Kannada NewsKarnataka News

ಜೂ.16ರಂದು ಸಚಿವರಿಂದ ಶಿಥಿಲಗೊಂಡಿರುವ ಬ್ಯಾರೇಜ್ ವೀಕ್ಷಣೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕೊರೊನಾದಿಂದ ಸಂಕಷ್ಟದಲ್ಲಿರುವ ಗೋವಿನ ಜೋಳ ಬೆಳೆದಿರುವ ಬೆಳೆಗಾರರಿಗೆ ಸರಕಾರ 5000ರೂ.ಗಳ ಪರಿಹಾರದ ನೆರವು ಘೋಷಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 17,000 ರೈತರು ಗೋವಿನ ಜೋಳ ಬೆಳೆದ್ದಿದ್ದಾರೆ. ಕೃಷಿ ಇಲಾಖೆ ಗೋವಿನ ಜೋಳ ಬೆಳೆಗಾರರ ಯಾದಿ ತಯಾರಿಸಿದೆ. ಆ ಯಾದಿಯನ್ನು ಗ್ರಾಮ ಪಂಚಾಯಲ್ಲಿ ಪ್ರಕಟಿಸಲಿದ್ದು, ಆ ಯಾದಿಯಿಂದ ಹೆಸರು ಬಿಟ್ಟು ಹೋಗಿದ್ದಲ್ಲಿ ಅಂತಹ ರೈತರು ಅರ್ಜಿ ಸಲ್ಲಿಸಬೇಕು. ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರ ಯಾದಿಯನ್ನು ತೋಟಗಾರಿಕೆ ಇಲಾಖೆ ಸಂಗ್ರಹಿಸಿದ್ದು, ಆ ಯಾದಿಯನ್ನು ಗ್ರಾಮ ಪಂಚಾಯತಿಯಲ್ಲಿ ಪ್ರಕಟಿಸಲಿದೆ.
ರೈತರಿಗೆ ಕಳಪೆ ಬೀಜ ವಿತರಣೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವುದು ಮತ್ತು ಕಳಪೆ ಬೀಜ ಪೂರೈಕೆ ಮಾಡಿ ರೈತರಿಗೆ ಮೋಸ ಮಾಡಿರುವ ಬೀಜೋತ್ಪಾದನಾ ಕಂಪನಿಗಳನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವಂತೆ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೈಮಗ್ಗ ನೇಕಾರರಿಗೂ ಸರಕಾರ ಸಮ್ಮಾನ ಯೋಜನೆ ಘೋಷಣೆ ಮಾಡಿ 2000 ರೂ.ಗಳ ನೆರವು ನೀಡಲಿದೆ. ಸಾರಿಗೆ ಇಲಾಖೆ ಮುಖಾಂತರ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂ.ಗಳ ನೆರವು ಸರಕಾರ ನೀಡಲಿದ್ದು, ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ರೇಶನ್ ಕಾರ್ಡ ರಹಿತ 3416 ಕುಟುಂಬಗಳಿಗೆ 10 ಕೆ.ಜಿ.ಅಕ್ಕಿ ಮತ್ತು 2 ಕೆ.ಜಿ ಬೇಳೆ ವಿತರಣೆ ಮಾಡಲಿದೆ. ಕಾರ್ಮಿಕರು, ಮಡಿವಾಳರು ಮತ್ತು ಕ್ಷೌರಿಕರಿಗೂ ಸರಕಾರ ನೆರವು ಘೋಷಣೆ ಮಾಡಿದ್ದೆ
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯ ವಿಮೆ ಕಂಪನಿಗಳು ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಿಲ್ಲ. ಆದ್ದರಿಂದ ರೈತರಿಗೆ ಹಣ ಪಾವತಿಸದ ವಿಮಾ ಕಂಪನಿಗಳನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಜೂ. 16 ರಂದು 12 ಗಂಟೆಗೆ ಸಚಿವ ರಮೇಶ ಜಾರಕಿಹೋಳಿಯವರು ಕಲ್ಲೋಳ ಬ್ಯಾರೇಜ್‍ಗೆ ಭೇಟಿ ನೀಡಿ ಶಿಥಿಲಗೊಂಡಿರುವ ಬ್ಯಾರೇಜ್ ವೀಕ್ಷಣೆ ಮಾಡಲಿದ್ದು, ಖಡಕಲಾಟದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಕುರಿತು ಚರ್ಚಿಸಲು ಸಾರ್ವಜನಿಕರ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರವಿಂದ್ರ‌ ಕರಲಿಂಗನ್ನವರ, ತಹಶಿಲ್ದಾರ ಸುಭಾಷ್ ಸಂಪಗಾವಿ ‌ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button