Karnataka NewsLatest

ಆಸ್ಟ್ರೇಲಿಯಾ ಸಿಡ್ನಿಯಲ್ಲಿ ದೀಪಾವಳಿ ಆಚರಣೆ;  ನೆರೆ ಸಂತ್ರಸ್ತರಿಗೆ ಸಾಂತ್ವನ 

ಆಸ್ಟ್ರೇಲಿಯಾ ಸಿಡ್ನಿ :   ಆಸ್ಟ್ರೇಲಿಯಾದ ಕಾರ್ಮಿಕ ಸಂಘಟನೆಗಳು ಸಿಡ್ನಿ ನಗರದಲ್ಲಿ ದೀಪಾವಳಿಯ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಭಾರತದಿಂದ ಬಂದಿರುವ ಎಲ್ಲಾ ಕಾರ್ಮಿಕ ಒಕ್ಕೂಟದ ಸದಸ್ಯರು ಭಾಗಿಯಾಗಿ ದೀಪಾವಳಿಯನ್ನು ಆಚರಿಸಿದರು.
 ಈ ಕಾರ್ಯಕ್ರಮದಲ್ಲಿ ಭಾರತದಿಂದ ಬಂದ ಸ್ವಾಮೀಜಿಯವರ ನೇತೃತ್ವ ದೊರಕಿರುವುದಕ್ಕೆ ಇಲ್ಲಿಯ ಜನ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದರು. ಭಾರತದ ಎಲ್ಲಾ ರಾಜ್ಯಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅಷ್ಟೇ ಅಲ್ಲದೆ ಇಲ್ಲಿಯ ಜನ ನಾಯಕರು ಮತ್ತು ನಾಯಕಿಯರು ಕೂಡ ಭಾಗವಹಿಸಿರುವುದು ವಿಶೇಷವಾಗಿತ್ತು.
ವಿಶೇಷವಾಗಿ ವೇದ ಮತ್ತು ಮಂತ್ರಗಳ ವಿವರಣೆಯನ್ನು ನೀಡಿ ಜ್ಯೋತಿಯನ್ನು ಪ್ರಜ್ವಲಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಾರತೀಯರೆಲ್ಲ ಇಲ್ಲಿ ಬಂದು ನೆಲೆನಿಂತು ತಮ್ಮ ಬದುಕನ್ನ ಕಟ್ಟಿಕೊಂಡಿದ್ದೀರಿ, ನಿಮಗೆಲ್ಲಾ ಒಳಿತಾಗಲಿ, ಇವತ್ತು ನಮ್ಮ ಭಾರತದಲ್ಲಿ ಅನೇಕ ಭಾಗಗಳಲ್ಲಿ ನೆರೆಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಅವರಿಗೂ ಕೂಡ ಧೈರ್ಯ ತುಂಬುವ ಕೆಲಸ ಅಷ್ಟೇ ಅಲ್ಲದೆ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸವನ್ನು ನೀವು ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ  ಕೂಡ ನೀವು ಸಹಕರಿಸುವ ಅವಶ್ಯಕತೆ ಇದೆ ಎಂದರು.
 ಈ ಸಂದರ್ಭದಲ್ಲಿ ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸರ್ವರಿಗೂ ದೀಪಾವಳಿಯ ವಿಶೇಷತೆಯನ್ನು ತಿಳಿಸಿದರು. ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ  ಸ್ವಾಮಿಗಳು ಭಾರತೀಯರನ್ನೆಲ್ಲ ಒಂದೇ ವೇದಿಕೆಯ ಮೇಲೆ ನೋಡಿ ಸಂತೋಷವನ್ನು ವ್ಯಕ್ತಪಡಿಸಿದರಲ್ಲದೆ, ನಮ್ಮ ಜನ ಇಲ್ಲಿ ಬಂದು ಅನೇಕರಿಗೆ ಮಾದರಿಯಾಗಿರುವುದು ವಿಶೇಷ ಎಂದರು.
ಬೇಬಿಮಠ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಮಹಾಸ್ವಾಮಿಗಳು ಈ ಕಾರ್ಯಕ್ರಮದಲ್ಲಿ ತುಂಬಾ ಭಾವುಕರಾಗಿ ನುಡಿದರು. ಸಿಡ್ನಿಯ ವಿಧಾನಸೌಧದ ವಿರೋಧ ಪಕ್ಷದ ನಾಯಕಿ ಜೋಡಿ ಮ್ಯಾಕಿ ಅವರು  ಮಾತನಾಡಿ ಭಾರತ ಎಂದರೆ ಇಡೀ ವಿಶ್ವಕ್ಕೆ ಮಾದರಿಯಾಗುತ್ತಿದೆ. ಭಾರತದಲ್ಲಿರುವ ಸಂತ ಮಹಾಂತರು, ಇವತ್ತು ಪ್ರಧಾನಿ ನರೇಂದ್ರ ಮೋದಿಯವರು ಇಡಿ ವಿಶ್ವಕ್ಕೆ ಮಾದರಿ ಆಗುತ್ತಿರುವುದು ಅಭಿಮಾನದ ಸಂಗತಿ ಎಂದರು.
ಡೆಪ್ಯುಟಿ ಸ್ಪಿಕರ್ ಶೌಕತ್ ಮುಸಲ್ಮಾನೆ ಮಾತನಾಡಿ,  ಭಾರತ ಭಾವೈಕ್ಯತೆಯ ಸಂದೇಶವನ್ನು ಸಾರಿದೆ.  ಅಲ್ಲದೆ ಇಲ್ಲಿರುವ ಎಲ್ಲಾ ಭಾರತೀಯರೂ ಕೂಡ ಆಸ್ಟ್ರೇಲಿಯನ್ನರ ಜೊತೆ ಬೆರೆತು ಆಸ್ಟ್ರೇಲಿಯನ್ನರೇ ಆಗಿ  ಎಲ್ಲರಿಗೂ ಕೂಡ ಪ್ರೀತಿಯನ್ನು  ಹಂಚುತ್ತಿದ್ದಾರೆ ಎಂದರು.
ನ್ಯೂ ಸೌಥ್ ವೇಲ್ಸ್ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಮಾಜಿ ವಿದೇಶಾಂಗ ಸಚಿವ ಬಾಬ್ ಕಾರ್, ನೇಥನ್ ರೀಸ್, ನಂದಕುಮಾರ್  ಸೇರಿದಂತೆ ಅನೇಕ ಮಹನೀಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿಡ್ನಿ ಕನ್ನಡ ಸಂಘದ ಅಧ್ಯಕ್ಷ  ವಿಜಯಕುಮಾರ್ ಹಲಗಲಿ ಅವರು ಎಲ್ಲರನ್ನು ಸ್ವಾಗತಿಸಿದರು.   ಅಲ್ಲಿರುವ ಭಾರತದ ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button