Kannada NewsKarnataka News

ಬಿಗಿಭದ್ರತೆಯಲ್ಲಿ ಮತಕ್ಷೇತ್ರಗಳಿಗೆ ಇವಿಎಂ ರವಾನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಥಮ ರ್ಯಾಂಡಮೈಜೇಷನ್ ಬಳಿಕ ಕ್ಷೇತ್ರವಾರು ಹಂಚಿಕೆಯಾಗಿರುವ ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಚುನಾವಣಾ ಆಯೋಗದ‌ ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಿಗೆ ಬಿಗಿಭದ್ರತೆಯೊಂದಿಗೆ ರವಾನೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇಲ್ಲಿನ ಹಿಂಡಲಗಾ ಗ್ರಾಮದಲ್ಲಿ ಇರುವ ಭಾರತ ಚುನಾವಣಾ ಆಯೋಗದ ಇವಿಎಂ ಉಗ್ರಾಣದಲ್ಲಿ ಇರುವ ಇವಿಎಂ ಗಳನ್ನು ರ್ಯಾಂಡಮೈಜೇಷನ್ ಪ್ರಕಾರ ಆಯಾ ಕ್ಷೇತ್ರಗಳಿಗೆ ರವಾನಿಸುವ ಪ್ರಕ್ರಿಯೆಯನ್ನು ಬುಧವಾರ (ಏ.5) ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ರ್ಯಾಂಡಮೈಜೇಷನ್ ನಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿರುವ 5321 ಬ್ಯಾಲೆಟ್ ಯುನಿಟ್ 5321 ಕಂಟ್ರೋಲ್ ಯುನಿಟ್ ಹಾಗೂ 5765 ವಿವಿಪ್ಯಾಟ್ ಗಳನ್ನು ಆಯಾ ಮತಕ್ಷೇತ್ರದ ಸಂಖ್ಯೆ ಮತ್ತು ಹೆಸರುಗಳನ್ನು ಹೊಂದಿರುವ ಸ್ಟಿಕ್ಕರ್ ಗಳನ್ನು ಅಂಟಿಸಿ ದೊಡ್ಟ ಟ್ರಂಕ್ ಗಳಲ್ಲಿ ಭದ್ರಪಡಿಸಿ ಸೀಲ್ ಮಾಡಿದ ಬಳಿಕ ಮತಕ್ಷೇತ್ರಗಳಿಗೆ ಕಳುಹಿಸಲಾಗುತ್ತದೆ. 

ಪೊಲೀಸ್ ಬಿಗಿಭದ್ರತೆಯೊಂದಿಗೆ ಜಿಪಿಎಸ್ ಅಳವಡಿಸಿದ ಕಂಟೇನರ್ ವಾಹನಗಳಲ್ಲಿ ಇವಿಎಂ ಗಳನ್ನು ಸಾಗಿಸಲಾಗುತ್ತದೆ ಎಂದು ವಿವರಿಸಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೂಡ ಉಪಸ್ಥಿತರಿದ್ದು, ಇವಿಎಂ ಸಾಗಾಣಿಕೆ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗಿರುತ್ತದೆ ಎಂದರು.

ಪ್ರತಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯಾ ಚುನಾವಣಾಧಿಕಾರಿಗಳ ನೇತೃತ್ವದ ತಂಡಗಳು ರ್ಯಾಂಡಮೈಜೇಷನ್ ಪ್ರಕಾರ ತಮಗೆ ಹಂಚಿಕೆಯಾಗಿರುವ ಇವಿಎಂ ಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಅನುಕ್ರಮ ಸಂಖ್ಯೆಗೆ ಅನುಗುಣವಾಗಿ ಉಗ್ರಾಣದಲ್ಲಿ ಪಡೆದುಕೊಂಡರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಸ್ವತಃ ಪ್ರತಿಯೊಂದು ಕ್ಷೇತ್ರದ ಪ್ರತ್ಯೇಕ ಕೌಂಟರ್ ಗಳಿಗೆ ಕೆಲಹೊತ್ತು ತೆರಳಿ, ವಿದ್ಯುನ್ಮಾನ ಮತಯಂತ್ರಗಳ ಕ್ರಮ ಸಂಖ್ಯೆಗಳನ್ನು ಪರಿಶೀಲಿಸಿ ವಿತರಿಸಿದರು.

ಈ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿವಿಧ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಗೀತಾ ಕೌಲಗಿ, ಡಾ. ರಾಜೀವ್ ಕೂಲೇರ, ಡಾ.ರುದ್ರೇಶ್ ಘಾಳಿ, ಬಲರಾಮ್ ಚವಾಣ, ರಾಜಶೇಖರ್ ಡಂಬಳ ಸೇರಿದಂತೆ ನೋಡಲ್ ಅಧಿಕಾರಿಗಳಾದ ಪ್ರೀತಂ‌ ನಸಲಾಪುರೆ ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/vidhanasabha-electionbelagavinitesh-patilevm/
https://pragati.taskdun.com/huge-amount-of-cash-seized-near-belgaum/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button