Kannada NewsKarnataka News

ಗ್ರಾಮದೇವತೆಗೆ ಸೇರಿದ ಆಸ್ತಿ ಬಳಕೆ ವಿವಾದ: ಚಿಗುಳೆ ಗ್ರಾಮದಲ್ಲಿ ಹಿಂಸಾಚಾರ; 25 ಗ್ರಾಮಸ್ಥರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಮ್ಮೂರಿನ ಗ್ರಾಮದೇವತೆಗೆ ಸೇರಿದ ಕೃಷಿ ಭೂಮಿ ಬಳಕೆ ಮಾಡುವಲ್ಲಿ ಗ್ರಾಮದ
ಎರಡು ಗುಂಪುಗಳಲ್ಲಿ ಭುಗಿಲೆದ್ದ ಆಸ್ತಿ ವಿವಾದ ವಿಕೋಪಕ್ಕೆ ತಿರುಗಿದ್ದರಿಂದ ಉಂಟಾದ
ಹಿಂಸಾಚಾರದಲ್ಲಿ ಗ್ರಾಮದ 25 ನಾಗರಿಕರು ಗಾಯಗೊಂಡ ಘಟನೆ ತಾಲ್ಲೂಕಿನ ಜಾಂಬೋಟಿ ಹೋಬಳಿಯ
ಚಿಗುಳೆ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

ಗ್ರಾಮದೇವಿ ದೇವಾಲಯಕ್ಕೆ ಸೇರಿದ ಜಮೀನಿನ ಉಪಭೋಗ ಕುರಿತು ಗ್ರಾಮದ ಎರಡು
ಪಂಗಡಗಳಲ್ಲಿ ಶುರುವಾದ ವಾದ-ವಿವಾದಗಳು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಇಡೀ ಗ್ರಾಮ
ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಗ್ರಾಮದ ಐವರು ಮಹಿಳೆಯರು, ಹಿರಿಯ ನಾಗರಿಕರು
ಸೇರಿದಂತೆ ಒಟ್ಟು 25 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಖಾನಾಪುರ ಠಾಣೆಯ ಪೊಲೀಸರು
ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಚಿಗುಳೆ ಗ್ರಾಮದೇವತೆ ಮಾವುಲಿದೇವಿಯ ಒಡೆತನದ ಕೃಷಿ ಭೂಮಿಯನ್ನು ಗ್ರಾಮದ ಒಂದು
ಪಂಗಡಕ್ಕೆ ಸೇರಿದವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದರು. ಈ ಜಮೀನನ್ನು
ತಮಗೂ ಕೃಷಿ ಕಾರ್ಯಕ್ಕೆ ನೀಡುವಂತೆ ಗ್ರಾಮದ ಇನ್ನೊಂದು ಪಂಗಡ ಗ್ರಾಮದ ಹಿರಿಯರನ್ನು
ಆಗ್ರಹಿಸಿತ್ತು. ಗುರುವಾರ ವಿವಾದಿತ ಜಮೀನಿನಲ್ಲಿ ಗ್ರಾಮದ ಶಿವಾಜಿ ಚೌಗುಲೆ ಎಂಬಾತ
ತನ್ನ ದನಕರುಗಳನ್ನು ಮೇಯಲು ಬಿಟ್ಟದ್ದನ್ನು ಗಮನಿಸಿದ ಗ್ರಾಮದ ಅನಂತ ಗಾವಡೆ, ವಾಸುದೇವ
ಚೌಗುಲೆ ಹಾಗೂ ಇತರರು ಶಿವಾಜಿಗೆ ದನಕರುಗಳನ್ನು ಹೊಲದಲ್ಲಿ ಬಿಡದಂತೆ ಸೂಚಿಸಿದ್ದಾರೆ.
ಆದರೆ ಶಿವಾಜಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರಸ್ಪರ ಮಾತಿಗೆ ಮಾತು
ಬೆಳೆದಿದೆ. ಈ ವಿಷಯ ಗ್ರಾಮದಲ್ಲಿ ಹರಡಿದ್ದರಿಂದ ಗ್ರಾಮದ ಒಂದು ಪಂಗಡದ 20ಕ್ಕೂ
ಹೆಚ್ಚು ಜನರ ತಂಡ ಶಿವಾಜಿ ಮನೆಗೆ ತೆರಳಿ ಶಿವಾಜಿ ಹಾಗೂ ಅವರ ಕುಟುಂಬಸ್ಥರ ಮೇಲೆ
ಹಲ್ಲೆ ನಡೆಸಿದ್ದಾರೆ.
ಈ ವಿಷಯ ಶಿವಾಜಿ ಕುಟುಂಬದ ಇತರರಿಗೆ ತಿಳಿದು ಹಲ್ಲೆಯ ವಿಷಯ ಕಾಳ್ಗಿಚ್ಚಿನಂತೆ
ಹಬ್ಬಿದಾಗ ಗ್ರಾಮದ ಯುವಕರ ಪಡೆ ಗ್ರಾಮದ ಇನ್ನೊಂದು ಗುಂಪಿನವರ ಮೇಲೆ ಹಲ್ಲೆ ನಡೆಸಿದೆ.
ಒಂದು ಗುಂಪು ಗ್ರಾಮದ ಗೋಮಾಳ ಮತ್ತು ಶಿವಾಜಿ ಮನೆಯ ಮೇಲೆ ಪಟಾಕಿ ಸಿಡಿಸಿದೆ. ಇದರಿಂದ
ಉದ್ರೇಕಗೊಂಡ ಎರಡೂ ಗುಂಪಿನವರು ಪರಸ್ಪರ ಕೈ-ಕೈ ಮಿಲಾಯಿಸಿ ಕಿತ್ತಾಡಿಕೊಂಡಿದ್ದಾರೆ.
ಒಂದು ಗುಂಪಿನವರು ಇನ್ನೊಂದು ಗುಂಪಿನವರ ಮೇಲೆ ಕಾರದಪುಡಿ ಎರಚಿ ದಾಳಿ ನಡೆಸಿದ್ದಾರೆ.
ಯುವಕರು ಗ್ರಾಮದಲ್ಲಿ ಕಟ್ಟಿಗೆ ಹಿಡಿದು ಓಡಾಡಿ ಕಂಡ-ಕಂಡವರನ್ನು ಥಳಿಸಿದ್ದರು.

ಆಕಸ್ಮಿಕವಾಗಿ ನಡೆದ ಬೆಳವಣಿಗೆಗಳಿಂದ ಶಾಂತವಾಗಿದ್ದ ಚಿಗುಳೆ ಗ್ರಾಮ ರಣರಂಗವಾಗಿ
ಮಾರ್ಪಟ್ಟಿದ್ದು, ಎರಡೂ ಗುಂಪಿನವರ ನಡುವೆ ನಡೆದ ಹೊಡೆದಾಟದಲ್ಲಿ ಚೌಗುಲೆ ಕುಟುಂಬದ
ರಾಮ, ವಿನೋದ, ರಿಯಾ, ಮಹಾದೇವ, ಅಶೋಕ ಮತ್ತಿತರು ಗಾಯಗೊಂಡು ಬೆಳಗಾವಿ
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾವಡೆ ಕುಟುಂಬದ ಪ್ರಭಾವತಿ, ಮಹೇಶ, ಪ್ರತಾಪ, ಆನಂದ, ಸಹದೇವ, ಸುರೇಶ, ರೇಷ್ಮಾ, ದುಲಾಜಿ, ಅಮೀತ್ ಸೇರಿದಂತೆ
12ಕ್ಕೂ ಹೆಚ್ಚು ಜನರು ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡೂ ಗುಂಪಿನವರಿಂದ ದೂರು ಪಡೆದಿರುವ ಪೊಲೀಸರು ದೂರು-ಪ್ರತಿದೂರು
ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ
ಘಟನೆಯ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಹೊಡೆದಾಟದಲ್ಲಿ ನೇರವಾಗಿ
ಭಾಗಿಯಾದ ಎಂಟು ಜನರನ್ನು ಬಂಧಿಸಲಾಗಿದೆ. ಘಟನೆಯ ಮಾಹಿತಿ ಸಂಗ್ರಹಿಸುವ ಕಾರ್ಯ
ನಡೆದಿದ್ದು, ಘಟನೆಯಲ್ಲಿ ಭಾಗಿಯಾದ ಉಳಿದವರನ್ನೂ ಬಂಧಿಸಲಾಗುತ್ತದೆ ಎಂದು ಪೊಲೀಸ್
ಇಲಾಖೆಯ ಮೂಲಗಳು ತಿಳಿಸಿವೆ.

https://pragati.taskdun.com/kollapura144-sectionbelagavipolice-alert/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button