ಅತ್ಯಂತ ವ್ಯವಸ್ಥಿತವಾಗಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ – ಲಕ್ಷ್ಮೀ ಹೆಬ್ಬಾಳಕರ್

ಕರಡಿಗುದ್ದಿಯಲ್ಲಿ ಸನ್ಮಾನ ಸ್ವೀಕರಿಸಿ ಸಚಿವರ ನುಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸನ್ನು ಹೊತ್ತುಕೊಂಡು ಕೆಲಸ ಮಾಡುತ್ತಿದ್ದೇನೆ. ಮಂತ್ರಿಯಾಗಿ ರಾಜ್ಯದ ಜವಾಬ್ದಾರಿಯೂ ಇರುವುದರಿಂದ ಯೋಜನೆಗಳನ್ನು ಜಾರಿಗೊಳಿಸಲು ಸ್ವಲ್ಪ ವಿಳಂಬವಾಗಬಹುದು. ಆದರೆ ನನ್ನ ಗುರಿಯಿಂದ ಎಂದಿಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮಸ್ಥರು ಏರ್ಪಡಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಶಾಸಕಿಯಾಗಿ ನಾನು ಮಾಡಿರುವ ಕೆಲಸ ನಿಮ್ಮ ಮುಂದಿದೆ. ಹಾಗಾಗಿಯೇ ನೀವೆಲ್ಲ ಅತ್ಯಧಿಕ ಬಹುಮತ ನೀಡಿ ಕಳೆದ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದೀರಿ. ನಿಮ್ಮಿಂದಾಗಿ ನಾನು ರಾಜ್ಯದ ಮಂತ್ರಿಯೂ ಆಗಿದ್ದೇನೆ. ಈಗ ಇಡೀ ರಾಜ್ಯದ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಅಂದ ಮಾತ್ರಕ್ಕೆ ಕ್ಷೇತ್ರವನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಇಲ್ಲಿನ ಕೆಲಸಗಳು ನಿರಂತರವಾಗಿ ಮುಂದುವರಿಯಲಿವೆ. ನಾನು ಹಾಕಿಕೊಂಡ ಗುರಿಯಿಂದ ಹಿಂದೆ ಸರಿಯುವ ಜಾಯಮಾನ ನನ್ನದಲ್ಲ. ಅತ್ಯಂತ ವ್ಯವಸ್ಥಿತವಾಗಿಯೇ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಜಡಿಸಿದ್ದೇಶ್ವರ ಅಜ್ಜನವರು, ಶಂಕರಗೌಡ ಪಾಟೀಲ, ಗಂಗಪ್ಪ ಮತ್ತಿಕೊಪ್ಪ, ಶಿವಾಜಿ ಕುರಿ, ಅಂಜನಾ ಅರಬಳ್ಳಿ, ಹಾಲಪ್ಪ ನೇಸರಗಿ, ರೂಪಾ ಸೊಗಲದ, ರೂಪಾ ಬೊರನ್ನವರ್, ಪಾರವ್ವ ಅರಬಳ್ಳಿ, ರೇಣುಕಾ ಕೆಂಪನ್ನವರ, ಶೀಲಾ ಪಾಟೀಲ, ಸೋಮಪ್ಪ ಮೂಕನವರ, ಬಾಬಾಗೌಡ ಪಾಟೀಲ, ಸರೋಜಿನಿ ಪಾಟೀಲ, ಅಶೋಕ ಮೂಕನವರ, ಸಿದ್ದಪ್ಪ ಚೌಗುಲಾ, ಶಂಕರ್ ಮುರಕಿಭಾವಿ, ಬಸವರಾಜ ರಾಚನ್ನವರ್, ಬಸವಣ್ಣೆಪ್ಪ ಅರಬಳ್ಳಿ, ಪ್ರಕಾಶ ಕಡ್ಯಾಗೋಳ, ಪಿಡಿಒ ಹರ್ಷವರ್ಧನ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ