Kannada NewsKarnataka NewsLatest

ಉಂಡೆ ಕೊಬ್ಬರಿ, ರಾಗಿ ಬೆಳೆಗಾರರ ನೆರವಿಗೆ ಬರಲು ಆಗ್ರಹ: ಟೂಡಾ ಶಶಿಧರ್ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದೆದುರು ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನೆರವಿಗೆ ಬರುವಂತೆ ಹಾಗೂ  ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಂದಲೂ ರಾಗಿ ಖರೀದಿಸಲು ಕ್ರಮ ವಹಿಸುವಂತೆ ಆಗ್ರಹಿಸಿ ತಿಪಟೂರಿನ  ಕಾಂಗ್ರೆಸ್ ಮುಖಂಡ ಸಿ. ಬಿ. ಟೂಡಾ ಶಶಿಧರ್ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬುಧವಾರ ಬೆಳಗಾವಿಗೆ ಆಗಮಿಸಿ ಸುವರ್ಣ ವಿಧಾನಸೌಧದೆದುರು ಪ್ರತಿಭಟನೆ ನಡೆಸುವ ಮೂಲಕ ಸರಕಾರದ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಟುಡಾ ಶಶಿಧರ್, “ತುಮಕೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು,ಬೆಂಗಳೂರು, ಶಿವಮೊಗ್ಗ ಜಿಲ್ಲೆಯ ರೈತರು ತೆಂಗನ್ನು ಹೆಚ್ಚುಬೆಳೆಯುತ್ತಾರೆ. ಇದರಲ್ಲಿ ತುಮಕೂರು ಜಿಲ್ಲೆಯ ರೈತರಿಗೆ ಸಂಪೂರ್ಣವಾಗಿ ತೆಂಗು ಆರ್ಥಿಕ ಬೆಳೆ ಹಾಗೂ ಅದೇ ಜೀವನಾಧಾರವಾಗಿದೆ. ಪ್ರಮುಖವಾಗಿ ತಿಪಟೂರು ರೈತರು ಬಲಿತ ತೆಂಗಿನ ಕಾಯಿಯಿಂದ ವಿಶ್ವದಲ್ಲೇ ಅತೀ ವಿಶಿಷ್ಟವಾದ ಉಂಡೆ ಕೊಬ್ಬರಿ ತಯಾರಿಸುತ್ತಾರೆ.  ಈ ರೀತಿ ತಯಾರಿಸಿದ  ಉಂಡೆ ಕೊಬ್ಬರಿಯನ್ನು ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಉಂಡೆ ಕೊಬ್ಬರಿಗೆ ಸಂಬಂಧಿಸಿದಂತೆ ತಿಪಟೂರಿನಲ್ಲಿ ಘೋಷಣೆಯಾದ ಟೆಂಡರ್ ಧಾರಣೆಯನ್ನೇ ಮೂಲಧಾರಣೆಯನ್ನಾಗಿ ರಾಜ್ಯಾದ್ಯಂತ ಪರಿಗಣಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಧಿಕ ಮಳೆಯಾಗಿ ಹಾಗೂ ಪ್ರಸ್ತುತ ಚಳಿಗಾಲ ಪ್ರಾರಂಭವಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಿ ನೈಸರ್ಗಿಕವಾಗಿ 9 ತಿಂಗಳಲ್ಲಿ ತಯಾರಾಗುವ ಒಣ ಉಂಡೆ ಕೊಬ್ಬರಿಯು 14-15 ತಿಂಗಳಾದರೂ ತಯಾರಾಗದೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶದಿಂದ ಕೂಡಿರುತ್ತದೆ. ತೆಂಗಿನಕಾಯಿಯನ್ನು ಕೊಬ್ಬರಿಯನ್ನಾಗಿಸಲು ಇನ್ನಷ್ಟು ದಿನ ಶೇಖರಣೆ ಮುಂದುವರಿಸಿದರೆ ಪ್ರಸ್ತುತ ಕಟಾವು ಮಾಡಿದ ತೆಂಗಿನಕಾಯಿಯನ್ನು ಶೇಖರಿಸಲು ರೈತರ ಬಳಿ ಸಾಕಷ್ಟು ಅಟ್ಟಗಳ ಲಭ್ಯತೆ ಇಲ್ಲ. ಇದರಿಂದಾಗಿ ರೈತರು ಈ ಹಿಂದೆ ಶೇಖರಿಸಿಟ್ಟ ಕೊಬ್ಬರಿಯ ತೇವಾಂಶ  ಹೆಚ್ಚಿದ್ದರೂ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ,” ಎಂದು ಅವರು ಸರಕಾದ ಗಮನಕ್ಕೆ ತಂದರು.

“2021 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಉಂಡೆ ಕೊಬ್ಬರಿಗೆ  ರೂ.16,730 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ  ರೂ.11,000ನಿಗದಿಪಡಿಸಿದೆ. ಈ ನಿಗದಿತ ಅವೈಜ್ಞಾನಿಕ  ಬೆಲೆಗೆ ರೈತರ ಹಿತದೃಷ್ಟಿಯಿಂದ ಆಕ್ಷೇಪಿಸಬೇಕಾದ  ರಾಜ್ಯ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಾಗಿದೆ,” ಎಂದು ಟೂಡಾ ಶಶಿಧರ್ ದೂರಿದರು.

“ಉಂಡೆ ಕೊಬ್ಬರಿ ಈವರೆಗೂ ಮಾರುಕಟ್ಟೆಯಲ್ಲಿ ರೂ.17 ರಿಂದ 18 ಸಾವಿರ ಬೆಲೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ರೂ.11,500 ಮಾರಾಟವಾಗುತ್ತಿದ್ದು, ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದಿಂದ ಗುಣಮಟ್ಟ ಕಳೆದುಕೊಂಡಿರುವ ಉಂಡೆಕೊಬ್ಬರಿಗೆ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಗೆ  ರೂ.3 ಸಾವಿರಪರಿಹಾರ ಮೊತ್ತವನ್ನು ಸಹಾಯಧನ ರೂಪದಲ್ಲಿ ಕೊಡಿಸಬೇಕು. ಇದರಿಂದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೊಂಚ ಮಟ್ಟಿಗಾದರೂ ಆಧಾರ ಸಿಗಲಿದೆ ಎಂದು,” ಟೂಡಾ ಶಶಿಧರ್ ಮನವಿ ಮಾಡಿದರು.

“2013-14 ರಲ್ಲಿ ಕೊಬ್ಬರಿ ಬೆಲೆ  ಕುಸಿತ ಕಂಡಾಗ ಅಂದಿನ ತಮ್ಮ ನೇತೃತ್ವದ  ಸರ್ಕಾರ ಕೊಬ್ಬರಿ ಬೆಳೆಗಾರರ ಬೆನ್ನಿಗೆ ನಿಂತು  ಒಂದು ಸಾವಿರ ರೂ. ಸಹಾಯಧನ ಘೋಷಿಸಿತ್ತು.  ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆ ಜಾರಿಗೆ ತಂದ ನಂತರ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನ  ಖರೀದಿಸುವ ವ್ಯಾಪಾರಸ್ಥರ ಸಂಖ್ಯೆ ತೀರ ಕ್ಷೀಣಿಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಮಾರುಕಟ್ಟೆಗಳು ನಶಿಸುತ್ತಿವೆ. ದೆಹಲಿಯ ರೈತ ಚಳವಳಿಯ ನಂತರ ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆಯನ್ನು ಹಿಂಪಡೆದರೂ, ರಾಜ್ಯದ ಈಗಿನ ರೈತ ವಿರೋಧಿ ಸರ್ಕಾರ ಹಳೆ ಕಾಯ್ದೆಯನ್ನು ಮತ್ತೆ ಜಾರಿಗೆ ತರುವಲ್ಲಿ ವಿಫಲವಾಗಿದೆ.   ಹೀಗಾಗಿ ರಾಜ್ಯದ ಸುಮಾರು 18 ಜಿಲ್ಲೆಗಳ ತೆಂಗು ಹಾಗೂ ಕೊಬ್ಬರಿ ಬೆಳೆಗಾರರ ಪರವಾಗಿ ಕಾಂಗ್ರೆಸ್ ಪಕ್ಷ ಬೆನ್ನೆಲುಬಾಗಿ ನಿಲ್ಲಬೇಕು,” ಎಂದು ಟುಡಾ ಶಶಿಧರ್ ಸರಕಾರಕ್ಕೆ ಮನವಿ ಮಾಡಿಕೊಡಿದ್ದಾರೆ.

ಇದೇ ವೇಳೆ ರಾಗಿ ಬೆಳೆಗಾರರ ಸಮಸ್ಯೆಗಳಿಗೂ ಸ್ಪಂದಿಸಲು ಆಗ್ರಹಿಸಿರುವ ಟುಡಾ ಶಶಿಧರ, ಸರಕಾರ ಪ್ರಸ್ತುತ ದೊಡ್ಡ ಹಿಡುವಳಿದಾರರಿಂದ ಮಾತ್ರ ರಾಗಿ ಖರೀದಿಸುತ್ತಿದೆ. ಸಣ್ಣ ಹಿಡುವಳಿದಾರರು (5 ಎಕರೆಗಿಂತ ಕಡಿಮೆ ಭೂಮಿ ಹೊಂದಿದವರು) ಮತ್ತು ಅತಿಸಣ್ಣ ಹಿಡುವಳಿದಾರರು (2 ಎಕರೆಗೂ ಕಡಿಮೆ ಭೂಮಿಯಿರುವರು) ಬೆಳೆದ ರಾಗಿಯನ್ನು ಸರಕಾರ ಖರೀದಿಸುತ್ತಿಲ್ಲ ಇದರ ಪರಿಣಾಮ ರಾಗಿ ಬೆಳೆದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಅನ್ಯಾಯವಾಗುತ್ತಿದ್ದು ಸರಕಾರ ಈ ಕೂಡಲೆ ತನ್ನ ನಿಯಮಾವಳಿ ಬದಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

*ಮಾತಿಗೆ ತಪ್ಪುವ ರೀತಿ ನಡೆದುಕೊಳ್ಳುತ್ತಿದ್ದಾರೆ; ಮೀಸಲಾತಿ ಘೋಷಿಸದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ*

https://pragati.taskdun.com/panchamasali2a-reservationbasava-jayamrutyunjaya-swamijibelagavi/

*ಬೆಸ್ಕಾಂ ಉದ್ಯೋಗದಲ್ಲಿ ಗೋಲ್ ಮಾಲ್; ಎಂಜಿನಿಯರ್ ಸೇರಿ 6 ಆರೋಪಿಗಳ ಬಂಧನ*

https://pragati.taskdun.com/bescom-scamchitradurga6-officers-arrrested/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button