ಪ್ರಗತಿವಾಹಿನಿ ಸುದ್ದಿ: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಸೆ. 15 ರಂದು ಬೀದರ್‌ನ ಬಸವ ಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೂ 2,500ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲಿದೆ. ಈ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಮಾನವ ಸರಪಳಿ ನಿರ್ಮಾಣವು ವಿನೂತನ ಪ್ರಯೋಗವಾಗಿದ್ದು, ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಜನರೂ ಒಟ್ಟಾಗಿ 2,500 ಕಿ.ಮೀ ಉದ್ದದವರೆಗೂ ಕೈಕೈ ಹಿಡಿದು ನಿಲ್ಲಲಿದ್ದಾರೆ. ಇದು ವಿಶ್ವದಾಖಲೆಯಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಅಸ್ಪೃಶ್ಯತೆ ನಿವಾರಣೆ ಮಾಡಿ, ಭ್ರಾತೃತ್ವ ಬೆಳೆಸಲು ಎಲ್ಲರೂ ಒಂದಾಗಿ ಸಮಾನತೆಯ ಹೆಜ್ಜೆ ಹಾಕುತ್ತಿದ್ದಾರೆ. ಈ ಸಮಯದಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಮಾತುಗಳು ಪ್ರತಿಧ್ವನಿಸಲಿವೆ. ಮಾನವ ಸರಪಳಿ ನಿರ್ಮಿಸುವ ರಸ್ತೆಯ ಉದ್ದಕ್ಕೂ ಗಿಡಗಳನ್ನೂ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವಿವಿಧ ಬಗೆಯ 10 ಲಕ್ಷ ಸಸಿಗಳನ್ನು ಸಿದ್ಧಪಡಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಆಯೋಜಿಸಿರುವ ಸರಪಳಿಯ ಸಂಯೋಜನೆಗೆ 32 ಇಲಾಖೆಗಳ ಸುಮಾರು ಎಂಟು ಲಕ್ಷಕ್ಕೂ ಅಧಿಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮಾನವ ಸರಪಳಿಯ ಸಂಪೂರ್ಣ ವೀಕ್ಷಣೆಗೆ ಸರ್ಕಾರ ವಿಶ್ವ ಸುಧಾರಿತ ತಂತ್ರಜ್ಞಾನ ಬಳಸುತ್ತಿದೆ. ಲಂಡನ್‌ನ ವಿಶ್ವ ದಾಖಲೆ ಪರಿಶೀಲಿಸುವ ತಂಡದ ಸದಸ್ಯರು ಉಪಸ್ಥಿತರಿದ್ದು, ವೀಕ್ಷಿಸಲಿದ್ದಾರೆ.
ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳನ್ನು ಒಳಗೊಂಡಿರುತ್ತದೆ. ಭಾಗವಹಿಸುವ ಮಕ್ಕಳು, ಜನರಿಗೆ ನೀರು, ಹಾಲು, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಗೆ ಸಂಚಾರ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ. ಸ್ಥಳೀಯರು ಸಹ ಎಲ್ಲೆಡೆ ಹಬ್ಬದಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ