Belagavi NewsBelgaum NewsKannada NewsKarnataka NewsLatest

ಸೇತುವೆ ಶಿಥಿಲ: ಪರಿಶೀಲಿಸಿದ ಡಿಸಿ ನೇತೃತ್ವದ ಅಧಿಕಾರಿಗಳ ತಂಡ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕುಸಮಳಿ ಗ್ರಾಮದ ಬಳಿ ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿ ಮೇಲಿನ ಮಲಪ್ರಭಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಬೆಳಗಾವಿ ಡಿಸಿ ಮೊಹಮ್ಮದ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್.ಪಿ ಡಾ.ಭೀಮಾಶಂಕರ ಗುಳೇದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಸೇತುವೆಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿತು.

ಬೆಳಗಾವಿಯಿಂದ ಜಾಂಬೋಟಿ, ಕಣಕುಂಬಿ, ಚೋರ್ಲಾ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಲಪ್ರಭಾ ನದಿ ದಾಟಲು ಇರುವ ಪ್ರಮುಖ ಇದಾಗಿದ್ದು, ಇತ್ತೀಚಿನ ಮಳೆಗೆ ಈ ಸೇತುವೆ ಶಿಥಿಲಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು. ಜೊತೆಗೆ ಈ ಸೇತುವೆಯ ಮೂಲಕ ಭಾರೀ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದು ಅವರನ್ನು ಕೋರಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜು.೨೦ರಿಂದ ಈ ಸೇತುವೆಯ ಮೇಲೆ ೬ಕ್ಕಿಂತ ಹೆಚ್ಚು ಗಾಲಿಗಳ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶಿಸಿದ್ದರು. ಆದೇಶದ ಬಗ್ಗೆ ಮಾಹಿತಿ ಇಲ್ಲದ್ದರಿಂದ ಶನಿವಾರ ಮತ್ತು ಭಾನುವಾರ ಗೋವಾ ರಾಜ್ಯದಿಂದ ಅನೇಕ ಭಾರೀ ಗಾತ್ರದ ವಾಹನಗಳು ಸೇತುವೆಯ ಬಳಿ ಬಂದು ಸಾಲಾಗಿ ಗಂಟೇಗಟ್ಟಲೇ ನಿಂತಿದ್ದವು.

ಸರ್ಕಾರದ ಆದೇಶದ ಕುರಿತು ವಾಹನ ಚಾಲಕರಿಗೆ ವಿವರಿಸಿದ್ದ ಪೊಲೀಸರು ಸೇತುವೆಯ ಮೂಲಕ ಸಾಗಲು ಬಂದ ವಾಹನಗಳಿಗೆ ಪರ್ಯಾಯ ಮಾರ್ಗದ ಮೂಲಕ ತೆರಳಲು ಸೂಚಿಸಿದ್ದರು. ಈ ಸಂದರ್ಭದಲ್ಲಿ ಉಂಟಾದ ಜನಸಂದಣಿಯಿಂದಾಗಿ ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸಿದ್ದರು. ಜೊತೆಗೆ ಸ್ಥಳೀಯ ನಾಗರಿಕರು, ಪೊಲೀಸರು ಮತ್ತು ವಾಹನ ಚಾಲಕರ ನಡುವೆ ವಾಗ್ವಾದ ನಡೆದು ಪರಸ್ಪರ ಮಾತಿನ ಚಕಮಕಿ ಬೆಳೆದಿತ್ತು.

ಸೇತುವೆಯ ವಸ್ತುಸ್ಥಿತಿಯನ್ನು ಪರಿಶೀಲಿಸಲು ಭಾನುವಾರ ಸಂಜೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳೀಯ ನಾಗರಿಕರಿಂದ ಮತ್ತು ಸಂಬಂಧಿತ ಅಧಿಕಾರಿಗಳಿಂದ ಸೇತುವೆಯ ಸ್ಥಿತಿಗತಿ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ, ಪರ್ಯಾಯ ಮಾರ್ಗದ ವ್ಯವಸ್ಥೆ ಮತ್ತಿತರ ವಿಷಯಗಳನ್ನು ಚರ್ಚಿಸಿದರು.

ಜಾಂಬೋಟಿ ಮೂಲಕ ಗೋವಾ ರಾಜ್ಯವನ್ನು ಸಂಪರ‍್ಕಿಸುವ ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಅಪಘಾತ ತಡೆಯಲು ಅನುಸರಿಸಬೇಕಾದ ನಿಮಯಗಳ ಬಗ್ಗೆ ಅಧಿಕಾರಿಗಳಿಗೆ ಖಾನಾಪುರ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಹಾಗೂ ಇತರರು ವಿವರವಾದ ಮಾಹಿತಿ ನೀಡಿ ಈ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಖಾನಾಪುರ ಠಾಣೆಯ ಇನ್ಸಪೆಕ್ಟರ್ ಮಂಜುನಾಥ ನಾಯ್ಕ, ಸಿಬ್ಬಂದಿ ಜಯರಾಮ್ ಹಮ್ಮಣ್ಣವರ, ಬೆಳಗಾವಿ ಹೆಚ್ಚುವರಿ ಎಸ್.ಪಿ ಶೃತಿ, ಸಾಮಾಜಿಕ ಕಾರ್ಯಕರ್ತರಾದ ಮಹಾಂತೇಶ ರಾಹೂತ, ಮಹಾದೇವ ಕೋಳಿ, ಸುರೇಶ ಜಾಧವ, ವಿನಾಯಕ ಮುತಗೇಕರ, ಸುರೇಶ ದಂಡಗಲ, ಸಕ್ಕೂಬಾಯಿ ಪಾಟೀಲ, ಭೈರೂ ಪಾಟೀಲ ಮತ್ತಿತರರು ಇದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button