
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ಸಬಲೀಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಸಂಪನ್ಮೂಲ ವ್ಯಕ್ತಿ, ರಹವಾಸಿಗರ ಸಂಘ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದರು.
ಅವರು ಅಲಾರವಾಡ ಜೈನ ಮಂದಿರದ ಸಭಾಭವನದಲ್ಲಿ ಖಾಸಬಾಗದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ವಿಚಾರಗೋಷ್ಠಿ, ೨೦೧ ಸೆಲ್ಕೋ ಸೋಲಾರ್ ಘಟಕ ಹಸ್ತಾಂತರ ಹಾಗೂ ೩೦೦೧ನೇ ಸ್ವ ಸಹಾಯ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ಮಾತ್ರ ಸಬಲರೆನಿಸಲು ಸಾಧ್ಯ.
ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನಿರ್ವಹಿಸುತ್ತಿರುವ ಪಾತ್ರ ಮಹತ್ತರವಾಗಿದೆ. ಮಹಿಳೆ ಕೇವಲ ಅಡುಗೆ ಕೆಲಸಕ್ಕೆ ಸೀಮಿತವೆಂಬ ಭಾವನೆ ಇದ್ದ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಮುಂಚೂಣಿಗೆ ತರುವ ಕೆಲಸ ಸಂಘದಿಂದಾಗಿರುವುದು ಅಭಿನಂದನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಹಿಳಾ ಸಬಲೀಕರಣವೇ ಮುಖ್ಯ ಗುರಿಯಾಗಿ ಮುಂದುವರಿದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಡಾ. ವೀರೇಂದ್ರ ಹೆಗ್ಗಡೆ ದಂಪತಿ ಕೃಪಾಶೀರ್ವಾದದಿಂದ ನಾಡಿನ ಮೂಲೆಮೂಲೆಗಳಲ್ಲಿ ತನ್ನ ಸೇವೆಯನ್ನು ಯಶಸ್ವಿಯಾಗಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗೆ ಸಂಘವು ಬದ್ಧವಾಗಿದೆ ಎಂದರು.
ಅಲಾರವಾಡ ಪಂಚಕಮಿಟಿ ಸದಸ್ಯ ಬಾಹುಬಲಿ ಜನಗೌಡ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಸಂಘದ ನಿರ್ದೇಶಕ ಪ್ರದೀಪ ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿನಂದನ ಪಾಟೀಲ ವೇದಿಕೆಯಲ್ಲಿದ್ದರು. ಧರ್ಮಸ್ಥಳ ಸಂಘದ ಕ್ಷೇತ್ರ ವ್ಯವಸ್ಥಾಪಕ ವಿನಾಯಕ ಹೆಗಡೆ ಸೆಲ್ಕೊ ಸೋಲಾರ್ ಘಟಕಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಮಂಜುನಾಥ ಎನ್.ಆರ್. ಸ್ವಾಗತಿಸಿದರು. ರಾಕಾ ಪೂಜಾರಿ ವಂದಿಸಿದರು. ಗಂಗೂಬಾಯಿ ಜಗತಾಪ ನಿರೂಪಿಸಿದರು. ಸೇವಾ ಪ್ರತಿನಿ ಭಾರತಿ ಜನಗೌಡ, ಅಲಾರವಾಡದ ಪದ್ಮಾವತಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ