ಧಾರವಾಡ: 3 ದಿನಗಳ ಸಂಗೀತ ಕಾರ್ಯಕ್ರಮ ಆರಂಭ

 

ಪ್ರಗತಿವಾಹಿನಿ ಸುದ್ದಿ, ಧಾರವಾಡ: ಭಾರತೀಯ ಸಂಗೀತ ವಿದ್ಯಾಲಯದ ಸ್ಥಾಪಕರು ಹಾಗೂ ಸಂಗೀತ ಲೋಕದ ದಿಗ್ಗಜ ಸಿತಾರ ವಾದಕ, ಧಾರವಾಡ ಘರಾಣದ “ಸಿತಾರ ರತ್ನ” ರಹಿಮತ್ ಖಾನ್ ಅವರ 68 ನೇ ಪುಣ್ಯ ತಿಥಿಯ ಅಂಗವಾಗಿ, ಧಾರವಾಡದ ಸೃಜನಾ: ಅಣ್ಣಾಜಿ ರಾವ್ ಸಿರೂರ ರಂಗಮಂದಿರದಲ್ಲಿ ಸಂಗೀತ ಕಾರ್ಯಕ್ರಮವನ್ನು ಮೂರು ದಿನಗಳವರೆಗೆ, ಪ್ರತಿ ದಿನ ಸಂಜೆ 5.30 ರಿಂದ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಸಂಗೀತ ವಿದ್ವಾಂಸ ಪಂಡಿತ್ ಶ್ರೀ ಓಂಕಾರ್  ನಾಗರಾಜರಾವ್  ಹವಾಲ್ದಾರ್ ಅವರಿಂದ ಕಾರ್ಯಕ್ರಮ ಆರಂಭವಾಯಿತು. ತಬಲಾ ವಾದಕ ಶ್ರೀಧರ ಮಾಂಡ್ರೆ ಹಾಗೂ ಹಾರ್ಮೋನಿಯಂ ವಾದಕ ಸಮೀರ್ ಹವಾಲ್ದಾರ್ ಸಾಥ್ ನೀಡಿದರು.

ಮೂಲತಃ ಬೆಳಗಾವಿಯವರಾದ ಪುಣೆಯ ಖ್ಯಾತ ಕೊಳಲು ವಾದಕ ರಾಜೇಂದ್ರ ಕುಲಕರ್ಣಿಯವರಿಂದ ಅದ್ಭುತ ಸಂಗೀತ ಲಹರಿ ಮನಸೂರೆಗೊಂಡಿತು. ರಘುನಾಥರಾವ್ ನಾಕೋಡ ತಬಲಾ ಸಾತ್ ನೀಡಿದರು.

ಶನಿವಾರ ಸಂಜೆ 5.30ಕ್ಕೆ ಪುಣೆಯ ಹಿಂದೂಸ್ತಾನಿ ಗಾಯಕಿ ಶಾಶ್ವತಿ ಚೌಹಾಣ್ ಅವರ ಸಂಗೀತ ಕಾರ್ಯಕ್ರಮವಿದ್ದು, ಇವರಿಗೆ ಶ್ರೀಧರ ಮಾಂಡ್ರೆ (ತಬಲಾ) ಮತ್ತು  ಬಸವರಾಜ ಹಿರೇಮಠ (ಹಾರ್ಮೋನಿಯಂ)  ಅವರು ಸಾಥ್ ನೀಡಲಿದ್ದಾರೆ. ಅದಾದ ನಂತರ ನಂತರ ವಿದ್ವಾನ್ ನಾಗರಾಜ್ ಮತ್ತು ಮಂಜುನಾಥ್ ರ ಪಿಟೀಲು ವಾದ್ಯದ ಜುಗಲ್ಬಂದಿ ನಡೆಯಲಿದೆ. ವಿದ್ವಾನ್ ಜಯಚಂದ್ರರಾವ್ ಮೃದಂಗದಲ್ಲಿ ಮತ್ತು ರಾಜೇಂದ್ರ ನಾಕೋಡ್ ತಬಲಾದಲ್ಲಿ ದ್ವಂದ್ವ ವಾದನ ನಡೆಸಿಕೊಡಲಿದ್ದಾರೆ.
ಭಾನುವಾರ ಬೆಳಿಗ್ಗೆ 9.30ಕ್ಕೆ ಪುಣೆಯ ಉಸ್ತಾದ್ ರಯೀಸ್ ಬಾಲೇಖಾನ್ ಅವರಿಂದ ಗಾಯನವಿದೆ. ಉಸ್ತಾದ್ ಉದಯ್ ಕುಲಕರ್ಣಿ (ತಬಲಾ) ಮತ್ತು ಗುರುಪ್ರಸಾದ್ ಹೆಗ್ಡೆ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ನಂತರ ಬೆಂಗಳೂರಿನ ವಿದುಷಿ ಪ್ರಿಯಾ ಗಣೇಶ್, ವಿದ್ವಾನ್ ಅನಿಲ್‌ಕುಮಾರ್, ಅವನಿ ಮತ್ತು ಶಾಲೋಮಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ಗಂಟೆಗೆ ಶಿವಮೊಗ್ಗದ ನೌಶಾದ್ ಮತ್ತು ನಿಶಾರ್ ಹರ್ಲಾಪುರ ಅವರ ಗಾಯನ ಜುಗಲ್ಬಂದಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಉಸ್ತಾದ್ ನಿಸ್ಸಾರ್ ಅಹಮದ್ ತಬಲಾ ಮತ್ತು ಬಸವರಾಜ ಹಿರೇಮಠ ಹಾರ್ಮೋನಿಯಂ ವಾದನವಿದೆ. ಇದಾದ ಮೇಲೆ ಮಂಗಳೂರಿನ ಉಸ್ತಾದ್ ರಫೀಕ್ ಖಾನ್  ಮತ್ತು ಭೋಪಾಲ್ ನ ಸತ್ಯೇಂದ್ರ ಸೋಲಂಕಿ ಅವರು, ರಾಜೇಂದ್ರ ನಾಕೋಡ್ ತಬಲಾ ವಾದನದೊಂದಿಗೆ ಸಿತಾರ್ ಮತ್ತು ಸಂತೂರ್ ಜುಗಲ್ಬಂದಿ ನಡೆಸಿಕೊಡಲಿದ್ದಾರೆ. ಸಂಗೀತ ಪ್ರಿಯರಿಗೆ ಮೂರು ದಿನಗಳ ಕಾಲ ಸಂಗೀತ ಸುಧೆಯನ್ನು ಉಣ ಬಡಿಸಲಿದ್ದಾರೆ.
https://pragati.taskdun.com/belagaviramadurgacm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button