*ಉಭಯ ರಾಜ್ಯಗಳ ಬಸ್ ಸಂಚಾರ ಪುನರಾರಂಭ ಕುರಿತು ಚರ್ಚೆ: ಬೆಳಗಾವಿ- ಕೋಲ್ಹಾಪುರ ಜಿಲ್ಲಾಧಿಕಾರಿಗಳ ಸಮನ್ವಯ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್ ಸಂಚಾರ ಪುನರಾರಂಭ ಕುರಿತು ಬೆಳಗಾವಿ-ಕೋಲ್ಹಾಪುರ ಜಿಲ್ಲಾಧಿಕಾರಿಗಳ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳ ವೀಡಿಯೋ ಸಂವಾದ ಸಭೆ ಜರುಗಿತು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಜರುಗಿದ ವೀಡಿಯೊ ಸಂವಾದ ಸಮನ್ವಯ ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಸಾರಿಗೆ ಸಂಸ್ಥೆಯ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಮಹಾರಾಷ್ಟ್ರ ಗಡಿ ಪ್ರದೇಶಗಳವರೆಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸಗಳು ಸಂಚರಿಸುತ್ತಿದ್ದು, ಅಲ್ಲಿಂದ ತಮ್ಮ ರಾಜ್ಯ ಸಾರಿಗೆ ಬಸ್ ಗಳ ಮೂಲಕ ಪ್ರಯಾಣಕರನ್ನು ಕರೆದೊಯ್ಯುವಂತೆ ಕೋಲ್ಹಾಪುರ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಸ್ ಗಳ ಮೇಲೆ ದಾಳಿ: ಕಾನೂನು ಕ್ರಮಕ್ಕೆ ಮನವಿ
ಉಭಯ ರಾಜ್ಯಗಳ ಸಾರಿಗೆ ಬಸ್ ಗಳ ಮೇಲೆ ದಾಳಿ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬಸ್ ಗಳ ಮೇಲೆ ದಾಳಿ ಮಾಡಿದವರ ಮೇಲೆ ರಾಜ್ಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ರೋಷನ್ ತಿಳಿಸಿದರು.
ಉಭಯ ರಾಜ್ಯಗಳ ನಡುವೆ ಸುಗಮ ಬಸ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎರಡು ದಿನಗಳೊಳಗಾಗಿ ಮಾರ್ಗಸೂಚಿಗಳನ್ನು ತಯಾರಿಸಲಾಗುವುದು ಎಂದು ಹೇಳಿದರು.
ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ಕುರಿತಂತೆ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆ ಜರುಗಿಸಿದ್ದು, ಶೀಘ್ರವೇ ಸುಗಮ ಬಸ್ ಸಂಚಾರಕ್ಕೆ ಕ್ರಮವಹಿಸಲಾಗುವುದು ಎಂದರು.
ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಸಾಂಗಲಿ ಜಿಲ್ಲೆಗಳ ಪೋಲಿಸ್ ವರಿಷ್ಠಾಧಿಕಾರಗಳೊಂದಿಗೆ ಚರ್ಚಿಸಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಸೂಕ್ತ ಬಂದೋಬಸ್ತ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಕೊಲ್ಲಾಪುರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.