ಪ್ರಗತಿವಾಹಿನಿ ಸುದ್ದಿ, ಗೋಕಾಕ: ಡಿ-೫ರಂದು ನಡೆದ ಉಪಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಗೋಕಾಕ ಕ್ಷೇತ್ರದ ಜನತೆಗೆ ಕೆಎಮ್ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಧನ್ಯವಾದ ಹೇಳಿದ್ದಾರೆ.
ಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಜಿಲ್ಲೆಯಲ್ಲಿಯೇ ಗೋಕಾಕ ಕ್ಷೇತ್ರವನ್ನು ಮಾದರಿಯನ್ನಾಗಿ ಪರಿವರ್ತಿಸುವ ಕೆಲಸವನ್ನು ನೂತನ ಶಾಸಕರು ಮಾಡಲಿದ್ದಾರೆಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ಉಪಚುನಾವಣೆಯ ಫಲಿತಾಂಶದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದಿನ ಮೂರುವರೆ ವರ್ಷಗಳ ಕಾಲ ಸ್ಥಿರ ಆಡಳಿತ ನೀಡಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ೧೫ ಸ್ಥಾನಗಳ ಪೈಕಿ ೧೨ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಯಡಿಯೂರಪ್ಪನವರಿಗೆ ಶಕ್ತಿ ನೀಡಿದ್ದಾರೆ. ಕರ್ನಾಟಕದ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆಂದು ಅವರು ಹೇಳಿದ್ದಾರೆ.
ಗೋಕಾಕ ಮತಕ್ಷೇತ್ರದ ಜನತೆಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಎಲ್ಲ ಹಿರಿಯರು ಹಾಗೂ ಆಯಾ ಸಮಾಜಗಳ ಮುಖಂಡರುಗಳ ಸಲಹೆ ಪಡೆದು ಕ್ಷೇತ್ರವನ್ನು ನಂದನವನವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಮೇಶ ಜಾರಕಿಹೊಳಿ ಅವರನ್ನು ೬ನೇ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಸ್ವಾತಂತ್ರ್ಯಾ ನಂತರ ಗೋಕಾಕ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಲು ಕಾರಣಿಕರ್ತರಾದ ಸಮಸ್ತ ಮತದಾರ ಬಂಧುಗಳು, ಪಕ್ಷದ ಎಲ್ಲ ನಾಯಕರು ಹಾಗೂ ಗೆಲುವಿಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿ, ಇನ್ನು ಮುಂದೆ ಗೋಕಾಕ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ