Kannada NewsKarnataka News

ಜನರಿಗೆ ದಿಗ್ಬಂಧನ ಹಾಕಿದ ಅಭಿವೃದ್ಧಿ ಕಾಮಗಾರಿಗಳು; ಜನರ ಕಾಳಜಿ ಇಲ್ಲದೆ ಕಾಮಗಾರಿ ನಿರ್ವಹಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಭಿವೃದ್ಧಿ ಬೇಕು, ನಿಜ. ಆದರೆ ಇದಕ್ಕಾಗಿ ಜನಸಾಮಾನ್ಯರು ಎಷ್ಟು ಬೆಲೆ ತೆರಬೇಕು? ಇಲ್ಲಿಯ ಚನ್ನಮ್ಮ ನಗರದ 2ನೇ ಸ್ಟೇಜ್ ಬಳಿ ಬಂದು ನೋಡಿದರೆ ಸಾಮಾನ್ಯ ಜ್ಞಾನವುಳ್ಳವರಿಗೂ ಅರ್ಥವಾಗುತ್ತಿದೆ, ಇಲ್ಲಿನ ಜನರ ಪಾಡು. ಆದರೆ ಕಾಮಗಾರಿ ನಿರ್ವಹಿಸುವವರಿಗೆ ಕಾಮನ್ ಸೆನ್ಸ್ ಇಲ್ಲ ಎನ್ನಬೇಕೋ, ಜವಾಬ್ದಾರಿಯೇ ಇಲ್ಲ ಎನ್ನಬೇಕೋ ಅರ್ಥವಾಗುತ್ತಿಲ್ಲ.

ಚನ್ನಮ್ಮ ನಗರದ 2ನೇ ಸ್ಟೇಜ್ ನಲ್ಲಿ ಸುಮಾರು 3 ತಿಂಗಳಿಂದ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಗಟಾರ ಕೆಲಸಗಳು ನಡೆಯುತ್ತಿವೆ. ಇಲ್ಲಿ 3 -4 ಒಳ ರಸ್ತೆಗಳಿವೆ. ವಿಚಿತ್ರವೆಂದರೆ ಎಲ್ಲ ಒಳ ರಸ್ತೆಗಳನ್ನೂ ಏಕಕಾಲಕ್ಕೆ ಬಂದ್ ಮಾಡುವ ಮೂಲಕ ಗುತ್ತಿಗೆದಾರರು ಜನರನ್ನು ಹಿಂಸಿಸುತ್ತಿದ್ದಾರೆ.

ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಜನರಿಗೆ ತೊಂದರೆಯಾಗುವುದು ಸಹಜ. ಜನರು ಇದನ್ನು ಸಹಿಸಲೂ ಸಿದ್ಧರಿರುತ್ತಾರೆ. ಆದರೆ ಚನ್ನಮ್ಮ ನಗರದಲ್ಲಿ ಆಗುತ್ತಿರುವುದೇ ಬೇರೆ. ಇಲ್ಲಿ ಕನಿಷ್ಟ ತೊಂದರೆ ಕೊಟ್ಟು ಕಾಮಗಾರಿ ನಿರ್ವಹಸಿಬೇೇಕೆನ್ನುವ ಇರಾದೆ ಗುತ್ತಿಗೆದಾರರಿಗೆ ಇದ್ದಂತಿಲ್ಲ. ಜನರೂ ಇಂದು ಮುಗಿಯಬಹುದು, ನಾಳೆ ಮುಂಗಿಯಬಹುದು ಎಂದು ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಜೊತೆಗೆ ಇದೀಗ ಎಲ್ ಆ್ಯಂಡಿ ಟಿ ಕಂಪನಿಯ ಪೈಪ್ ಲೈನ್ ಕಾಮಗಾರಿ ಆರಂಭವಾಗಿದ್ದು, ಅವರು ಮುಖ್ಯ ರಸ್ತೆಯನ್ನೇ ಬಂದ್ ಮಾಡಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

  1. ಇಲ್ಲಿ ಒಂದೊಂದಾಗಿ ಗಟಾರ ಕೆಲಸ ಮಾಡುತ್ತಿಲ್ಲ. ಎಲ್ಲ ಗಟಾರಗಳನ್ನೂ ಅರ್ಧಂಬರ್ಧ ಮಾಡಿ ಎಲ್ಲ ರಸ್ತೆಗಳನ್ನೂ ಸಾರ್ವಜನಿಕ ಸಂಚಾರಕ್ಕೆ ಮುಕ್ತವಿಲ್ಲದಂತೆ ಮಾಡಲಾಗಿದೆ.
  2. ಕೆಲಸ ಮುಗಿದರೂ ಹಳೆಯ ಕಲ್ಲು, ಮಣ್ಣುಗಳನ್ನು ತೆಗೆದು ರಸ್ತೆಯನ್ನು ತೆರವುಗೊಳಿಸುತ್ತಿಲ್ಲ
  3. ಒಂದು ರಸ್ತೆ ಕೆಲಸ ಮಾಡುವಾಗ ಆ ರಸ್ತೆಯನ್ನಷ್ಟೇ ಬಂದ್ ಮಾಡುವ ಬದಲು 4 ರಸ್ತೆ ಕೂಡುವ ಸ್ಥಳದಲ್ಲಿ ಸಾಮಗ್ರಿ, ಯಂತ್ರೋಪಕರಣಗಳನ್ನು ಇಟ್ಟು ಎಲ್ಲ ನಾಲ್ಕೂ ರಸ್ತೆಗಳನ್ನೂ ಜನರು, ವಾಹನ ಸಂಚರಿಸದಂತೆ ಮಾಡಲಾಗುತ್ತಿದೆ.
  4. ರಸ್ತೆಯ ಮೇಲೆಯೇ ಕಬ್ಬಿಣದ ರಾಡ್ ಮತ್ತಿತರ ಸಾಮಗ್ರಿಗಳನ್ನು ಇಡಲಾಗುತ್ತಿದೆ. ಇದು ಜನಸಾಮಾನ್ಯರಿಗಷ್ಟೇ ಅಲ್ಲ, ಇಲ್ಲಿರುವ ಸರಕಾರಿ ಕನ್ನಡ ಶಾಲೆಗೆ ಬರುವ ನೂರಾರು ಪುಟಾಣಿ ಮಕ್ಕಳಿಗೂ ಹಿಂಸೆಯಾಗಿದೆ. ಮಕ್ಕಳ ಕಾಲಿಗೆ ರಾಡ್ ಗಳು ತಾಗಿದರೆ ಯಾರು ಜವಾಬ್ದಾರರು?
  5. ಗಟಾರ, ಗಟಾರದಿಂದ ಎತ್ತಿ ಹಾಕಿರುವ ಕಲ್ಲು, ಮಣ್ಣಿನ ದಿಬ್ಬದಿಂದಾಗಿ ಸಣ್ಣ ಸಣ್ಣ ಮಕ್ಕಳು ದಿನವೂ ಎದ್ದು ಬಿದ್ದು ಹೋಗುತ್ತಿದ್ದಾರೆ.
  6. ಶಾಲೆಗೆ ಸೈಕಲ್ ಮೇಲೆ ಬರುವ ಮಕ್ಕಳ ಪಾಡಂತೂ ಹೇಳತೀರದು. ಶಾಲೆ ಸಂಪರ್ಕಿಸುವ ಯಾವುದೇ ರಸ್ತೆ ಮುಕ್ತವಾಗಿಲ್ಲ.
  7. ರಸ್ತೆಯ ಮಧ್ಯೆಯೇ ಕಾಂಕ್ರಿಟ್ ಗಳನ್ನು ಮಿಕ್ಸ್ ಮಾಡುವ ಮೂಲಕ ರಸ್ತೆಯನ್ನು ಅನಗತ್ಯವಾಗಿ ಬಂದ್ ಮಾಡಿ ಜನರನ್ನು ಹಿಂಸಿಸಲಾಗುತ್ತಿದೆ.ರಸ್ತೆಬದಿಯಲ್ಲಿ ಕಾಂಕ್ರಿಟ್ಮಿಕ್ಸಿಂಗ್ ಅವಕಾಶವಿದ್ದರೂಹಾಗೆಮಾಡುತ್ತಿಲ್ಲ.
  8. 3 ತಿಂಗಳಿನಿಂದ ಸ್ಮಾರ್ಟ್ ಸಿಟಿ ಯೋಜನೆಯ ಈ ಕೆಲಸದಿಂದ ಜನರು ಹಿಂಸೆಗೊಳಲಾಗಿದ್ದರೆ ಇದೀಗ 3 -4 ದಿನದಿಂದ ಎಲ್ ಆ್ಯಂಡ್ ಟಿ ಕಂಪನಿಯವರು ನೀರಿನ ಪೈಪ್ ಲೈನ್ ಅಳವಡಿಸಲು ಮುಖ್ಯ ರಸ್ತೆಯನ್ನೂ ಬಂದ್ ಮಾಡಿದ್ದಾರೆ. ಒಳ ರಸ್ತೆಯಿಂದ ಹೇಗೋ ದಾಟಿ ಹೊರ ಬಂದರೆ ಮುಖ್ಯರಸ್ತೆಯೇ ಬಂದ್ ಆಗಿದೆ.

ಇಲ್ಲಿನ ಜನರು ಇಷ್ಟು ದಿನ ಸಹಿಸಿಕೊಂಡಿದ್ದೇ ದಾರಾಳತನ ಎನ್ನಬಹುದು. ಆದರೆ ಕಾಮಗಾರಿ ನಿರ್ವಹಣೆ ಮಾಡುವ ಗುತ್ತಿಗೆದಾರರು, ಸುಪ್ರವೈಸರ್ ಮತ್ತು ಅಧಿಕಾರಿಗಳು ಜನರ ಕಷ್ಟದ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಗಳಾದರೂ ತಿಳಿಹೇಳುವ, ಜನರ ನೆರವಿಗೆ ಧಾವಿಸುವ ಅಗತ್ಯವಿದೆ.

ಶಹಬ್ಬಾಸ್ ಬೆಳಗಾವಿ CEN ಪೊಲೀಸ್!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button