*ಬೆಳಗಾವಿ: 18501 ನೇ ಸ್ವ-ಸಹಾಯ ಸಂಘ ಉದ್ಘಾಟಿಸಿದ ಡಾ:ವೀರೇಂದ್ರ ಹೆಗ್ಗಡೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 58, 000 ಸ್ವ-ಸಹಾಯ ಸಂಘಗಳಿವೆ. ಇದು ಸಂತಸದ ವಿಚಾರ. ನಾವು ದೇವರ ಮೇಲೆ ಅವಲಂಬನೆ ಮಾಡದೇ ದೇವರು ರಕ್ಷಣೆ ಮಾಡಬೇಕು, ತಂದೆ ತಾಯಿ ರಕ್ಷಣೆ ಮಾಡಬೇಕು, ಸರಕಾರ ರಕ್ಷಣೆ ಮಾಡಬೇಕು ಎಂದು, ಬೇರೆಯವರನ್ನು ಅವಲಂಬಿಸದೇ ನಾವೇ ಪ್ರಯತ್ನಶೀಲರಾಗಬೇಕು ಆ ಮೂಲಕ ನಮ್ಮ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಂಘ ಸಹಾಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ: ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಬೆಳಗಾವಿ ತಾಲ್ಲೂಕಿನ ಸಯಾನಕ ಲೆಔಟ್ ಹುಂಚಾನಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬೆಳಗಾವಿ 03 ಯೋಜನಾ ಕಛೇರಿ ಮತ್ತು 18501 ನೇ ಸ್ವ-ಸಹಾಯ ಸಂಘಗಳ ಉದ್ಘಾಟಣೆ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ಡಿ. ವೀರೇಂದ್ರ ಹೆಗ್ಗಡೆ, ಹಿಂದಿನ ದಿನಗಳಲ್ಲಿ ಹರಕು ಬಟ್ಟೆ ತಲೆ ಬಾಚದೇ ಬರುವಂತಹ ಬಡತನದ ದಿನಗಳು ದೂರಾಗಿ ಎಲ್ಲರೂ ಶಿಸ್ತಿನಿಂದ ಬಂದಿದ್ದು, ಎಲ್ಲರ ಹೃದಯದ ಬಡತನ ದೂರಾಗಿದೆ ಎಂದರು.

ಕಿತ್ತೂರ ಚೆನ್ನಮ್ಮ ಸಂಗೋಳ್ಳಿ ರಾಯಣ್ಣನ ಊರು ಗೊತ್ತಿಲ್ಲದಿದ್ದರೂ ಅವರ ಇತಿಹಾಸ, ಶೌರ್ಯ ಸಾಧನೆ ಕಥೆಗಳು ಗೊತ್ತಿದೆ ಈ ಜಿಲ್ಲೆ ಪ್ರಗತಿಪರ ಜಿಲ್ಲೆಯಾಗಿದ್ದು, 58,000 ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು, 70 ಕೋಟಿ ಉಳಿತಾಯ ಮಾಡಿರುತ್ತಾರೆ. ಮಕ್ಕಳಿಗೆ ಶಿಕ್ಷಣ ಒಳ್ಳೆಯ ಆಹಾರ ನೀಡಬೇಕು. ಭಾಗ್ಯದ ಪಾತ್ರೆಗೆ ಮಧ್ಯವ್ಯಸನದ ಸಣ್ಣ ತೂತಾದರೂ ಎಲ್ಲವೂ ಸೋರಿ ಹೋಗುತ್ತದೆ. ಸಂಘದ ಮೂಲಕ ಸಾಲ ಸೌಲಭ್ಯ ಪಡೆದು ಕುಟುಂಬದ ಅಭಿವೃದ್ಧಿಗೆ ಸಂಘವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಮಾತನಾಡಿ, ಪೂಜ್ಯರ ಸಂಘದ ಕಲ್ಪನೆಯಿಂದ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳೇ ಹಣ ನೀಡುವವರೆಗೆ ಆರ್ಥಿಕ ಸಬಲರಾಗಿರುತ್ತಾರೆ. ರಾಜ್ಯಾದ್ಯಂತ ಅನೇಕ ರೀತಿಯಲ್ಲಿ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪೂಜ್ಯರು ನೋಬೆಲ್ ಪ್ರಶಸ್ತಿಗೆ ಅರ್ಹರು ಎಂದು ತಿಳಿಸಿದರು.
ಸಿಡ್ಬಿ ಸಾಲ ವಿತರಣೆಯನ್ನು ಬೆಳಗಾವಿ ಸಂಸದರಾದ ಮಂಗಳಾ ಸುರೇಶ ಅಂಗಡಿಯವರು ವಿತರಿಸಿ ಮಾತನಾಡಿದರು. ಕೆ ಎಲ್ ಇ ಕಾರ್ಯಾಧ್ಯಕ್ಷರಾದ ಪ್ರಭಾಕರ ಕೊರೆಯವರು ಪೂಜ್ಯ ಹೆಗ್ಗಡೆಯವರ ಕಾರ್ಯಗಳು ಅಭಿನಂದನೀಯವಾಗಿದೆ ಎಂದರು. ಕಾಯಕ್ರಮದಲ್ಲಿ ಬ್ಯಾಂಕ್ ಆಪ್ ಮಹಾರಾಷ್ಟ್ರ ವಲಯ ವ್ಯವಸ್ಥಾಪಕ ಸುಚೇತ್ ಡಿಸೋಜಾ, ಯೋಜನೆಯ ಟ್ರಸ್ಟಿ ಡಿ.ಸುರೇಂದ್ರಕುಮಾರ ಕುಲಸಚಿವರಾದ ಡಾ: ಶಿವಶಂಕರ ಕೆ, ಬಸವರಾಜ ಸೊಪ್ಪಿಮಠ,ಗಣ್ಯರಾದ ತುಕಾರಮ ತಾಮಳಗುಂಡಿ, ದೇವೇಂದ್ರ ಪಾಟೀಲ್, ಅಭಯ ಪ್ರಭು, ಕುಶಪ್ಪ ನಾಯಕ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಉಪಸ್ಥಿತರಿದ್ದರು,ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಸ್ವಾಗತಿಸಿದರು, ಯೋಜನಾಧಿಕಾರಿ ನಾಗರಾಜ ಹದ್ಲಿ ನಿರೂಪಿಸಿದರು, ಯೋಜನಾಧಿಕಾರಿ ಜ್ಯೋತಿ ಜೋಳದ ವಂದಿಸಿದರು ಕಾರ್ಯಕ್ರಮದಲ್ಲಿ ಯೋಜನೆಯ ಸಂಘದ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ