Kannada NewsKarnataka NewsLatestPolitics

*Exclussive* *ಡಿಕೆ ಬ್ರದರ್ಸ್ ವರ್ಸಸ್ ಜಾರಕಿಹೊಳಿ ಬ್ರದರ್ಸ್: ಮತ್ತೊಂದು ಬಿಗ್ ಫೈಟ್ ಗೆ ಕ್ಷಣಗಣನೆ*

M.K.Hegde

ಎಂ.ಕೆ.ಹೆಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕದ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ ಮತ್ತು ಜಾರಕಿಹೊಳಿ ಕುಟುಂಬದ ನಡುವಿನ ವೈರತ್ವ ನಿರಂತರ ಸುದ್ದಿಯಾಗುತ್ತಲೇ ಇರುತ್ತದೆ. ಪಕ್ಷ ಬೇರೆ ಬೇರೆ ಆದರೂ ಈ ವಿಷಯದಲ್ಲಿ ಪೂರ್ಣ ಜಾರಕಿಹೊಳಿ ಕುಟುಂಬ ಒಂದಾಗುತ್ತದೆ. ಪ್ರಸ್ತುತ ಕಾಂಗ್ರೆಸ್ ಸರಕಾರದಲ್ಲಿ ಪ್ರಭಾವಿ ಲೋಕೋಪಯೋಗಿ ಇಲಾಖೆಯ ಹೊಣೆ ಹೊತ್ತಿರುವ ಸತೀಶ್ ಜಾರಕಿಹೊಳಿ ಸಹ ತಮ್ಮ ಸಹೋದರರ ಬೆನ್ನಿಗೆ ನಿಲ್ಲುತ್ತ ಬಂದಿದ್ದಾರೆ.

ಹಿಂದೊಮ್ಮೆ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಹೊತ್ತಿದ ಕಿಡಿ ಬೃಹತ್ ಜ್ವಾಲೆಯಾಗಿ , ನಂತರದ ದಿನಗಳಲ್ಲಿ ಸರಕಾರವನ್ನೇ ಕಿತ್ತೆಸೆದಿದ್ದು ಇನ್ನೂ ಹಸಿರಾಗಿಯೇ ಇದೆ. ಅಂದಿನಿಂದ ಇಂದಿನವರೆಗೂ ಡಿ.ಕೆ. ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ಹಾವು- ಮುಂಗುಸಿ ರೀತಿಯಲ್ಲಿಯೇ ಕಾಣುತ್ತಾರೆ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಭಾಗವಾಗಿದ್ದರೂ ಡಿ.ಕೆ.ಶಿವಕುಮಾರ ವಿಷಯದಲ್ಲಿ ಅವರಿಗೆ ಒಳಗಿಂದೊಳಗೆ ಮುನಿಸು ಇದ್ದೇ ಇದೆ.

Home add -Advt

ಇದೀಗ ಕರ್ನಾಟಕ ಹಾಲು ಒಕ್ಕೂಟ (KMF) ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಣ ಸಜ್ಜಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಲು ಡಿ.ಕೆ.ಸುರೇಶ ಸಿದ್ದವಾಗಿದ್ದಾರೆ. ಅವರನ್ನು ಎದುರಿಸಲು ಮಾಜಿ ಸಚಿವ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಸಹ ಸಜ್ಜಾಗಿದ್ದಾರೆ. ಈ ಹಿಂದೆ ಕೆಎಂಎಫ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಜಾರಕಿಹೊಳಿ ಈ ಬಾರಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುವ ಸಲುವಾಗಿಯೇ ಬೆಳಗಾವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಬೇಕಾದರೆ ಯಾವುದಾದರೊಂದು ಜಿಲ್ಲಾ ಸಂಘದ ಅಧ್ಯಕ್ಷರಾಗಿರಬೇಕು ಎನ್ನುವ ನಿಯಮವಿದೆ. ಹಾಗಾಗಿ ಈ ಬಾರಿ ಬೆಳಗಾವಿ ಸಂಘಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಅವರು ಈ ಹಿಂದೆ ಹೇಳಿದ್ದರು.

ಕೆಎಂಎಫ್ ರಾಜಕೀಯ ರಹಿತವಾದ ಸಹಕಾರಿ ಸಂಸ್ಥೆ ಎಂದು ಹೇಳಲಾಗಿದ್ದರೂ ಯಾವತ್ತೂ ರಾಜಕೀಯ ಬಿಟ್ಟಿಲ್ಲ. ವಿಶೇಷವಾಗಿ ಸರಕಾರ ನಡೆಸುವ ಪಕ್ಷದ ಪ್ರತಿನಿಧಿಯೇ ಅಧ್ಯಕ್ಷರಾಗುತ್ತ ಬಂದಿದ್ದಾರೆ. ಆ ದೃಷ್ಟಿಯಿಂದ ನೋಡಿದರೆ ಕಾಂಗ್ರೆಸ್ ಗೆ ಹೆಚ್ಚು ಅವಕಾಶವಿದೆ. ಆದರೆ ವಿಷಯ ಅಷ್ಟು ಸುಲಭವಾಗಿಲ್ಲ. ಹಣ, ಸಂಬಂಧ ಸೇರಿದಂತೆ ಹಲವು ವಿಚಾರಗಳು ಇದರಲ್ಲಿ ಕೆಲಸ ಮಾಡುತ್ತವೆ. ಜೊತೆಗೆ ರಾಜ್ಯದ ಬೇರೆ ಬೇರೆ ಸಂಘಗಳ ಅಧ್ಯಕ್ಷರು ಯಾವ ಪಕ್ಷದ ಪರ ಒಲವುಳ್ಳವರು ಎನ್ನುವುದು ಪ್ರಮುಖವಾಗುತ್ತದೆ.

ಈ ಬಾರಿ ಸಧ್ಯದ ಸ್ಥಿತಿ ನೋಡಿದರೆ ಡಿ.ಕೆ.ಸುರೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಮಧ್ಯೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುವುದು ನಿಶ್ಚಿತ. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಜೊತೆಗೆ ಕೋಲಾಹಲವನ್ನೂ ಉಂಟು ಮಾಡಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದರೆ ಎಲ್ಲವೂ ಸರಿಯಾಗಿ ನಡೆಯಬಹುದು. ಸಧ್ಯಕ್ಕಂತೂ ಎಲ್ಲರನ್ನೂ ತುದಿಗಾಲ ಮೇಲೆ ನಿಲ್ಲಿಸಿದೆ.

Related Articles

Back to top button