು. ಬಳಿಕ ಹರಿಯಾಣ ನೋಂದಣಿ ಹೊಂದಿದ್ದ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ತಂದಿದ್ದರು ಎಂದು ತಿಳಿದುಬಂದಿದೆ.
ಆದರೆ, ಇವರಿಗೆ ಡ್ರಗ್ಸ್ ತಂದುಕೊಡಲು ಸೂಚನೆ ನೀಡಿದವರು ಯಾರು? ಬೆಂಗಳೂರಿನಲ್ಲಿ ಈ ಮಾದಕ ವಸ್ತುಗಳನ್ನು ಯಾರಿಗೆ ತಲುಪಿಸಬೇಕಿತ್ತು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನೊಂದೆಡೆ, ಭಾರತಿನಗರ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 150.43 ಗ್ರಾಂ MDMA ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ಹಣ ಸಂಪಾದಿಸುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.
ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಕೆಜಿ 870 ಗ್ರಾಂ MDMA ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಪೂರೈಕೆಯ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.


