Kannada NewsLatest

ರಾಹುಲ್ ಗಾಂಧಿಯವರ ಹೇಳಿಕೆಗೆ ಉಪಮುಖ್ಯಮಂತ್ರಿ ಸವದಿ ಅವರಿಂದ ಖಂಡನೆ.‌‌‌‌

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಅವರು ಹೇಳಿರುವುದು ತೀರಾ ಖಂಡನೀಯ ಎಂದು ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಮತ್ತು ಕೃಷಿ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿಯವರು ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಮುಖಂಡರಾಗಿದ್ದಾರೆ. ಅವರು ತಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡಬೇಕಿತ್ತು. ಇಂತ ಈ ರೀತಿ ಬೇಜವಾಬ್ದಾರಿಯಿಂದ ಮಾತನಾಡಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರದ ಗೌರವ ಮಣ್ಣುಪಾಲಾಗುತ್ತದೆ ಎಂಬ ಕನಿಷ್ಠ ತಿಳಿವಳಿಕೆ ಅವರಿಗೆ ಇಲ್ಲದಿರುವುದು ದುರ್ದೈವದ ಸಂಗತಿ ಎಂದರು.

ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಮುಂತಾದ ಸಾಮಾಜಿಕ ಪಿಡುಗುಗಳನ್ನು ಮಟ್ಟಹಾಕಲು ಎಲ್ಲಾ ಪಕ್ಷಗಳು ಸಂಘಟಿತವಾಗಿ ಹೋರಾಡುವುದು ಅಗತ್ಯವಾಗಿದೆ, ಅದನ್ನು ಬಿಟ್ಟು ಈ ರೀತಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ರೀತಿಯ ಸಮಸ್ಯೆಗಳಿದ್ದಾಗ ಪ್ರಚೋದನಕಾರಿ ಹೇಳಿಕೆ ನೀಡುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಹ ಪರಿಹಾರವಾಗುವುದಿಲ್ಲ. ಶ್ರೀ ಮೋದಿ ಅವರು ಹಿಂಸಾಚಾರದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಹಿಂದೆ ದೆಹಲಿಯಲ್ಲಿ ಸಿಕ್ ಜನಾಂಗದ ಮೇಲೆ ಅಮಾನುಷವಾಗಿ ಹಿಂಸಾಚಾರ ನಡೆಸಿದ್ದು ಯಾರು ಎಂಬುದನ್ನು ರಾಹುಲ್ ಗಾಂಧಿಯವರು ನೆನಪಿಸಿಕೊಂಡರೆ ಹಿಂಸಾವಾದಿಗಳು ಯಾರು ಎಂಬ ಸತ್ಯ ಬಯಲಾಗುತ್ತದೆ ಎಂದು ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button